ನ್ಯೂಸ್

ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಸ್ಟಿನ್ ನಗರ ಸಜ್ಜು; ಆನಂದ-ಅನುಭವ-ಅನುಬಂಧ

| ಬೆಂಕಿ ಬಸಣ್ಣ ನ್ಯೂ ಯಾರ್ಕ್
"ಇದೇ ಸಪ್ಟೆಂಬರ್ 1, 2 ಮತ್ತು 3ನೇ ತಾರೀಕು 'ಆನಂದ-ಅನುಭವ-ಅನುಬಂಧ' ಎಂಬ ಟ್ಯಾಗ್​​ಲೈನ್​ನೊಂದಿಗೆ ಅಮೆರಿಕಾ ದೇಶದ ಟೆಕ್ಸಾಸ್ ರಾಜ್ಯದ ಆಸ್ಟಿನ್​ನಲ್ಲಿ ನಡೆಯಲಿರುವ "7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023"ಕ್ಕೆ ಸಕಲ ಸಿದ್ಧತೆಗಳು ಮುಗಿದಿದ್ದು ಕೌಂಟ್ ಡೌನ್ ಪ್ರಾರಂಭವಾಗಿದೆ. ಕೋವಿಡ್‌ ನಂತರ ಸಾವಿರಾರು ಅನಿವಾಸಿ ಕನ್ನಡಿಗರು ಮೊದಲ ಬಾರಿಗೆ ಒಂದು ಸೂರಿನಡಿ ಸೇರುತ್ತಿದ್ದಾರೆ ಎಂದು ನಾವಿಕ ಸಂಸ್ಥೆ ಅಧ್ಯಕ್ಷ ಮಂಜುನಾಥ್ ರಾವ್ ತಿಳಿಸಿದ್ದಾರೆ.

"ಈ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕ ಮತ್ತು ಅಮೇರಿಕಾದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಸಂಖ್ಯೆಯ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ" ಎಂದು ಈ ಸಮ್ಮೇಳನದ ಸಂಚಾಲಕ ಸದಾಶಿವ ಕಲ್ಲೂರ್ ತಿಳಿಸಿದ್ದಾರೆ. ಇವರ ಜೊತೆಗೆ ಸಹ-ಸಂಚಾಲಕರಾಗಿ ಹೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಸೇವೆ ಸಲ್ಲಿಸುತ್ತಿದ್ದಾರೆ.

ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ವಿಶೇಷ ಅತಿಥಿಯಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡ ಪ್ರೈಮ್ ಟೈಮ್​ನಲ್ಲಿ ಪ್ರದರ್ಶನ ಕೊಡಲಿದೆ. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗರಾಜನ್ ಮುಂತಾದ ಗಾಯಕರು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. "ಬೀಟ್ ಗುರುಸ್ " ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ.
ರಘು ದೀಕ್ಷಿತ್ ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೊಡಲಿದ್ದಾರೆ. ಈ ಸಮಾವೇಶದಲ್ಲಿ ಇನ್ವೆಸ್ಟ್​​ಮೆಂಟ್​ (Investment /ಹೂಡಿಕೆದಾರರ) ಫೋರಮ್, ವಿಮೆನ್ಸ್ ಫೋರಮ್, ಕವಿಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ, ಮೆರವಣಿಗೆ.. ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

"ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್ ಶೋ , ಸ್ಟ್ಯಾಂಡ್-ಅಪ್ ಕಾಮಿಡಿ, ಮ್ಯಾಜಿಕ್ ಶೋ, ಗಾಲ್ಫ್ ಪಂದ್ಯಾವಳಿ, ಮೆರವಣಿಗೆ- ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಮತ್ತು ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಭೋಜನವನ್ನು ಏರ್ಪಡಿಸಲಾಗಿದೆ. ಕೆಲವು ಜನರ ಒತ್ತಾಯದ ಮೇರೆಗೆ ಈಗ ಸಿಂಗಲ್ ಡೇ ರಿಜಿಸ್ಟ್ರೇಷನ್ ಸಹ ಓಪನ್ ಮಾಡಿದ್ದೇವೆ" ಎಂದು ನಾವಿಕ ಸಂಸ್ಥೆ ಸಹ-ಸಂಸ್ಥಾಪಕ, ಮಾಜಿ ಅಧ್ಯಕ್ಷ ಮತ್ತು ಸಲಹೆಗಾರ ವಲ್ಲೀಶ ಶಾಸ್ತ್ರಿ ಹೇಳಿದ್ದಾರೆ.

