Bulletproof Jackets | ಅಖಿಲೇಶ್-ಮಾಯಾವತಿ ಸೇರಿದಂತೆ 44 ನಾಯಕರಿಗೆ ಯೋಗಿ ಸರ್ಕಾರದಿಂದ ಬುಲೆಟ್‌ಪ್ರೂಫ್ ಜಾಕೆಟ್ 
ದೇಶ

ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್-ಮಾಯಾವತಿ ಸೇರಿದಂತೆ 44 ನಾಯಕರಿಗೆ ಯೋಗಿ ಸರ್ಕಾರದಿಂದ ಬುಲೆಟ್‌ಪ್ರೂಫ್ ಜಾಕೆಟ್​! | Bulletproof Jackets

ಮುಂಬರುವ 2027ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಪ್ರಮುಖ ಭದ್ರತಾ ಕ್ರಮಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಸೇರಿದಂತೆ ಸುಮಾರು 44 ಪ್ರಮುಖ ರಾಜಕೀಯ ನಾಯಕರಿಗೆ ಬುಲೆಟ್‌ಪ್ರೂಫ್ ಜ್ಯಾಕೆಟ್‌ಗಳನ್ನು (Bulletproof Jackets) ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಭದ್ರತಾ ಪ್ರಧಾನ ಕಚೇರಿಯು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬುಲೆಟ್‌ಪ್ರೂಫ್ ಜ್ಯಾಕೆಟ್‌ಗಳನ್ನು ಖರೀದಿಸಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಕಾಳಜಿ ಮತ್ತು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ಸರ್ಕಾರದ 11 ಸಚಿವರಿಗೂ ಈ ಜ್ಯಾಕೆಟ್‌ಗಳನ್ನು ಒದಗಿಸಲಾಗುತ್ತಿದ್ದು, ಈ ಪಟ್ಟಿಯಲ್ಲಿ ಸಂಜಯ್ ನಿಷಾದ್ ಮತ್ತು ನಂದ ಗೋಪಾಲ್ ನಂದಿ ಸೇರಿದಂತೆ ಹಲವು ಸಚಿವರು ಮತ್ತು ನಾಯಕರಿದ್ದಾರೆ. ಈ ವ್ಯವಸ್ಥೆಯು ಸಚಿವರು ಮತ್ತು ಶಾಸಕರಿಗಷ್ಟೇ ಸೀಮಿತವಾಗಿರದೆ, ಭದ್ರತಾ ಬೆದರಿಕೆ ಎದುರಿಸುತ್ತಿರುವ ಇತರ ಪ್ರಮುಖ ನಾಯಕರನ್ನೂ ಒಳಗೊಂಡಿದೆ.
Y ನಿಂದ Z+ ಶ್ರೇಣಿಯ ಭದ್ರತೆ ಹೊಂದಿರುವ ನಾಯಕರಿಗೆ ಈ ಜ್ಯಾಕೆಟ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಬಿಜೆಪಿಯ ಮಾಜಿ ಶಾಸಕ ಸಂಗೀತ್ ಸೋಮ್ ಮತ್ತು ಠಾಣಾ ಭವನ ಶಾಸಕ ಸುರೇಶ್ ರಾಣಾ ಅವರಿಗೂ ಈ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುವುದರಿಂದ ಈ ಕ್ರಮ ಪ್ರಾಮುಖ್ಯತೆ ಪಡೆದುಕೊಂಡಿದೆ. ಭದ್ರತೆ ಮತ್ತು ಗುಪ್ತಚರ ಇಲಾಖೆಯ ಮಾಹಿತಿಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ, ಜ್ಯಾಕೆಟ್‌ಗಳ ಖರೀದಿ ಮತ್ತು ವಿತರಣೆಯ ಹಿಂದಿನ ನಿರ್ದಿಷ್ಟ ಕಾರಣಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಉತ್ತರ ಪ್ರದೇಶದ ಮಹಿಳೆಯರಿಗೆ 20,000..?

ಮತ್ತೊಂದೆಡೆ ಉತ್ತರ ಪ್ರದೇಶದ ಮಹಿಳೆಯರಿಗೆ 20,000 ನೀಡುವ ಕುರಿತು ಬಿಜೆಪಿ ಸರ್ಕಾರ ಘೋಷಣೆ ಮಾಡಬಹುದು ಎಂಬ ವರದಿಗಳ ಬೆನ್ನಲ್ಲೇ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಚುನಾವಣೆ ಗೆಲ್ಲಲು ನೀಡುತ್ತಿರುವ ಮತ್ತೊಂದು ಜುಮ್ಲಾ ಎಂದು ಕರೆದಿರುವ ಅವರು, ಬಿಜೆಪಿಗೆ ವೋಟ್ ಕೇಳಲು ಹಣ ಬಿಟ್ಟರೆ ಬೇರೇನೂ ಉಳಿದಿಲ್ಲ ಮತ್ತು ನೀಡಲಾಗುತ್ತಿರುವ ಹಣವು ಅವರ ಅಕ್ರಮ ಸಂಪಾದನೆಯಿಂದ ಬಂದದ್ದು ಎಂದು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಜಾಗೃತ ಮಹಿಳೆಯರು ಇಂತಹ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವ ಎಸ್​ಪಿ ನಾಯಕ, ಇತರ ರಾಜ್ಯಗಳಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಭರವಸೆಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).