ಬರ್ಲಿನ್: ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾರೆ. ದೇಹದಲ್ಲಿ ವಿಷಪೂರಿತ ಅಂಶ ಸೇರಿ, ಕೋಮಾಕ್ಕೆ ಜಾರಿದ್ದ ಅಲೆಕ್ಸಿ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ.
ಜರ್ಮನಿಯ ಬರ್ಲಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ಅಲೆಕ್ಸಿ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೇ ನನಗೆ ವಿಷಪ್ರಾಶನ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವ್ಲಾದಿಮಿರ್ ಪುತಿನ್ ತಮ್ಮ ಪ್ರತಿಪಕ್ಷ ನಾಯಕನಿಗೆ ವಿಷ ಉಣಿಸಿದ್ದಾರೆ ಎಂಬ ಸಣ್ಣದೊಂದು ಸುದ್ದಿ ಅದಾಗಲೇ ಹೊರಟಿತ್ತು. ಆದರೆ ಅಲೆಕ್ಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಅವರು ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಚೇತರಿಸಿಕೊಂಡ ಬಳಿಕ ಜರ್ಮನಿಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅಲೆಕ್ಸಿ, ಈ ವಿಷಪ್ರಾಶನ ಕೃತ್ಯದ ಹಿಂದೆ ಖಂಡಿತವಾಗಿಯೂ ಪುತಿನ್ ಇದ್ದಾರೆ. ಅದರ ಹೊರತು ನನಗೆ ಬೇರೆ ಯಾವ ಕಾರಣವೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನುಶ್ರೀ ಆಪ್ತನ ಪರ ಕರಾವಳಿ ಶಾಸಕರ ಒತ್ತಡ.. ಒತ್ತಡಕ್ಕೆ ಕಾರಣವಾಗಿರುವ ಆ ಲಿಂಕ್ ಏನು?
ನೊವಿಚೋಕ್ ಗುಂಪಿಗೆ ಸೇರಿದ ವಿಷಕಾರಿ ಪದಾರ್ಥವನ್ನು ಅಲೆಕ್ಸಿಗೆ ನೀಡಲಾಗಿತ್ತು ಎಂದು ಜರ್ಮನಿಯ ಆಸ್ಪತ್ರೆ ಹೇಳಿತ್ತು. ಅಷ್ಟೇ ಅಲ್ಲ ಈ ವರದಿಯನ್ನಾಧರಿಸಿದ ಜರ್ಮನಿ ಸರ್ಕಾರ, ರಷ್ಯಾದ ಬಳಿ ಮಾಹಿತಿಯನ್ನೂ ಕೇಳಿದೆ. ಇದೀಗ ಅಲೆಕ್ಸಿ ಅವರು ಖಡಾಖಂಡಿತವಾಗಿ ಈ ಘಟನೆ ಹಿಂದೆ ಪುತಿನ್ ಇದ್ದಾರೆಂದು ಹೇಳುತ್ತಿದ್ದಾರೆ.
ಆದರೆ ಡುಮಾದ ಅಧ್ಯಕ್ಷ ವ್ಯಾಚೆಸ್ಲಾವ್ ವೊಲೊಡಿನ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಅಲೆಕ್ಸಿ ವಿರುದ್ಧ ಕಿಡಿಕಾರಿದ್ದಾರೆ. ಅವರೊಬ್ಬ ದುಷ್ಕರ್ಮಿ, ನಾಚಿಕೆ ಇಲ್ಲದವನು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಒಂದು ರೂಪಾಯಿ ದಂಡದ ವಿರುದ್ಧ ಪುನಃ ಸುಪ್ರೀಂ ಮೆಟ್ಟಿಲೇರಿದ ವಕೀಲ ಪ್ರಶಾಂತ್ ಭೂಷಣ್
ಅಲೆಕ್ಸಿ ಜೀವವನ್ನು ಪುತಿನ್ ಕಾಪಾಡಿದ್ದಾರೆ. ಟಾಮ್‌ಸ್ಕ್ ನಗರದಿಂದ ಮಾಸ್ಕೋಗೆ ತೆರಳುವಾಗ ಅವರ ಆರೋಗ್ಯ ಹದೆಗಟ್ಟಿತ್ತು. ಕೂಡಲೇ ವಿಮಾನ ತುರ್ತುಭೂಸ್ಪರ್ಶ ಮಾಡಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಪೈಲಟ್ಗಳಿಂದ ಹಿಡಿದು ಅಧ್ಯಕ್ಷರವರೆಗೆ ಎಲ್ಲರೂ ಅವರ ಜೀವ ಉಳಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)