ಬಾವಿ ತೋಡುವಾಗ ಬಿಸಿಲಿನ ಹೊಡೆತಕ್ಕೆ ವ್ಯಕ್ತಿ ಬಲಿ: ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ರೆ ಅಪಾಯ ಫಿಕ್ಸ್​! Heatstroke  
ದೇಶ

ಬಾವಿ ತೋಡುವಾಗ ಬಿಸಿಲಿನ ಹೊಡೆತಕ್ಕೆ ವ್ಯಕ್ತಿ ಬಲಿ: ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ರೆ ಅಪಾಯ ಫಿಕ್ಸ್​! Heatstroke

ಪ್ರಮುಖ ಮುಖ್ಯಾಂಶಗಳು

  • ಬಾವಿ ತೋಡುವಾಗ ರಣ ಬಿಸಿಲಿನ ಹೊಡೆತಕ್ಕೆ ವ್ಯಕ್ತಿಯೊಬ್ಬ ದುರಂತ ಸಾವು
  • ಕೇರಳದ ಕಣ್ಣೂರಿನ ಪಲ್ಲಿಪೊಯಿಲ್​ನಲ್ಲಿ ನಡೆದ ಆಘಾತಕಾರಿ ಘಟನೆ
  • ನಿನ್ನೆ ಮಧ್ಯಾಹ್ನ ಬಾವಿ ತೋಡುವಾಗ ಬಿಸಿಲಿನ ಹೊಡೆತಕ್ಕೆ ಕುಸಿದುಬಿದ್ದ ಸಾವು
  • ಎಲ್ಲೆಡೆ ಬಿಸಿಲು ಹೆಚ್ಚಾಗಿದ್ದು ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ
Heatstroke : ರಣ ಬಿಸಿಲಿನ ಹೊಡೆತಕ್ಕೆ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪಲ್ಲಿಪೊಯಿಲ್ ಮೂಲದ ಸನಲ್ ಕುಮಾರ್ ಎಂ ವಿ (37) ಎಂದು ಗುರುತಿಸಲಾಗಿದೆ.
ಸನಲ್​ ಕುಮಾರ್​ ಅವರು ನಿನ್ನೆ (ಏಪ್ರಿಲ್​ 22) ಮಧ್ಯಾಹ್ನ ಪಲ್ಲಿಪೊಯಿಲ್‌ನಲ್ಲಿ ಬಾವಿ ತೋಡುತ್ತಿದ್ದರು. ಈ ವೇಳೆ ಬಿಸಿಲಿನ ಹೊಡೆತಕ್ಕೆ ಕುಸಿದು ಬಿದ್ದ ಸನಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಿನ್ನೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಸನಲ್​ ಇಂದು (ಏಪ್ರಿಲ್​ 23) ಬೆಳಗ್ಗೆ ಅವರು ನಿಧನರಾದರು.
ಸನಲ್​ ಸಾವಿಗೆ ಬಿಸಿಲಿನ ಹೊಡೆತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಚಕ್ಕರಕ್ಕಲ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕದಲ್ಲೂ ರಣಬಿಸಿಲು

ಕರ್ನಾಟಕದಲ್ಲಿ ಪ್ರಸ್ತುತ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯಪುರ, ಬೀದರ್ ಮತ್ತು ಯಾದಗಿರಿ ಭಾಗಗಳಲ್ಲಿ ಅತಿ ಹೆಚ್ಚು ಬಿಸಿಲು ದಾಖಲಾಗುತ್ತಿದ್ದು, ತಾಪಮಾನವು 40°C ನಿಂದ 44°C ವರೆಗೆ ತಲುಪಿದೆ. ಭಾರತೀಯ ಹವಾಮಾನ ಇಲಾಖೆ (IMD) ಈ ಭಾಗಗಳಲ್ಲಿ ತೀವ್ರವಾದ ಉಷ್ಣಗಾಳಿ (Heatwave) ಮುನ್ನೆಚ್ಚರಿಕೆ ನೀಡಿದ್ದು, ವಿಶೇಷವಾಗಿ ಏಪ್ರಿಲ್ 23 ಮತ್ತು 24 ರಂದು ಕಲಬುರಗಿ ಮತ್ತು ಬೀದರ್ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆ ಅನಗತ್ಯವಾಗಿ ಹೊರಬರದಂತೆ, ಸಾಕಷ್ಟು ನೀರು ಕುಡಿಯುವಂತೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಹೀಟ್​ಸ್ಟ್ರೋಕ್​ ಹೇಗೆ ಸಂಭವಿಸುತ್ತದೆ?

