ಸೆಕ್ಯೂರಿಟಿ ಗಾರ್ಟ್​ಗಳ ಮೇಲೆ ಕೂಗಾಡುತ್ತಾ, ಹಲ್ಲೆ ನಡೆಸುತ್ತಿರುವ ಮಹಿಳೆ  
ದೇಶ

ನನ್ನ ಬೂಟ್​ ಸ್ವಚ್ಛ ಮಾಡಲು ನೀವು ಯೋಗ್ಯರಲ್ಲ: ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಮಹಿಳೆ ದರ್ಪ; ವಿಡಿಯೋ ವೈರಲ್​! Woman Arrogance

ನೋಯ್ಡಾ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಊಟ ಗೇಟ್ ಬಳಿ ಸ್ವಲ್ಪ ತಡವಾಯಿತೆಂದು ಮಹಿಳೆಯೊಬ್ಬರು (Woman Arrogance) ಭದ್ರತಾ ಸಿಬ್ಬಂದಿಯ ಮೇಲೆ ಕೈ ಮಾಡಿರುವ ಘಟನೆ ಈಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಆಕೆ ನಡೆಸಿದ ಹಲ್ಲೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗೇಟ್ ಬಳಿ ಶುರುವಾಯ್ತು ಗಲಾಟೆ!

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಸೆಂಚುರಿಯನ್ ಪಾರ್ಕ್ ಟೆರೇಸ್ ಹೋಮ್ಸ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಬಿಸ್ರಾಖ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಬುಧವಾರ (ಆ.26) ರಾತ್ರಿ ಈ ಘಟನೆ ನಡೆದಿದೆ.
ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಊಟವನ್ನು ಆರ್ಡರ್ ಮಾಡಿದ್ದರು. ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್ ಅನ್ನು ಸೊಸೈಟಿಯ ಗೇಟ್ ಬಳಿಯೇ ಭದ್ರತಾ ಸಿಬ್ಬಂದಿ ತಡೆದಿದ್ದರು. ನೈಟ್ ಟೈಮ್ ನಿಯಮಗಳೋ ಅಥವಾ ಗೇಟ್ ಪಾಸ್ ವಿಚಾರವೋ, ಒಟ್ಟಿನಲ್ಲಿ ಗಾರ್ಡ್ಸ್ ಗೇಟ್ ಒಳಗೆ ಬಿಡಲು ಸ್ವಲ್ಪ ತಡ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಆ ಮಹಿಳೆ ನೇರವಾಗಿ ಫ್ಲ್ಯಾಟ್‌ನಿಂದ ಗೇಟ್ ಬಳಿಗೆ ಓಡಿ ಬಂದಿದ್ದಾರೆ.

ಗಾರ್ಡ್‌ಗಳ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳ ಬಳಕೆ!

ಗೇಟ್ ಬಳಿ ಬಂದು ಗಾರ್ಡ್‌ಗಳನ್ನು ತರಾಟೆಗೆ ತೆಗೆದುಕೊಂಡ ಆ ಮಹಿಳೆ, ಮಾತಿನಲ್ಲಿ ಅತಿರೇಕಕ್ಕೆ ಹೋಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಆಕೆ ಗಾರ್ಡ್‌ಗಳ ಮೇಲೆ ಮುಗಿಬಿದ್ದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಕುರ್ಚಿಯ ಮೇಲೆ ಕುಳಿತಿದ್ದ ಸೆಕ್ಯುರಿಟಿ ಗಾರ್ಡ್ ಬಳಿ ಹೋಗಿ ಆಕೆ ಒದೆಯಲು ಮುಂದಾಗಿದ್ದಾರೆ. ಇನ್ನೊಬ್ಬ ಗಾರ್ಡ್‌ಗೂ ಕೈಯಿಂದ ಹೊಡೆದಿರುವುದು ವಿಡಿಯೋನಲ್ಲಿ ಸೆರೆಯಾಗಿದೆ. ನೀವೆಲ್ಲ ನಮ್ಗೆ ಸರಿ ಸಮಾನರಲ್ಲ, ನನ್ನ ಬೂಟು ಸ್ವಚ್ಛಗೊಳಿಸೋದಕ್ಕೂ ನೀವು ಯೋಗ್ಯರಲ್ಲ ಎಂದು ಗಾರ್ಡ್‌ಗಳನ್ನು ಕೀಳಾಗಿ ಕಾಣುವಂತೆ ಮಾತನಾಡಿದ್ದಾರೆ. ಯಾರಿಗೆ ಬೇಕಾದರೂ ಕಾಲ್ ಮಾಡಿ ಕರೆಯಿಸಿ, ಪೊಲೀಸರನ್ನು ಕರೆದರೂ ನನಗೆ ಭಯವಿಲ್ಲ ಎಂದು ಗಾರ್ಡ್‌ಗಳಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.


ಪೊಲೀಸರ ಎಂಟ್ರಿ ಮತ್ತು ತನಿಖೆ

ಸೊಸೈಟಿಯ ಗೇಟ್ ಬಳಿ ನಡೆದ ಈ ಗೂಂಡಾಗಿರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ನೆಟ್ಟಿಗರು ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಬಡ ಗಾರ್ಡ್​ಗಳ ಮೇಲೆ ಈ ಅಹಂಕಾರ ಯಾಕೆ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ಪ್ರಕರಣದ ಗಂಭೀರತೆಯನ್ನು ಅರಿತಿರುವ ಪೊಲೀಸರು ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಡೆಲಿವರಿ ಬಾಯ್ ಅನ್ನು ಗೇಟ್‌ನಲ್ಲಿ ತಡೆಯಲು ನಿಖರ ಕಾರಣವೇನು? ಮತ್ತು ಮಹಿಳೆ ಗಾರ್ಡ್‌ಗಳ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಿದ ಅಂಶಗಳೇನು? ಎಂಬುದನ್ನು ಪರಿಶೀಲಿಸುತ್ತಿದ್ದಾರೆ, (ಏಜನ್ಸೀಸ್​).