ಬೆಂಗಳೂರು: ಪ್ರತಿ ಎರಡು ವರ್ಷಕ್ಕೊಮ್ಮೆ ಅಮೆರಿಕದಲ್ಲಿ ನಡೆಯುವ ನಾವಿಕ(ನಾವು ವಿಶ್ವ ಕನ್ನಡಿಗರು) ಸಮ್ಮೇಳನ ಈ ಬಾರಿ ಸಂಪೂರ್ಣ ಆನ್ಲೈನ್ನಲ್ಲಿ ಆ.28ರಿಂದ ಮೂರು ದಿನ(ಭಾರತೀಯ ಕಾಲಮಾನ ಆ.28 ಹಾಗೂ 30) ನೆರವೇರಲಿದ್ದು, ವಿಶ್ವಾದ್ಯಂತ ವಾಸಿಸುವ ಕನ್ನಡಿಗರು ಭಾಗವಹಿಸಲಿದ್ದಾರೆ.
ಮಾಧ್ಯಮ ಸಹಯೋಗ
‘ಕಡಲಾಚೆಯಿಂದ ನಿಮ್ಮಂಗಳಕೆ ಕನ್ನಡೋತ್ಸವ’ ಎಂಬ ಘೋಷವಾಕ್ಯದೊಂದಿಗೆ ಆ.28ರ ಶುಕ್ರವಾರ ಉದ್ಘಾಟನೆಯಾಗುವ ನಾವಿಕೋತ್ಸವ-2020ರಲ್ಲಿ ರಾಜ್ಯ ಹಾಗೂ ವಿವಿಧ ದೇಶಗಳಿಂದ ಕಲಾವಿದರು ಭಾಗವಹಿಸಿ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಇದರ ಜತೆಗೆ ಯುವಕ ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳು, ಉದ್ಯಮಿಗಳ ಸಮ್ಮೇಳನ ಸೇರಿ ಅನೇಕ ವೈಶಿಷ್ಠ್ಯಳನ್ನು ಒಳಗೊಂಡಿದೆ ಎಂದು ನಾವಿಕ ಒಕ್ಕೂಟದ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ಹೇಳಿದ್ದಾರೆ.
ಮೊದಲ ದಿನ (ಭಾರತೀಯ ಕಾಲಮಾನ ಆ.29ರ ಬೆಳಗ್ಗೆ 5.30) ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ, ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಉಪಸ್ಥಿತಿ, ಇನ್ಪೋಸಿಸ್ ಫೌಂಡೇಷನ್ನ ಡಾ. ಸುಧಾ ಮೂರ್ತಿ ಮುಖ್ಯ ಭಾಷಣ. ಪ್ರದೀಪ ಮತ್ತು ಪ್ರವೀಣ ತಂಡದಿಂದ ಭಾವಗೀತೆ, ಸವಿತಾ ತಂಡದವರಿಂದ ಜಾನಪದ ಗೀತೆ. ಎರಡನೆಯ ದಿನ (ಭಾರತೀಯ ಕಾಲಮಾನ ಆ.29ರ ಸಂಜೆ 6.00) ಶ್ರೀರಾಮ ಪಟ್ಟಾಭಿಷೇಕ, ಹಿಂದೂಸ್ತಾನಿ ಸಂಗೀತ(ನಚಿಕೇತ ಶರ್ವ), ಸಾಹಿತ್ಯ ಸಂವಾದ(ಎಚ್.ಎಸ್. ವೆಂಕಟೇಶ ಮೂರ್ತಿ, ಟಿ.ಎನ್. ಸೀತಾರಾಂ, ವಿಶ್ವೇಶ್ವರ ಭಟ್) ಮೂರನೇ ದಿನ (ಭಾರತೀಯ ಕಾಲಮಾನ ಆ.30ರ ಬೆಳಗ್ಗೆ 5.30) ಹರಟೆ(ಕೃಷ್ಣೇಗೌಡ, ಮುಖ್ಯಮಂತ್ರಿ ಚಂದ್ರು), ಸುಗಮ ಸಂಗೀತ(ಗಣೇಶ ದೇಸಾಯಿ), ರಸಸಂಜೆ( ಸ್ವರ ಸ್ಮಿತ್ತ ತಂಡ), ನಿಲು ಹಾಸ್ಯ(ನಮ್ದುಕೆ). ಭಾರತೀಯ ಕಾಲಮಾನ ಆ.30ರ ಸಂಜೆ 6.00 ಸಿನಿ ಸಂವಾದ(ಡಾಲಿ ಧನಂಜಯ), ನೆನಪಿನ ಮೆಲುಕು(ಮನೋಮೂರ್ತಿ, ಜಯಂತ ಕಾಯ್ಕಿಣಿ, ಯೋಗರಾಜ ಭಟ್), ಮಹಾ ಸಂಗೀತ(ಮನೋಮೂರ್ತಿ ನಿರ್ದೇಶನದ ಗೀತೆಗಳ ಗಾಯನ)
