ಸೋಲಿನಲ್ಲಿ ವಿಶ್ವದಾಖಲೆ... 253ನೇ ಬಾರಿ ನಾಮಪತ್ರ ಸಲ್ಲಿಸಿ ಸೋಲೇ ನನ್ನ ಸಾಧನೆ ಎಂದ ಈತ ಯಾರು? Failure
- ಚುನಾವಣಾ ರಾಜ ಎಂದೇ ಖ್ಯಾತಿ ಗಳಿಸಿರುವ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನ ಪದ್ಮರಾಜನ್
- ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಸೋಲಿನ ಸರದಾರ
- ಯಶಸ್ಸು ಕೇವಲ ಸಾಧನೆಯಲ್ಲ, ವೈಫಲ್ಯವೂ ಒಂದು ಸಾಧನೆಯಾಗಬಹುದು ಎಂದ ಪದ್ಮರಾಜನ್
Failure : ಚುನಾವಣಾ ರಾಜ ಎಂದೇ ಖ್ಯಾತಿ ಗಳಿಸಿರುವ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನ ಪದ್ಮರಾಜನ್ ಅವರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಪದ್ಮರಾಜನ್ ಅವರು ಇದುವರೆಗೆ 253 ಬಾರಿ ನಾಮಪತ್ರ ಸಲ್ಲಿಸಿದ್ದಾರೆ.
ಮಾರ್ಚ್ 30ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ, ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು ತಾನು ಸ್ಪರ್ಧಿಸುತ್ತಿರುವ ಕ್ಷೇತ್ರಕ್ಕೆ ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಈ ವಿಚಾರದಲ್ಲಿ ಸೇಲಂ ಜಿಲ್ಲೆಯ ಪದ್ಮರಾಜನ್ ಮಾತ್ರ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. ಏಕೆಂದರೆ, ಇಲ್ಲಿಯವರೆಗೆ ಅವರು 253 ಬಾರಿ ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 1ರಂದು ಪದ್ಮರಾಜನ್ ಅವರು ತಮ್ಮ ಸಹಾಯಕರೊಂದಿಗೆ ಬೆಳಗ್ಗೆ 9 ಗಂಟೆಗೆ ಮೆಟ್ಟೂರಿನ ಆರ್‌ಟಿಒ ಕಚೇರಿಗೆ ಬಂದ ಮೊದಲ ವ್ಯಕ್ತಿಯಾಗಿದ್ದರು. ಅಲ್ಲಿದ್ದ ಭದ್ರತಾ ಪೊಲೀಸರು ಅವರನ್ನು ಒಳಗೆ ಬಿಡಲು ನಿರಾಕರಿಸಿ ಬೆಳಗ್ಗೆ 10 ಗಂಟೆಗೆ ಬರಲು ಹೇಳಿದರು. ಅಲ್ಲಿಂದ ಹಿಂತಿರುಗಿದ ವ್ಯಕ್ತಿ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ 253ನೇ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮರಾಜನ್, ಸಹಕಾರಿ ಸಂಘದ ಚುನಾವಣೆಯಿಂದ ಹಿಡಿದು ಅಧ್ಯಕ್ಷೀಯ ಚುನಾವಣೆಯವರೆಗೆ ಎಲ್ಲದಕ್ಕೂ ನಾಮಪತ್ರ ಸಲ್ಲಿಸುತ್ತಿದ್ದೇನೆ. ಏಕೆಂದರೆ, ಯಶಸ್ಸು ಕೇವಲ ಸಾಧನೆಯಲ್ಲ, ವೈಫಲ್ಯವೂ ಒಂದು ಸಾಧನೆಯಾಗಬಹುದು ಎಂದು ಅಚ್ಚರಿಯ ಹೇಳಿಕೆ ನೀಡಿದರು.
1996ರಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ 5 ಸಂಸದೀಯ ಕ್ಷೇತ್ರಗಳು ಮತ್ತು 3 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ನಾಮಪತ್ರ ಸಲ್ಲಿಸಿದರು. ಇದಲ್ಲದೆ, ಮಾಜಿ ಪ್ರಧಾನಿ ನರಸಿಂಹ ರಾವ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲೂ ನಾಮಪತ್ರ ಸಲ್ಲಿಸಿದ್ದರು.
ಅಂದಹಾಗೆ, ಪದ್ಮರಾಜನ್ ಅವರು 2011 ರಲ್ಲಿ ಮೆಟ್ಟೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 6,273 ಮತಗಳನ್ನು ಪಡೆದರು. ಇಲ್ಲಿಯವರೆಗೆ 252 ಬಾರಿ ಸೋಲುಂಡಿದ್ದು ಅತಿ ಹೆಚ್ಚು ಸೋಲುಗಳನ್ನು ಪಡೆದ ಅಭ್ಯರ್ಥಿಯಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಅವರ ಹೆಸರು ದಾಖಲಾಗಿದೆ. ಅಲ್ಲದೆ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಪದ್ಮರಾಜನ್ ಹೇಳಿದ್ದಾರೆ.
ಅಂದಹಾಗೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನ ಇದೇ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯಾದರೂ ಪದ್ಮರಾಜನ್ ಅವರು ಗೆಲ್ಲುತ್ತಾರಾ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).