ಪಟಿಯಾಲ: 1988ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನವಜೋತ್ ಸಿಂಗ್ ಸಿಧು ಅವರ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು ಏಪ್ರಿಲ್ 1ರಂದು ಪಟಿಯಾಲ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.
ನವಜೋತ್ ಸಿಂಗ್ ಸಿಧು ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ವಕೀಲ ಎಚ್.ಪಿ.ಎಸ್.ವರ್ಮಾ ಏಪ್ರಿಲ್ 1ರಂದು ಸಿಧು ಬಿಡುಗಡೆಯಾಗುತ್ತಿರುವ ಕುರಿತು ಖಚಿತಪಡಿಸಿದ್ದಾರೆ. ಪಂಜಾಬ್ ಸರ್ಕಾರದ ಕಾರಾಗೃಹ ನಿಯಮಗಳ ಪ್ರಕಾರ ಆರೋಪಿ ಸ್ಥಾನದಲ್ಲಿರುವವರ ನಡುವಳಿಕೆಯಲ್ಲಿ ಬದಲಾವಣೆಯಾಗಿದ್ದರೆ ಅಂಥವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೇ 19, 2022ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಧು ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು ಮತ್ತು ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಮೇ 20, 2022ರಂದು ಸಿಧು ಪಟಿಯಾಲ ಜೈಲ್ಲಿನಲ್ಲಿ ಶರಣಾಗಿದ್ದರು.
1988ರಲ್ಲಿ ಗಾಡಿ ನಿಲ್ಲಿಸುವ ವಿಚಾರವಾಗಿ ಸಿಧು ಹಾಗೂ ಗುರ್ನಾಮ್ ಸಿಂಗ್(65) ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಿಧು ಹಾಗೂ ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಗುರ್ನಾಮ್ ಅವರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಯ ತೀವ್ರತೆಗೆ ಗುರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.