ಕರೊನಾ ಕಾರಣಕ್ಕೆ ಆನ್ಲೈನ್ ಈ ವರ್ಷದ ನಾವಿಕೋತ್ಸವದ ಕುರಿತು ಪ್ರತಿಕ್ರಿಯಿಸಿರುವ ವಲ್ಲೀಶ ಶಾಸ್ತ್ರಿ ಅವರು, ನಾವಿಕ ಎಂಬುದು ಲಾಭರಹಿತ ಸಂಸ್ಥೆಯಾಗಿದ್ದು, ವಿಶ್ವ ಕನ್ನಡಿಗರಿಗೊಂದು ವೇದಿಕೆ. ಬೆಸ ಇಸವಿಗಳಲ್ಲಿ ವಿಶ್ವ ಕನ್ನಡ ಸಮ್ಮೇಳನ ಅಮೆರಿಕದಲ್ಲಿ ನಡೆಯುತ್ತದೆ. ಸಮ ಇಸವಿಗಳಲ್ಲಿ ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಅನಿವಾಸಿ ಭಾರತೀಯ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಾವಿಕೋತ್ಸವ ನಡೆಯುತ್ತದೆ. ಮಕ್ಕಳ ಬೇಸಿಗೆ ರಜೆಯಲ್ಲಿ ಸಾಮಾನ್ತವಾಗಿ ಭಾರತಕ್ಕೆ ಆಗಮಿಸುವುದು ರೂಢಿಯಾಗಿತ್ತು. ಆದರೆ ಈ ಬಾರಿ ಕರೊನಾ ಕಾರಣಕ್ಕೆ ಯಾರೂ ಪ್ರವಾಸ ಮಾಡಲಾಗುತ್ತಿಲ್ಲ. ಹಾಗಾಗಿ ಅವರವರ ಕರ್ಮ ದೇಶಗಳಲ್ಲೆ ರಜೆಯನ್ನು ಕಳೆಯಲು ಅಂತರ್ಜಾಲ ಚಾಲಿತ ರಂಗ ಮಂಟಪ ಸೃಷ್ಟಿಸಲಾಗಿದೆ. ಅಂತರ್ಜಾಲ ಚಾಲಿತ ಉತ್ಸವ ನಡೆಯುತ್ತದೆ. ವಿಶ್ವದ ಕನ್ನಡಿಗರನ್ನು ಒಂದುಗೂಡಿಸಲು ವೇದಿಕೆ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶವನ್ನು ಐದನೇ ನಾವಿಕೋತ್ಸವ ನೀಡುತ್ತಿದೆ ಎಂದು ತಿಳಿಸಿದ್ದಾರೆ.
25ಕ್ಕೂ ಹೆಚ್ಚು ದೇಶಗಳ ಪ್ರಾತಿನಿಧ್ಯ ಅಂತರ್ಜಾಲದಲ್ಲಿ ಉತ್ಸವ ಮಾಡುವುದನ್ನೆ ಅವಕಾಶವನ್ನಾಗಿ ಬಳಸಿಕೊಂಡು ಸುಮಾರು 25 ದೇಶಗಳಿಂದ ಕನ್ನಡಿಗರು ಸೇರ್ಪಡೆ ಆಗುತ್ತಿದ್ದಾರೆ ಎಂದು ನಾವಿಕೋತ್ಸವದ ಸಂಚಾಲಕ ಅಶೋಕ ಕಟ್ಟೀಮನಿ ಹೇಳಿದ್ದಾರೆ. ಜಗತ್ತಿನಾದ್ಯಂತ ಕನ್ನಡಿಗರು ತಮ್ಮದೇ ಆದಂತಹ ರೀತಿಯಲ್ಲಿ ಕನ್ನಡ ಉಳಿಸುತ್ತಿದ್ದಾರೆ. ಅಮೆರಿದಲ್ಲಿರುವ 37ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ನಾವಿಕೋಥ್ಸವದಲ್ಲಿ ಭಾಗವಹಿಸುತ್ತಿವೆ. ಮನರಂಜನೆ ಜತೆಗೆ ಕನ್ನಡ ಕಲಿಯಂತಹ ಪ್ರತಿಭಾ ಪ್ರದರ್ಶನ, ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವಿಕೋತ್ಸವ 2020 ಕಥಾಸ್ಪರ್ಧೆ- ಇದು ಕರ್ನಾಟಕದವರಿಗಾಗಿ!