ಕರ್ನಾಟಕದ ಪ್ರಖ್ಯಾತ ಯುವ ಸ್ಟ್ಯಾಂಡಪ್​ ಕಾಮಿಡಿಯನ್ಸ್ ರಾಘವೇಂದ್ರ ಆಚಾರ್, ಕಾರ್ತಿಕ್ ಪತ್ತಾರ್ ಮತ್ತು ನಿರೂಪ್ ಪ್ರೇಕ್ಷಕರನ್ನು ಹಾಸ್ಯಲೋಕಕ್ಕೆ ಕೊಂಡೊಯ್ಯಲಿದ್ದಾರೆ.

ನಾವಿಕ ವಿಶ್ವ ಕನ್ನಡ ಸಮಾವೇಶ-2023ಕ್ಕೆ ಒರಿಯನ್ ರಿ-ಕ್ಯಾಪಿಟಲ್ ಡೈಮಂಡ್ ಪ್ರಾಯೋಜಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ರಜತ ಪ್ರಾಯೋಜಕರಾಗಿದ್ದಾರೆ .

ನಿರ್ಮಲ ಮಾಧವ ಮತ್ತು ಪಂಪ ನೃತ್ಯ ಅಕಾಡೆಮಿ ಅದ್ಭುತ "ನಾದ ನೃತ್ಯ" ಪ್ರದರ್ಶನ ನಡೆಯಲಿದೆ. ಮರೆಯಲಾಗದ ಸಂಗೀತದ ಪ್ರದರ್ಶನವನ್ನು ನೀಡಲು ಪ್ರತಿಭಾವಂತ ಸಾಕ್ಸೊಫೋನ್ ಕಲಾವಿದೆ ಅಂಜಲಿ ಶಾನ್​ಭೋಗ್ ಅವರು ನಾವಿಕಗೆ ಬರುತ್ತಿದ್ದಾರೆ. ಯಕ್ಷಹೆಜ್ಜೆ - ಯಕ್ಷಗಾನ ಮತ್ತು ಕಲಾವಿದ್ಯೆಯ ಶಾಲೆಯವರು "ಚಂದ್ರಹಾಸ ಚರಿತ್ರೆ" ಪ್ರದರ್ಶಿಸಲಿದ್ದಾರೆ. 8-15 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಇತ್ತೀಚಿನ ಜನರೇಟಿವ್ AI ಬಳಸಿಕೊಂಡು ಕನ್ನಡದಲ್ಲಿ ಕಥೆ ಹೇಳುವ ಕಲೆ ಕಲಿಸಲಾಗುತ್ತದೆ.

ಕನ್ನಡ ಬರಹಗಾರರಿಂದ ಲೇಖನ, ಕಥೆ, ಕವನ, ಪ್ರಬಂಧ, ನಗೆಹನಿ ಮತ್ತು ಹಾಸ್ಯ ಲೇಖನಗಳನ್ನು ಆಹ್ವಾನಿಸಿ, ಅವುಗಳಲ್ಲಿ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಬರಹಗಳನ್ನು ಆಯ್ಕೆಮಾಡಿ "ಮಂದಾರ" ಹೆಸರಿನ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ.

ಉತ್ತರ ಕರ್ನಾಟಕದ ಸೊಗಡಿನ ವೈವಿಧ್ಯಮಯ ಕಾರ್ಯಕ್ರಮವನ್ನು ನಾರ್ತ್ ಅಮೇರಿಕನ್ ಉತ್ತರ ಕರ್ನಾಟಕ ಅಸೋಸಿಯೇಷನ್ (NAUKA) ತಂಡದ ಸದಸ್ಯರು ಪ್ರಸ್ತುತಪಡಿಸಲಿದ್ದಾರೆ.

