ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣ ಸಂಬಂದ ಏರ್ಪಟ್ಟ ಒಪ್ಪಂದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಮತ್ತಿತರರಿದ್ದರು. 
ನ್ಯೂಸ್

ರಾಜ್ಯದಲ್ಲಿ ದೇಶದ ಬೃಹತ್ ಸೆಮಿಕಂಡಕ್ಟರ್ ಪ್ಲಾಂಟ್; 22 ಸಾವಿರ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ

ಬೆಂಗಳೂರು: ಆರ್ಥಿಕ ಚೇತರಿಕೆಯತ್ತ ಮುಂದಡಿ ಇಡುತ್ತಿರುವ ರಾಜ್ಯದಲ್ಲಿ ದೇಶದ ಮೊತ್ತ ಮೊದಲ ಬೃಹತ್ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ವಣಕ್ಕೆ ವೇದಿಕೆ ರೂಪುಗೊಂಡಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ಹಾಗೂ ಐಎಸ್​ಎಂಸಿ ಅನಲಾಗ್ ಫ್ಯಾಬ್ ಪ್ರೖೆ.ಲಿ ನಡುವೆ ಒಪ್ಪಂದ ಏರ್ಪಟ್ಟಿದ್ದು, 22,900 ಕೋಟಿ ರೂ. (3 ಬಿಲಿಯನ್ ಡಾಲರ್) ಹೂಡಿಕೆಯಾಗುತ್ತಿದೆ. ವಿಶೇಷವೆಂದರೆ, ಈ ಸೆಮಿಕಂಟಕ್ಟರ್ ಘಟಕ ಮೈಸೂರಿನಲ್ಲಿ ಸ್ಥಾಪನೆಗೊಳ್ಳುವ ಸಾಧ್ಯತೆ ಇದೆ.

ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಡಂಬಡಿಕೆ ಏರ್ಪಟ್ಟಿತು. ಏಳು ವರ್ಷಗಳ ಅವಧಿಯಲ್ಲಿ ಸರಿಸುಮಾರು 1500 ಜನರಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಹಾಗೂ ಐಎಸ್​ಎಂಇ ಪರವಾಗಿ ನಿರ್ದೇಶಕ ಅಜಯ್ ಜಲನ್ ಸಹಿ ಹಾಕಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ. ಈ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ ಎಂದರು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಇದೊಂದು ಬಹುದೊಡ್ಡ ಹೆಜ್ಜೆ. ಸವಾಲುಗಳು ಸಹ ದೊಡ್ಡಮಟ್ಟದಲ್ಲಿ ಇವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲೂ ಈ ಒಪ್ಪಂದ ಅವಕಾಶ ಕಲ್ಪಿಸಿದೆ ಎಂದು ಸಿಎಂ ತಿಳಿಸಿದರು.

ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ವಿವಿಧ ರಾಜ್ಯಗಳು ಆಕರ್ಷಿಸಲು ಸ್ಪರ್ಧಿಸುತ್ತಿದ್ದ ವೇಳೆಯಲ್ಲಿಯೇ ಈ ಮಹತ್ವದ ಒಪ್ಪಂದಕ್ಕೆ ನಮ್ಮ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದೆ ಎಂದ ಸಿಎಂ ದೇಶದಲ್ಲಿಯೇ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲ ನಮ್ಮಲ್ಲಿದೆ ಎಂದು ಹೆೇಳಿದರು. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸೆಮಿಕಂಡಕ್ಟರ್ ಮಿಷನ್​ನ್ನು ಅನುಮೋದಿಸಿರುವುದರಿಂದ ಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕ ಮುಂದುವರಿಯಲು ಸಾಧ್ಯವಾಗಿದೆ ಎಂದರು.

ಈ ಒಡಂಬಡಿಕೆಯು ಇಸ್ರೇಲ್ ಹಾಗೂ ಭಾರತದ ನಡುವೆ ತಂತ್ರಜ್ಞಾನ ಹಾಗೂ ಸಂಸ್ಕೃತಿಗಳ ವಿನಿಮಯಕ್ಕೂ ವೇದಿಕೆ ಕಲ್ಪಿಸಲಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ಚೈನಾ ಬೆಳವಣಿಗೆಯನ್ನು ಸ್ಮರಿಸಿ, ಸವಾಲು ಎದುರಾದಾಗ ದೊಡ್ಡದ್ದನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಐಎಸ್​ಎಂಸಿ ಮುಖ್ಯಸ್ಥ ಇರೇಜ್ ಇಂಬರಮನ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಮೈಸೂರಿನಲ್ಲಿ ಸ್ಥಾಪನೆ?: ಮೈಸೂರಲ್ಲಿ ಈ ಘಟಕ ಸ್ಥಾಪನೆ ಸಂಬಂಧ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಘಟಕ ಸ್ಥಾಪನೆಗೆ ಅಗತ್ಯವಾದ ಭೂಮಿ ಗುರುತಿಸಲಾಗಿದ್ದು ಶೀಘ್ರವೇ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.