ಲಾಹೋರ್: ಉಗ್ರರ ಉಪಟಳದ ನಡುವೆ ಸಾವು-ನೋವು ಹಾಗೂ ಆತಂಕದ ಪರಿಸ್ಥಿತಿಯಲ್ಲೇ ನಡೆದ ಪಾಕಿಸ್ತಾನದ ಚುನಾವಣೆ ಗುರುವಾರ ಮುಗಿದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ 24 ಗಂಟೆಗಳು ಕಳೆದಿದ್ದರೂ ಎಣಿಕೆ ಪೂರ್ಣಗೊಂಡಿಲ್ಲ. ಶುಕ್ರವಾರ ಎಣಿಕೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ರಾತ್ರಿಯೂ ಅಂತಿಮ ಫಲಿತಾಂಶ ಪೂರ್ತಿ ಪ್ರಕಟವಾಗಿಲ್ಲ. ಚುನಾವಣೆ ನಡೆದಿರುವ ಒಟ್ಟು 265 ಕ್ಷೇತ್ರಗಳ ಪೈಕಿ 224 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.
ಪಾಕಿಸ್ತಾನ ಚುನಾವಣಾ ಆಯೋಗದಿಂದ ಲಭ್ಯ ಮಾಹಿತಿ ಪ್ರಕಾರ ಮೂರು ಪ್ರಮುಖ ಪಕ್ಷಗಳ ನಡುವೆ ಪೈಪೋಟಿ ಕಂಡುಬಂದಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮುಂಚೂಣಿಯಲ್ಲಿ ಇರುವುದು ಕಂಡುಬಂದಿದೆ.
ಮತ್ತೊಂದೆಡೆ ಮೂರು ಸಲ ಪ್ರಧಾನಿ ಆಗಿರುವ ನವಾಜ್ ಷರೀಫ್ ತಮ್ಮ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷದ್ದೇ ಗೆಲುವು ಎಂದು ಸ್ವಯಂಘೋಷಣೆ ಮಾಡಿಕೊಂಡಿರುವುದರಿಂದ ಪಾಕ್ ಚುನಾವಣಾ ಫಲಿತಾಂಶ ಗೊಂದಲದಲ್ಲೇ ಇರುವಂತಾಗಿದೆ. ಇಮ್ರಾನ್ ಖಾನ್ ಜೈಲಿನಲ್ಲಿ ಇರುವುದರಿಂದ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ. ಹೀಗಾಗಿ ಅವರ ಪಕ್ಷದ ಸದಸ್ಯರು ಪಕ್ಷದ ಲಾಂಛನ ಬಳಸದೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಉಳಿದಂತೆ ಬಿಲಾವಲ್ ಜರ್ದಾರಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮಧ್ಯೆ ಪೈಪೋಟಿ ಗೋಚರಿಸಿದೆ. ಆಯೋಗದ ಲೇಟೆಸ್ಟ್ ಅಂಕಿ-ಅಂಶಗಳ ಪ್ರಕಾರ ಚುನಾವಣೆ ನಡೆದ 265 ಕ್ಷೇತ್ರಗಳ ಪೈಕಿ ಪಿಟಿಐ 92, ಪಿಎಂಎಲ್-ಎನ್ 63 ಮತ್ತು ಪಿಪಿಪಿ 50 ಸ್ಥಾನಗಳನ್ನು ಗಳಿಸಿವೆ.
ಅಧಿಕೃತ ಫಲಿತಾಂಶ ಪ್ರಕಟಣೆಗೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನವಾಜ್ ಷರೀಫ್, ನಾನು ಇಂದು ನಿಮ್ಮೆಲ್ಲರ ಕಣ್ಣುಗಳಲ್ಲಿ ಬೆಳಕು ಹಾಗೂ ಹೊಳಪನ್ನು ಕಾಣುತ್ತಿದ್ದೇನೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ನಿಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿಕೊಂಡಿದ್ದಾರೆ. ಪಾಕ್ ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿಯೇ ಫಲಿತಾಂಶ ಪ್ರಕಟಣೆ ತಡ ಮಾಡುತ್ತಿದೆ ಎಂದು ಪಿಟಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ನವಾಜ್ ಕುಟುಂಬದ ನಾಲ್ವರಿಗೂ ಜಯ: ಪಿಎಂಎಲ್-ಎನ್ನ ನವಾಜ್ ಷರೀಫ್ ಪಿಟಿಐ ಬೆಂಬಲಿತ ಡಾ.ಯಾಸ್ಮಿನ್ ರಶೀದ್ ವಿರುದ್ಧ ದೊಡ್ಡ ಅಂತರದಿಂದ ಜಯ ಗಳಿಸಿದ್ದಾರೆ. ಯಾಸ್ಮಿನ್ 1,15,043 ಮತ ಗಳಿಸಿದ್ದರೆ, ನವಾಜ್ 1,71,024 ಮತ ಗಳಿಸಿದ್ದಾರೆ. ನವಾಜ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಮತ್ತು ಅವರ ಪುತ್ರ ಹಂಜಾ ಶೆಹಬಾಜ್, ನವಾಜ್ ಅವರ ಪುತ್ರಿ ಮರ್ಯಂ ನವಾಜ್ ಕೂಡ ಜಯ ಗಳಿಸಿದ್ದಾರೆ. ಈ ಮೂಲಕ ಪಿಎಂಎಲ್-ಎನ್ ಭದ್ರಕೋಟೆ ಎನಿಸಿಕೊಂಡಿರುವ ಲಾಹೋರ್ನ ಕ್ಷೇತ್ರಗಳಿಂದ ನವಾಜ್ ಕುಟುಂಬದ ನಾಲ್ವರು ಗೆದ್ದಿದ್ದಾರೆ.