ನಾವಿಕ-2023 ಸಾಹಿತ್ಯ ವೇದಿಕೆಯು ಕನ್ನಡದ ಹೆಸರಾಂತ ಸಾಹಿತಿ ಡಾ. ಗಜಾನನ ಶರ್ಮ ಅವರೊಂದಿಗೆ ಮುಕ್ತ ಸಂವಾದವನ್ನು ಪ್ರಸ್ತುತ ಪಡಿಸುತ್ತಿದೆ. ಇವರು “ಪುನರ್ವಸು", "ಪ್ರಮೇಯ", "ಚೆನ್ನಭೈರಾದೇವಿ" ಮುಂತಾದ ಪ್ರಸಿದ್ಧ ಕೃತಿಗಳ ಲೇಖಕರು, ನಾಟಕ ಜಗತ್ತಿನ ಹೆಸರಾಂತ ನಟ, ನಾಟಕಕಾರ ಹಾಗೂ ನಿರ್ದೇಶಕರು, "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಭಕ್ತಿಗೀತೆಯನ್ನು ರಚಿಸಿದವರು.

ಹೆಸರಾಂತ ಕಲಾವಿದರು ಮತ್ತು ಕಲಾಸ್ನೇಹಿ ಹಾಗೂ ನರ್ತನಯೋಗ ಶಾಲೆಯ ನಿರ್ದೇಶಕರು ಆದ ಯೋಗೇಶ್ ಕುಮಾರ್ ಮತ್ತು ಸ್ನೇಹಾ ನಾರಾಯಣ್ ದಂಪತಿಯಿಂದ ಸೊಗಸಾದ ನೃತ್ಯ ಕಾರ್ಯಕ್ರಮ "ಯುಗಳ ನೃತ್ಯ ಸಂಭ್ರಮ" ಪ್ರಸ್ತುತವಾಗಲಿದೆ.

ಈ ವಿಶ್ವ ಕನ್ನಡ ಸಮಾವೇಶದಲ್ಲಿ ರಂಗಸ್ಥಳ ನಾಟಕ ಸ್ಪರ್ಧೆ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ ಸ್ಪರ್ಧೆ, ಶೃಂಗಾರ ಸಿರಿ ಫ್ಯಾಶನ್ ಶೋ ಮುಂತಾದ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ನಾವಿಕ ಕೋಗಿಲೆ: ಟೀನೇಜ್ ಕೆಟಗರಿಯಲ್ಲಿ ಪ್ರಕೃತಿ ಉಪಾಧ್ಯ, ಸನ್ಮಿತಾ ಹೊಸೂರ್, ನಯನ ಪ್ರಸಾದ್ ಮತ್ತು ತನ್ವಿ ಪ್ರಸಾದ್ ಫೈನಲ್​ಗೆ ಬಂದಿದ್ದು ಮುಖ್ಯ ವೇದಿಕೆಯಲ್ಲಿ "ಯುವ ನಾವಿಕ ಕೋಗಿಲೆ" ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ. ವಯಸ್ಕರ ವಿಭಾಗದಲ್ಲಿ ಅರ್ಚನಾ ಪ್ರದೀಪ್, ಅಕ್ಷಯ್ ರಾವ್, ಮಾಳವಿಕಾ ಪ್ರಸಾದ್, ಅಮೋಘ ಅಯ್ಯರ್, ಸೌಜನ್ಯ ಮೂರ್ತಿ ಮತ್ತು ನಿಶಾಂತ್ ಉಡುಪ ಫೈನಲ್ ರೌಂಡ್​ಗೆ ಅರ್ಹತೆ ಪಡೆದಿದ್ದಾರೆ. ಈ ಆರು ಜನರಲ್ಲಿ ಯಾರು ಪ್ರತಿಷ್ಠಿತ "ನಾವಿಕ ಕೋಗಿಲೆ" ಪ್ರಶಸ್ತಿ ಪಡೆಯುತ್ತಾರೆ ಎಂದು ತೀವ್ರ ಕುತೂಹಲ ಮೂಡಿದೆ.