ಕರೊನಾ ವಾರಿಯರ್ಸ್ಗೆ ಗೌರವ ಭಾರತದಲ್ಲಿ ಕರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ನಾವಿಕೋತ್ಸವದಿಂದ ಲಭಿಸುವ ಸಂಪೂರ್ಣ ಲಾಭವನ್ನು ನೀಡಲಾಗುತ್ತದೆ ಎಂದು ನಾವಿಕದ ಪ್ರಚಾರ ಸಮಿತಿ ಅಧ್ಯಕ್ಷ ಬೆಂಕಿ ಬಸಣ್ಣ ಹೇಳಿದ್ದಾರೆ. ಕರೊನಾ ಮಹಾಮಾರಿ ಚೀನಾದಲ್ಲಿ ಹುಟ್ಟಿ ಭಾರತದಲ್ಲಿ ಬಲಿ ಪಡೆಯುತ್ತಿದೆ. ಮೂರು ದಿನದ ಹಿಂದೆ ಶಿಕಾರಿಪುರದಲ್ಲಿ ವಾಸಿಸುತ್ತಿದ್ದ ನನ್ನ ಚಿಕ್ಕಪ್ಪ ಹನುಮಂತಪ್ಪ ಬೆಂಕಿ ಚಿಕ್ಕಪ್ಪ ಕರೊನಾಕ್ಕೆ ಬಲಿಯಾದರು. ಇಂತಹ ಸಂದರ್ಭದಲ್ಲಿ ಎದೆಗುಂದೆ, ತಮ್ಮ ಜೀವವನ್ನೆ ಒತ್ತೆಯಿಟ್ಟು ಆಶಾ ಕಾರ್ಯಕರ್ತೆಯರು ಹೋರಾಡುತ್ತಿದ್ದಾರೆ. ನಾವಿಕೋತ್ಸವದ ಎಲ್ಲ ಲಾಭವನ್ನು ಅವರಿಗೆ ನೀಡುತ್ತಿದ್ದೇವೆ. ವೈದ್ಯರನ್ನು ಗುರುತಿಸಲು ‘ನಮ್ಮ ವೈದ್ಯರಿಗೆ ಸಲಾಂ’ ಕಾರ್ಯಕ್ರಮ ನಡೆಸುತ್ತಿದ್ದೇವೆ.
ಕನ್ನಡಿಗ ಉದ್ಯಮಿಗಳಿಗೆ ಬೆಂಬಲ ವಿದೇಶದಲ್ಲಿರುವ ಕನ್ನಡಿಗರು ದೊಡ್ಡ ದೊಡ್ಡ ಉದ್ಯಮಗಳನ್ನು ಹೊಂದುವ ರೀತಿಯಲ್ಲಿ ನಾವಿಕೋತ್ಸವದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ ಎಂದು ನಾವಿಕೋತ್ಸವದ ಬಿಸಿನೆಸ್ ಫೋರಂ ಅಧ್ಯಕ್ಷ ಗಿರೀಶ್ ನಿಂಬೇಕಾಯಿ ಹೇಳಿದ್ದಾರೆ. ನಮ್ಮ ಕನ್ನಡಿಗರು ವಿಶ್ವದಲ್ಲಿ ಕಂಪನಿಗಳನ್ನು ಆರಂಭಿಸಬೇಕು, ಬೆಳೆಸಬೇಕು ಎಂಬುದು ಉದ್ದೇಶ. ಈಗಾಗಲೆ ಉದ್ಯಮಿಗಳಾಗಿರುವವರಿಂದ ಯುವಕರಿಗೆ ಉತ್ತೇಜನ ಸಿಗುತ್ತದೆ ಎಂದಿದ್ದಾರೆ. ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗೆ ನಾವಿಕ ವೆಬ್ಸೈಟ್ಗೆ ಭೇಟಿ ನೀಡಬಹುದು.