ನ್ಯೂಸ್

ಪ್ರಧಾನಿ ಮೋದಿ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು: ನವೀನ್ ಪಟ್ನಾಯಕ್ ತಿರುಗೇಟು

ನವದೆಹಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಮೇಲಿನ ಊಹಾಪೋಹಗಳು ಬುಧವಾರ ತೀವ್ರಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಡೆದ ರ‍್ಯಾಲಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನವೀನ್ ಪಟ್ನಾಯಕ್ ಅವರ ಶೀಘ್ರವಾಗಿ ಹದಗೆಡುತ್ತಿರುವ ಆರೋಗ್ಯದ ಹಿಂದೆ ಏನಾದರೂ ಪಿತೂರಿ ಇದೆಯೇ ಎಂದು ಶಂಕಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚುನಾವಣಾ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಆಪ್ತ ಮತ್ತು ಬಿಜೆಡಿ ನಾಯಕ ವಿಕೆ ಪಾಂಡಿಯನ್, ನವೀನ್ ಅವರ ನಡುಗುತ್ತಿರುವ ಕೈ ಹಿಡಿದ ವಿಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಮೋದಿ, ಒಡಿಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನವೀನ್ ಬಾಬು ಆರೋಗ್ಯದ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.

ಒಡಿಶಾದ ಮಯೂರ್‌ಭಂಜ್‌ನಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಾಲಿ ಸಿಎಂ ನವೀನ್‌ ಪಟ್ನಾಯಕ್‌ ಅವರ ಆರೋಗ್ಯ ಕ್ಷೀಣಿಸಲು ಕಾರಣ ಏನೆಂಬುದರ ಬಗ್ಗೆ ತನಿಖೆಗೆ ಆದೇಶಿಸುತ್ತೇವೆ.

ಕಳೆದೊಂದು ವರ್ಷಗಳಿಂದ ನವೀನ್‌ ಬಾಬು(ಪಟ್ನಾಯಕ್‌) ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿರುವ ಬಗ್ಗೆ ಅವರ ಹಿತೈಷಿಗಳು ಇತ್ತೀಚೆಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕಳೆದೊಂದು ವರ್ಷಗಳಿಂದ ಪಟ್ನಾಯಕ್‌ ಅವರ ಪರಿಚಯಸ್ಥರು ಯಾರೇ ನನ್ನನ್ನು ಭೇಟಿ ಮಾಡಿದರೂ ಅವರ ಆರೋಗ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಈಗೀಗ ಅವರಿಗೆ ತಮ್ಮ ಸ್ವಂತ ಕೆಲಸಗಳನ್ನೂ ಮಾಡಿಕೊಳ್ಳಲಾಗದಂತಹ ಅನಾರೋಗ್ಯ ಕಾಡುತ್ತಿದೆ ಎಂಬುದು ಅವರ ಆಪ್ತರಿಂದ ತಿಳಿದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನವೀನ್​ ಪಟ್ನಾಯಕ್ ಅವರು, ಅವರು (ನರೇಂದ್ರ ಮೋದಿ) ನಾನು ಅವರ ಉತ್ತಮ ಸ್ನೇಹಿತ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಅವರು ಮಾಡಬೇಕಾಗಿರುವುದು ಪೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಬೇಕಿತ್ತು."ಕಳೆದ 10 ವರ್ಷಗಳಿಂದ ಅವರ ಆರೋಗ್ಯದ ಬಗ್ಗೆ ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ ಎಂದಿದ್ದಾರೆ.

‘ನಾನು ಪರಿಪೂರ್ಣ ಆರೋಗ್ಯ ಹೊಂದಿದ್ದೇನೆ ಮತ್ತು ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದೇನೆ ಎಂದು ಪ್ರಧಾನಿಗೆ ಭರವಸೆ ನೀಡುತ್ತೇನೆ."ನನ್ನ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿದೆ. ಇಲ್ಲದಿದ್ದರೆ, ಈ ಬಿಸಿಲಿನ ನಡುವೆ ನಾನು ಪ್ರಚಾರ ಮಾಡಲು ಸಾಧ್ಯವಿಲ್ಲ" ಎಂದು ಪಟ್ನಾಯಕ್ ಹೇಳಿದರು.

ಒಡಿಶಾದಲ್ಲಿ ಮೇ 13 ರಿಂದ ಜೂನ್ 1 ರವರೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.