ಶುಚಿ-ರುಚಿಯಾದ ಭರ್ಜರಿ ಊಟಕ್ಕೆ ತಯಾರಿ

ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಸವಿ ಭೋಜನವನ್ನು ಮೂರು ದಿನಗಳ ಕಾಲ ಉಚಿತವಾಗಿ ಅನುಭವಿಸಿ. ರಿಜಿಸ್ಟ್ರೇಷನ್ ಫೀಸ್​​ನಲ್ಲಿ ಊಟ ಸಹ ಒಳಗೊಂಡಿದೆ. ಸಮ್ಮೇಳನಕ್ಕೆ ಬರುವವರಿಗೆಲ್ಲ ʻಬೀಗರೂಟʼದ ಔತಣ ನೀಡೋಕೆ ನಾವು ರೆಡಿ ಎನ್ನುತ್ತಿದ್ದಾರೆ ಆಸ್ಟಿನ್‌ ನಿವಾಸಿ, ಈ ಸಮ್ಮೇಳನದ ಊಟೋಪಚಾರ ಸಮಿತಿಯ ಪ್ರಮುಖರಾದ ಸಂದೀಪ್‌ ಚಕ್ರವರ್ತಿ, ಸಿಯಾಟಲ್‌ನ ಅನಿಲ್‌ ಪುವ್ವಾಡಿ ಮತ್ತವರ ತಂಡ. ಈ ಪಟ್ಟಿಯಲ್ಲಿ ಮಂಗಳೂರು, ಕಾರವಾರ, ಉಡುಪಿ ಭಾಗದ ತಿನಿಸುಗಳು, ಇತ್ತ ಉತ್ತರ ಕರ್ನಾಟಕದ ರೊಟ್ಟಿ ಎಣ್ಣೆಗಾಯಿ, ಅತ್ತ ಮೈಸೂರು ಭಾಗದ ಸಿಹಿ ತಿನಿಸುಗಳು, ಬೆಳಗಾವಿಯ ಕುಂದ, ದಾವಣಗೆರೆಯ ಬೆಣ್ಣೆ ದೋಸೆ ಹೀಗೆ ಹತ್ತು ಹಲವು ಬಗೆಯ ತಿಂಡಿ ತಿನಿಸುಗಳಿವೆ. ಸಮ್ಮೇಳನ ನಡೆಯುವ ಹೋಟೆಲ್ಲಿನಲ್ಲೇ ಸುಸಜ್ಜಿತ ಅಡುಗೆಮನೆ ಇರುವುದರಿಂದ ಬಹುತೇಕ ಅಡುಗೆ ಇಲ್ಲಿಯೇ ತಯಾರಿಸಿ ಬಡಿಸಲಾಗುವುದು. ಕೆಲವೊಂದು ಸಿಹಿ ತಿಂಡಿಗಳನ್ನು ಮತ್ತು ರೊಟ್ಟಿ, ಉಪ್ಪುಮೆಣಸು, ಹಪ್ಪಳ, ಸಂಡಿಗೆ ಹೀಗೆ ಒಂದಷ್ಟನ್ನು ಕರ್ನಾಟಕದ ಕೆಲವು ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿಬಾರಿಯ ಊಟದಲ್ಲಿ 9-10 ಐಟಂಗಳು ಇರಲಿವೆ. ಬೆಳಗಿನ ಉಪಾಹಾರದಲ್ಲಿಯೂ 4-5 ಮಾದರಿಯ ತಿಂಡಿಗಳು ಇರಲಿವೆ. ಊಟದ ಸಮಯದಲ್ಲಿ ಸರತಿಸಾಲುಗಳನ್ನು ವಿಂಗಡಿಸಲಾಗುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನೂಕುನುಗ್ಗಲು ತಪ್ಪಿಸಲು ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ.

