ಅಹಮದಾಬಾದ್/ನವದೆಹಲಿ: ಭಾರತ ತಂಡವು ಟಿ20 ವಿಶ್ವಕಪ್(World Cup trophy) ಗೆದ್ದು ಇಡೀ ದೇಶವೇ ಸಂಭ್ರಮಿಸುತ್ತಿರುವ ಬೆನ್ನಲ್ಲೇ, ಹೊಸ ವಿವಾದವೊಂದು ಭುಗಿಲೆದ್ದಿದೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಅವರು ವಿಶ್ವಕಪ್ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಮಾಜಿ ಕ್ರಿಕೆಟಿಗ ಹಾಗೂ ಟಿಎಂಸಿ ಸಂಸದ ಕೀರ್ತಿ ಆಜಾದ್ ತೀವ್ರವಾಗಿ ಖಂಡಿಸಿದ್ದಾರೆ.
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ಕೇವಲ ದೇವಸ್ಥಾನವೇಕೆ? ಮಸೀದಿ, ಚರ್ಚ್ ಅಥವಾ ಗುರುದ್ವಾರಕ್ಕೆ ಯಾಕೆ ಟ್ರೋಫಿ ಒಯ್ಯಲಿಲ್ಲ? ಈ ತಂಡವು ಇಡೀ ಭಾರತವನ್ನು ಪ್ರತಿನಿಧಿಸುತ್ತದೆಯೇ ಹೊರತು ಸೂರ್ಯಕುಮಾರ್ ಅಥವಾ ಜೈ ಶಾ ಅವರ ಕುಟುಂಬವನ್ನಲ್ಲ!" ಎಂದು ಕಿಡಿಕಾರಿದ್ದಾರೆ.
"ಇದು ಒಂದು ಧರ್ಮದ ವಿಜಯೋತ್ಸವವಲ್ಲ"
ಟೀಮ್ ಇಂಡಿಯಾದ ಈ ನಡೆಯನ್ನು 'ನಾಚಿಕೆಗೇಡು' ಎಂದು ಕರೆದಿರುವ ಆಜಾದ್, ಭಾರತದ 140 ಕೋಟಿ ಜನರಿಗೂ ಈ ಟ್ರೋಫಿ ಸೇರಿದ್ದಾಗಿದೆ ಎಂದು ನೆನಪಿಸಿದ್ದಾರೆ. "ನಾವು 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಕಪ್ ಗೆದ್ದಾಗ ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರಿದ್ದರು. ನಾವು ಟ್ರೋಫಿಯನ್ನು ನಮ್ಮ ಮಾತೃಭೂಮಿಗೆ ತಂದಿದ್ದೆವು. ಆದರೆ ಈಗ ಟ್ರೋಫಿಯನ್ನು ಕೇವಲ ಒಂದು ಧರ್ಮದ ಸಂಕೇತದಂತೆ ಎಳೆಯಲಾಗುತ್ತಿದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಿರಾಜ್ ಮತ್ತು ಸಂಜು ಸ್ಯಾಮ್ಸನ್ ಉಲ್ಲೇಖ
ತಮ್ಮ ವಾದಕ್ಕೆ ಪುಷ್ಟಿ ನೀಡಲು ಆಜಾದ್ ಅವರು ತಂಡದ ಇತರ ಆಟಗಾರರನ್ನು ಉದಾಹರಣೆಯಾಗಿ ನೀಡಿದ್ದಾರೆ. "ಮೊಹಮ್ಮದ್ ಸಿರಾಜ್ ಎಂದಿಗೂ ಟ್ರೋಫಿಯನ್ನು ಮಸೀದಿಗೆ ಒಯ್ಯಲಿಲ್ಲ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ 'ಪ್ಲೇಯರ್ ಆಫ್ ದ ಟೂರ್ನಮೆಂಟ್' ಆದ ಸಂಜು ಸ್ಯಾಮ್ಸನ್ ಅದನ್ನು ಚರ್ಚ್‌ಗೆ ಕೊಂಡೊಯ್ಯಲಿಲ್ಲ. ಹೀಗಿರುವಾಗ ಟ್ರೋಫಿಯನ್ನು ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿದ್ದು ಎಷ್ಟು ಸರಿ?" ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಕೀಯ ಸಂಘರ್ಷಕ್ಕೆ ನಾಂದಿ?
ಬಿಜೆಪಿ ನಾಯಕರಾದ ಅಮಿತ್ ಶಾ ಅವರ ಪುತ್ರ ಜೈ ಶಾ ಮತ್ತು ಮಾಜಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಈ ನಡೆ ಈಗ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಭಕ್ತಿ ಮತ್ತು ನಂಬಿಕೆಯ ಹೆಸರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿರುವುದನ್ನು ಅಭಿಮಾನಿಗಳು ಸಮರ್ಥಿಸುತ್ತಿದ್ದರೆ, ಮತ್ತೊಂದೆಡೆ ಕೀರ್ತಿ ಆಜಾದ್ ಅವರ "ಸರ್ವಧರ್ಮ ಸಮಭಾವ"ದ ವಾದವು ಪರ-ವಿರೋಧದ ಅಲೆ ಎಬ್ಬಿಸಿದೆ,(ಏಜೆನ್ಸೀಸ್).