ಹರಿದ್ವಾರದ ಗಂಗಾ ಘಾಟ್‌ನಲ್ಲಿ ನಾಯಿಗೆ ಸ್ನಾನ ಮಾಡಿಸಿದ ಮಹಿಳೆ
- ಹರಿದ್ವಾರದ ಗಂಗಾ ಘಾಟ್‌ನಲ್ಲಿ ನಾಯಿಗೆ ಸ್ನಾನ ಮಾಡಿಸಿದ ಮಹಿಳೆ
- ಸ್ಥಳೀಯರಿಂದ ಈ ಕೆಲಸಕ್ಕೆ ಭಾರಿ ವಿರೋಧ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಉತ್ತರಾಖಂಡ: ದೇವಭೂಮಿ ಉತ್ತರಾಖಂಡದ ಹರಿದ್ವಾರವೆಂದರೆ ಭಕ್ತರ ಪಾಲಿಗೆ ಪರಮ ಪವಿತ್ರ ತಾಣ. ಆದರೆ, ಇಲ್ಲಿನ ಸರ್ವಾನಂದ ಘಾಟ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ (Viral Video) ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯೊಬ್ಬರು ತನ್ನ ಸಾಕು ನಾಯಿಯನ್ನು ಗಂಗಾ ನದಿಯಲ್ಲಿ ಸ್ನಾನ ಮಾಡಿಸಿದ ವಿಚಾರ, ಭಕ್ತರ ಆಕ್ರೋಶ ಮತ್ತು ಪರ-ವಿರೋಧದ ವಾದಗಳಿಗೆ ವೇದಿಕೆಯಾಗಿದೆ.
ನಡೆದಿದ್ದೇನು?
ವರದಿಗಳ ಪ್ರಕಾರ, ಮಹಿಳೆಯೊಬ್ಬರು ತನ್ನ ಕುಟುಂಬದೊಂದಿಗೆ ಹರಿದ್ವಾರದ ಸರ್ವಾನಂದ ಘಾಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ಸಾಕು ನಾಯಿಯನ್ನು ಗಂಗೆಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಇತರ ಭಕ್ತರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಂಗೆ ನಮಗೆ ಕೇವಲ ನದಿಯಲ್ಲ, ಅವಳು ನಮ್ಮ ತಾಯಿ. ಧಾರ್ಮಿಕ ವಿಧಿವಿಧಾನಗಳು ನಡೆಯುವ ಈ ಜಾಗದಲ್ಲಿ ಪ್ರಾಣಿಗಳನ್ನು ಸ್ನಾನ ಮಾಡಿಸುವುದು ಸರಿಯಲ್ಲ ಎಂನ್ನುವುದು ಅಲ್ಲಿಯ ಜನರ ವಾದವಾಗಿತ್ತು.
ಯಾವಾಗ ಜನರು ಆಕ್ಷೇಪಿಸಿದರೋ, ಆ ಮಹಿಳೆ ಸುಮ್ಮನಾಗುವ ಬದಲು ಜಗಳಕ್ಕೆ ನಿಂತಿದ್ದಾಳೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆ ಮತ್ತು ಸ್ಥಳೀಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಮಹಿಳೆ, ನಾನು ಮನಸ್ಪೂರ್ತಿಯಾಗಿ ಪ್ರಾರ್ಥಿಸಿದರೆ, ನೀವು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬರ್ಥದಲ್ಲಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಗದ್ದಲ ಹೆಚ್ಚಾಗುತ್ತಿದ್ದಂತೆ ಆಕೆಯ ಕುಟುಂಬದವರು ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿ ಆಕೆಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ.
ವಿಡಿಯೋ ವೈರಲ್!
ಈ ಇಡೀ ಘಟನೆಯನ್ನು ಅಲ್ಲಿನ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ
ಧಾರ್ಮಿಕ ಸ್ಥಳಗಳಿಗೂ ಒಂದು ಮರ್ಯಾದೆ ಇರುತ್ತದೆ. ಪ್ರವಾಸಿಗರು ಸ್ಥಳೀಯ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಗೌರವಿಸಬೇಕು. ಮನುಷ್ಯರು ಪವಿತ್ರ ಸ್ನಾನ ಮಾಡುವ ಜಾಗದಲ್ಲಿ ಪ್ರಾಣಿಗಳನ್ನು ತರುವುದು ತಪ್ಪು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇನ್ನೊಂದೆಡೆ, ಪ್ರಾಣಿ ಪ್ರೇಮಿಗಳು ಮಹಿಳೆಯ ಪರ ನಿಂತಿದ್ದಾರೆ. ನಾಯಿಗಳೂ ದೇವರ ಸೃಷ್ಟಿಯೇ. ಪ್ರಾಣಿಗಳು ನದಿಗೆ ಇಳಿಯುವುದು ನಿಸರ್ಗದ ಸಹಜ ಕ್ರಿಯೆ. ಅದಕ್ಕೆ ಇಷ್ಟೊಂದು ವಿರೋಧವೇಕೆ? ಎಂಬುದು ಈ ಬಣದ ಪ್ರಶ್ನೆಯಾಗಿದೆ.
ಅರ್ಚಕರ ಆಕ್ಷೇಪ ಮತ್ತು ಕಠಿಣ ನಿಯಮದ ಬೇಡಿಕೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಅರ್ಚಕ ಉಜ್ವಲ್ ಪಂಡಿತ್, ಗಂಗಾ ನದಿ ಹಿಂದೂ ಸಂಪ್ರದಾಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿದೆ. ಇಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಇಂತಹ ಘಟನೆಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ. ಆಡಳಿತ ಮಂಡಳಿಯು ಘಾಟ್‌ಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ, (ಏಜನ್ಸೀಸ್).