ಹೂಡಿಕೆದಾರರಿಗೆ ವಿನೂತನ ವೇದಿಕೆ

"ಬಿಜ್ ಸ್ಪಾರ್ಕ್ - ಇನ್‌ಸ್ಪೈರ್, ಕನೆಕ್ಟ್ ಮತ್ತು ಥ್ರೈವ್" ಎನ್ನುವ ಧ್ಯೇಯದೊಂದಿಗೆ ಹೂಡಿಕೆದಾರರ ಸಮಾವೇಶವನ್ನು ನಾವಿಕದಲ್ಲಿ ಆಯೋಜಿಸಲಾಗಿದೆ. ಉದ್ಯಮದ ಪ್ರಮುಖರೊಂದಿಗೆ ಭೇಟಿ ಮಾಡಿ, ಸೌಹಾರ್ದಯುತ ಪರಿಚಯ ಮಾಡಿಕೊಂಡು ಮೌಲ್ಯಯುತ ಒಳನೋಟಗಳನ್ನು ಪಡೆದುಕೊಳ್ಳುವ ಈ ವಿಶೇಷ ಅವಕಾಶ ಒದಗಿಸಲಾಗಿದೆ. "ಏಳು ಪ್ರಮುಖ ಕಂಪನಿಗಳ ಪ್ರತಿನಿಧಿಗಳು ‌ತಮ್ಮ ಕಂಪನಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ವಿವರಿಸಲಿದ್ದಾರೆ" ಎಂದು ಈ ʻಇನ್‌ವೆಸ್ಟ್‌ಮೆಂಟ್‌ ಫೋರಂ ಮುಖ್ಯಸ್ಥ ಹಾಗೂ ಸಹ-ಸಂಚಾಲಕ ಗೌರಿಶಂಕರ್‌ ರಂಗನಗೌಡ ತಿಳಿಸಿದರು. ಇನ್‌ವೆಸ್ಟ್‌ಮೆಂಟ್‌ ಫೋರಂ ಸಮಿತಿಯಲ್ಲಿ ಗೌರಿಶಂಕರ್‌ ಅವರೊಂದಿಗೆ ಆಸ್ಟಿನ್‌ ನಗರದ ಪ್ರವೀಣ್‌ ಕುಮಾರ್‌, ನ್ಯೂಯಾರ್ಕ್‌ ನಗರದ ಶಿವಕುಮಾರ್‌ ಬೆಂಗಳೂರ್‌, ನ್ಯೂಜರ್ಸಿಯ ಡಾ.ಅಶೋಕ ಕಟ್ಟೀಮನಿ, ಡ್ಯಾಲಸ್‌ ನಗರದ ವೆಂಕಟ್‌ ಗಂಗಲ್‌ ಹಾಗೂ ನಾರಾಯಣ ಮಹಾಜನ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಂಧದ ಗೊಂಬೆಗಳು: ಈ ಬಾರಿ ಚಿಕ್ಕ ಮಕ್ಕಳಿಗಾಗಿ ಗಂಧದ ಗೊಂಬೆಗಳು ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಕ್ಕಳು ಕನ್ನಡದ ಚಾರಿತ್ರಿಕ ವ್ಯಕ್ತಿಗಳ ವೇಷಭೂಷಣದೊಂದಿಗೆ ಕೆಲವು ಆಯ್ದ ಜಾಗಗಳಲ್ಲಿ ನಿಂತಿರುತ್ತಾರೆ. ನೀವು ಈ ಶಿಲಾಮೂರ್ತಿಯನ್ನು ಮುಟ್ಟಿದರೆ, ಅದಕ್ಕೆ ಜೀವ ಬಂದು ತನ್ನ ಇತಿಹಾಸ ಹೇಳುತ್ತದೆ.

ಆಧ್ಯಾತ್ಮಿಕ ವೇದಿಕೆ: ಗ್ರ್ಯಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತರು ಪ್ರಬುದ್ಧ ಆರೋಗ್ಯ ಮತ್ತು ಆಧ್ಯಾತ್ಮಿಕ ವೇದಿಕೆಯಲ್ಲಿ ಸ್ಪೀಕರ್ ಆಗಿ ಬರುತ್ತಿದ್ದಾರೆ . ಗೌರವಾನ್ವಿತ ವೈದ್ಯರು ಮತ್ತು ಆಧ್ಯಾತ್ಮಿಕ ನಾಯಕರೊಂದಿಗೆ ಈ ವೇದಿಕೆಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಶಾಂತಿ, ಸ್ಪಷ್ಟತೆ ಮತ್ತು ಉದ್ದೇಶವನ್ನು ತರುವಂತಹ ಅಭ್ಯಾಸಗಳ ಶಕ್ತಿಯನ್ನು ಅನ್ವೇಷಿಸಿಬಹುದು.

ಆರೋಗ್ಯ ಮತ್ತು ಆಧ್ಯಾತ್ಮಿಕ ಫೋರಮ್: ಈ ವೇದಿಕೆಯಲ್ಲಿ ಡಾ ಪದ್ಮಿನಿ ಶಾಮ ಸುಂದರ, ಡಾ.ರಾಮಕೃಷ್ಣರಾವ್ ಮತ್ತು ಡಾ. ಕೃಷ್ಣಮೂರ್ತಿ ಜೋಯಿಸ್ ಮಾತನಾಡಲಿದ್ದಾರೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅರ್ಚನಾ ಮತ್ತು ಪ್ರಶಾಂತ್ ಕುಲಕರ್ಣಿ ಯೋಗ ಮತ್ತು ಮೆಡಿಟೇಶನ್ ಕ್ಯಾಂಪ್​ ನಡೆಸಲಿದ್ದಾರೆ. ಡಾ.ಕೃಷ್ಣಮೂರ್ತಿ ಜೋಯಿಸ್ ಅವರು ಗಣೇಶ ಪೂಜೆಯೊಂದಿಗೆ ನಾವಿಕ ಸಮ್ಮೇಳನವನ್ನು ಆರಂಭಿಸಲಿದ್ದಾರೆ.

