ಸಿಎಂ ಪರಿಹಾರ ನಿಧಿಗೆ 21 ಕೋಟಿ ರೂ. ದೇಣಿಗೆ ಘೋಷಿಸಿದ ನೀತಾ ಅಂಬಾನಿ 
ದೇಶ

ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ: ಪಶುಗಳ ರಕ್ಷಣೆಗೆ ಮುಂದಾದ 'ವಂತಾರಾ'; ಸಿಎಂ ಪರಿಹಾರ ನಿಧಿಗೆ 21 ಕೋಟಿ ದೇಣಿಗೆ ನೀಡಿದ ನೀತಾ ಅಂಬಾನಿ! Nita Ambani on Assam Floods

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂ ಭೀಕರ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ರಿಲಯನ್ಸ್ ಫೌಂಡೇಶನ್
  • ಸಿಎಂ ಪರಿಹಾರ ನಿಧಿಗೆ 21 ಕೋಟಿ ರೂ. ದೇಣಿಗೆ ಘೋಷಿಸಿದ ನೀತಾ ಅಂಬಾನಿ
  • ನೀವು ಒಬ್ಬಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ: ರಿಲಯನ್ಸ್ ಒಡತಿ
ಅಸ್ಸಾಂ: ಭೀಕರ ಪ್ರವಾಹದಿಂದ ತತ್ತರಿಸಿರುವ ಅಸ್ಸಾಂ ಜನತೆಯ ಬೆಂಬಲಕ್ಕೆ ರಿಲಯನ್ಸ್ ಫೌಂಡೇಶನ್ ಧಾವಿಸಿದ್ದು, ರಾಜ್ಯದ ಸಂತ್ರಸ್ತರಿಗೆ ನೆರವಾಗಲು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ (Nita Ambani on Assam Floods) ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ 21 ಕೋಟಿ ರೂಪಾಯಿಗಳ ದೇಣಿಗೆಯನ್ನು ಘೋಷಿಸಿದ್ದಾರೆ.
ಪ್ರವಾಹ ಪೀಡಿತ ಕುಟುಂಬಗಳಿಗೆ ಧೈರ್ಯ ತುಂಬಿರುವ ಅವರು, ನೀವು ಎಂದಿಗೂ ಒಬ್ಬಂಟಿಯಲ್ಲ, ನಾವು ಎಂದಿಗೂ ನಿಮ್ಮೊಂದಿಗೆ ಇರುತ್ತೇವೆ, ಎಂದು ಭರವಸೆ ನೀಡಿದ್ದಾರೆ.

ನೀತಾ ಅಂಬಾನಿ ಭಾವುಕ ನುಡಿ!

ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದ ಪರಿಸ್ಥಿತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ನೀತಾ ಅಂಬಾನಿ, ನಮ್ಮ ಆಲೋಚನೆ ಮತ್ತು ಪ್ರಾರ್ಥನೆಗಳು ಅಸ್ಸಾಂ ಜನರೊಂದಿಗೆ ಇದ್ದು, ಈ ವಿನಾಶಕಾರಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಪ್ರತಿಯೊಂದು ಕುಟುಂಬಕ್ಕೂ ನನ್ನ ಹೃದಯ ಮಿಡಿಯುತ್ತದೆ, ದಯವಿಟ್ಟು ನೀವು ಒಬ್ಬಂಟಿಯಾಗಿಲ್ಲ ಎಂಬುದನ್ನು ನೆನಪಿನಲ್ಲಿರಲಿ ಎಂದು ಅವರು ಸಾಂತ್ವಾನ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿಯಿಂದ ಧನ್ಯವಾದ


ರಿಲಯನ್ಸ್ ಫೌಂಡೇಶನ್‌ನ ಈ ಮಾನವೀಯ ಕಾರ್ಯಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮ ರಾಜ್ಯಕ್ಕೆ ಕಷ್ಟ ಬಂದಾಗಲೆಲ್ಲಾ ನೀತಾ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್ ಮುಂದೆ ನಿಂತು ಸಹಾಯ ಮಾಡಿದೆ.

ಕೋವಿಡ್ ಕಾಲದಲ್ಲೂ ನಮ್ಮ ಜನರಿಗೆ ದೊಡ್ಡ ಮಟ್ಟದ ನೆರವು ನೀಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈಗ ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ 21 ಕೋಟಿ ನೀಡುವುದರ ಮೂಲಕ ಮತ್ತೊಮ್ಮೆ ತಮ್ಮ ದೊಡ್ಡ ಮನಸ್ಸನ್ನು ತೋರಿಸಿದ್ದಾರೆ ಎಂದು ಸಿಎಂ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ರಿಲಯನ್ಸ್ ಫೌಂಡೇಶನ್ ಮತ್ತು ವಂತಾರಾ ಸೇವೆ!

ಕೇವಲ ಹಣದ ನೆರವಷ್ಟೇ ಅಲ್ಲದೆ, ರಿಲಯನ್ಸ್ ತಂಡಗಳು ನೇರವಾಗಿ ಅಸ್ಸಾಂನ ಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿವೆ. ಶಿವಸಾಗರ್ ಮತ್ತು ಚಾರೈಡಿಯೊ ಜಿಲ್ಲೆಗಳಲ್ಲಿ ಕನಿಷ್ಠ 50,000 ಜನರಿಗೆ ನೆರವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃಸ್ಥಾಪಿಸಲಾಗಿದೆ. ಇದರೊಂದಿಗೆ ಸಂತ್ರಸ್ತರಿಗಾಗಿ ಸಮುದಾಯ ಅಡುಗೆಮನೆಗಳನ್ನು ತೆರೆದು ಬಿಸಿ ಊಟ ನೀಡಲಾಗುತ್ತಿದೆ.

ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜಾನುವಾರುಗಳು ಮತ್ತು ಮೂಕ ಪ್ರಾಣಿಗಳ ರಕ್ಷಣೆಗಾಗಿ ವಂತಾರಾ ತಂಡವು ಅಖಾಡಕ್ಕಿಳಿದಿದ್ದು, ಮನೆ ಬಾಗಿಲಿಗೆ ತೆರಳಿ ಪ್ರಾಣಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಹಾನಿಗೊಳಗಾದ ಆರೋಗ್ಯ ಕೇಂದ್ರಗಳನ್ನು ಸರಿಪಡಿಸುವುದು ಹಾಗೂ ಸ್ಥಳೀಯ ಆಡಳಿತದೊಂದಿಗೆ ಸೇರಿ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಕೆಲಸ ಭರದಿಂದ ಸಾಗುತ್ತಿದೆ ಎಂದು ತಿಳಿದು ಬಂದಿದೆ,

(ಏಜನ್ಸೀಸ್​).