ಹೀಟ್​ಸ್ಟ್ರೋಕ್ ಅಥವಾ ಉಷ್ಣಾಘಾತವು ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯು ವಿಫಲವಾದಾಗ ಸಂಭವಿಸುತ್ತದೆ. ಸಾಮಾನ್ಯವಾಗಿ, ದೀರ್ಘಕಾಲದವರೆಗೆ ಅತಿಯಾದ ತಾಪಮಾನಕ್ಕೆ ಒಡ್ಡಿಕೊಂಡಾಗ ಅಥವಾ ಬಿಸಿಲಿನಲ್ಲಿ ಅತಿಯಾದ ದೈಹಿಕ ಶ್ರಮ ವಹಿಸಿದಾಗ ದೇಹವು ತನ್ನನ್ನು ತಂಪಾಗಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ದೇಹದ ಆಂತರಿಕ ಉಷ್ಣತೆಯು ತೀವ್ರವಾಗಿ ಅಂದರೆ 104°F (40°C) ಅಥವಾ ಅದಕ್ಕಿಂತ ಹೆಚ್ಚಾದಾಗ, ಮೆದುಳು ಮತ್ತು ಇತರ ಪ್ರಮುಖ ಅಂಗಗಳು ಹಾನಿಗೊಳಗಾಗಬಹುದು. ಈ ಸ್ಥಿತಿಯಲ್ಲಿ ಬೆವರುವಿಕೆ ನಿಂತುಹೋಗಬಹುದು, ಚರ್ಮವು ಕೆಂಪಾಗಿ ಒಣಗಬಹುದು ಮತ್ತು ವ್ಯಕ್ತಿಯು ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ. ಇದು ಜೀವಕ್ಕೆ ಅಪಾಯಕಾರಿಯಾದ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದೆ.

ಮುನ್ನೆಚ್ಚರಿಕೆಗಳೇನು?

* ನೇರಳಾತೀತ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಬಿಸಿಲಿನ ಬೇಗೆಯಂತಹ ಚರ್ಮ ರೋಗಗಳು, ಕಣ್ಣಿನ ಕಾಯಿಲೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ಸಾರ್ವಜನಿಕರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

* ಅತ್ಯಧಿಕ ನೇರಳಾತೀತ ಕಿರಣಗಳ ಸೂಚ್ಯಂಕವು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರ ನಡುವೆ ದಾಖಲಾಗುತ್ತದೆ. ಆದ್ದರಿಂದ, ಆ ಸಮಯದಲ್ಲಿ ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

* ಹೊರಾಂಗಣ ಕೆಲಸದಲ್ಲಿ ತೊಡಗಿರುವವರು, ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು, ಜಲ ಸಾರಿಗೆಯಲ್ಲಿ ತೊಡಗಿರುವವರು, ಬೈಕ್ ಸವಾರರು, ಪ್ರವಾಸಿಗರು, ಚರ್ಮ ಅಲರ್ಜಿ ಹೊಂದಿರುವವರು, ಕಣ್ಣಿನ ಕಾಯಿಲೆಗಳು, ಕ್ಯಾನ್ಸರ್ ರೋಗಿಗಳು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರು ತುಂಬಾ ಜಾಗರೂಕರಾಗಿರಬೇಕು.

* ಹಗಲಿನಲ್ಲಿ ಹೊರಗೆ ಹೋಗುವಾಗ ಟೋಪಿ, ಛತ್ರಿ ಮತ್ತು ಸನ್ ಗ್ಲಾಸ್ ಬಳಸಲು ಪ್ರಯತ್ನಿಸಿ. ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ.

* ನಿಮ್ಮ ಪ್ರಯಾಣದ ಸಮಯದಲ್ಲಿ ವಿರಾಮದ ವೇಳೆ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ.

* ಯಾವುದೇ ಕೆಲಸ ಇಲ್ಲದಿದ್ದಾಗ ಆದಷ್ಟು ಮನೆಯಲ್ಲೇ ಇರಲು ಪ್ರಯತ್ನಿಸಿ ಮತ್ತು ಹೊರಗಡೆ ಹೆಚ್ಚು ಓಡಾಡಬೇಡಿ, (ಏಜೆನ್ಸೀಸ್​).