ವೈದ್ಯರ ಫೋರಮ್: ವೈದ್ಯೋ ನಾರಾಯಣೋ ಹರಿ! ಪ್ರಸಿದ್ಧ ವೈದ್ಯರುಗಳು ಈ ವೇದಿಕೆಯಲ್ಲಿ ತಮ್ಮ ಪರಿಣತಿ ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವೈದ್ಯರು ಮತ್ತು ನಿಯೋಜಿತರಿಗೆ ಓಹಿಯೋ ವೈದ್ಯಕೀಯ ವಿಶ್ವವಿದ್ಯಾನಿಲಯವು 4.00 AMA PRA ವರ್ಗ 1ರ CME ಕ್ರೆಡಿಟ್ ಕೊಡಲಿದ್ದಾರೆ. ಎಂ.ಡಿ.ಕೌಶಿಕ್ ತಮ್ಮ ಮ್ಯಾಜಿಕ್ ಶೋನಿಂದ ಎಲ್ಲರನ್ನೂ ಮಂತ್ರಮುಗ್ಧ ಮಾಡಲಿದ್ದಾರೆ.

ವೆಂಡರ್ಸ್‌ ಬೂತ್‌: ಇನ್ನು ನಾನಾ ವ್ಯಾಪಾರ ವ್ಯವಹಾರಗಳು, ದೇಶಿ ತಿಂಡಿತಿನಿಸುಗಳು, ಭಾರತೀಯ ಸಿದ್ಧ ಉಡುಗೆ ತೊಡುಗೆ, ಸೀರೆಗಳು, ಜ್ಯುವೆಲರಿ, ಕಾನೂನು ಸಲಹೆ, ವಿಮಾ ಯೋಜನೆ, ಉಳಿತಾಯ ವಿಚಾರಗಳು, ಶೇರು ಮಾರ್ಕೆಟ್‌ ಹೂಡಿಕೆಗಳ ಬಗ್ಗೆ ಮಾಹಿತಿ, ಹೀಗೆ ಹತ್ತು ಹಲವು ವ್ಯಾವಹಾರಿಕ ಮಾದರಿಗಳನ್ನು ಉತ್ತೇಜಿಸಲು ಸಮ್ಮೇಳನದ ಆವರಣದಲ್ಲಿ ವೆಂಡರ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಮಿತಿಯಲ್ಲಿ ಆಸ್ಟಿನ್‌ ನಗರದ ಸಂತೋಷ ಕೊಂಡಜ್ಜಿ, ಡ್ಯಾಲಸ್ಸಿನ ವಿಷ್ಣುವರ್ಧನ ರೆಡ್ಡಿ ಹಾಗೂ ರಾಘವ ಸೇಟ್‌, ನ್ಯೂಯಾರ್ಕ್‌ ನಗರದ ಪುಷ್ಪಲತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೀಟ್ ಗುರುಸ್: ನಮ್ಮ ಕರುನಾಡ ಕಲೆಯಾದ ಜಾನಪದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಅತ್ಯದ್ಭುತ ಪ್ರಾಕಾರಗಳ ಮೂಲಕ ಜನಪ್ರಿಯಗೊಳಿಸಿರುವ ಹೆಸರಾಂತ ವಾದ್ಯಸಂಗೀತಗಾರರಾದ ಬೀಟ್ ಗುರುಸ್ ತಂಡ ಬರುತ್ತಿದ್ದಾರೆ. 2005ರಲ್ಲಿ ಪ್ರಾರಂಭವಾದ ಬೀಟ್ ಗುರುಸ್ ತಂಡ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ತಾಳವಾದ್ಯ ಸಂಗೀತದ ಮೂಲಕ ಶುದ್ಧ ಸ್ಥಳೀಯ ಹಾಗು ಜಾನಪದ ಶೈಲಿಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದಾರೆ .

ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾಯಿಸಿಕೊಳ್ಳಲು ಕೆಳಗಿನ ವೆಬ್​​ಸೈಟ್​ಗೆ ಭೇಟಿ ಕೊಡಿ
https://austin.navika.org/