ನಿತಿನ್ ನಬಿನ್ 
ದೇಶ

ನಾಳೆ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ; ಇಂದು ನಾಮಪತ್ರ ಸಲ್ಲಿಕೆ | Nitin Nabin

ನವದೆಹಲಿ: ಪಕ್ಷ ಸಂಘಟನೆಯ ಭಾಗವಾಗಿ ನಾಳೆ(ಜ. 20) ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್(Nitin Nabin) ಅವರು ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿಕ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಿಜೆಪಿ ತನ್ನ ಎಲ್ಲಾ ರಾಜ್ಯಗಳ ಸಿಎಂ & ಪಕ್ಷದ ಅಧ್ಯಕ್ಷರನ್ನು ದೆಹಲಿಗೆ ಕರೆಸಿಕೊಂಡಿದೆ.
ಕಳೆದ ಡಿಸೆಂಬರ್‌ ಆರಂಭದಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಚುನಾವಣಾ ಅಧಿಕಾರಿ ಕೆ. ಲಕ್ಷ್ಮಣ್ ಲಕ್ಷ್ಮಣ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪಕ್ಷದ ಅಧ್ಯಕ್ಷರ ಚುನಾವಣೆಗೆ ಇಂದು (ಜ. 19) ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಾಮಪತ್ರ ಸಲ್ಲಿಸಬಹುದು. ಮತ್ತು ಅದೇ ದಿನ ಸಂಜೆ 5 ರಿಂದ 6 ರವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯಬಹುದು ಎಂದಿದೆ. 
ಬಹುತೇಕ ನಿತಿನ್ ನಬಿನ್ ಅವರನ್ನು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಗತ್ಯವಿದ್ದರೆ ನಾಳೆ ಮತದಾನ ನಡೆಯಲಿದೆ. ಮತ್ತು ಅದೇ ದಿನ ಹೊಸದಾಗಿ ಆಯ್ಕೆಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಬಿಜೆಪಿ ನಾಯಕರೊಬ್ಬರು, 5,078 ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಬಹುತೇಕ ಎಲ್ಲ ಸದಸ್ಯರ ಒಪ್ಪಿಗೆಯನ್ನು ಪಡೆದ ನಂತರ ನಿತಿನ್ ನಬಿನ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲು ಪಕ್ಷವು ಈಗಾಗಲೇ ವ್ಯವಸ್ಥೆ ಮಾಡಿದೆ. ಆದಾಗ್ಯೂ, ಔಪಚಾರಿಕ ಚುನಾವಣಾ ಪ್ರಕ್ರಿಯೆಯನ್ನು ಕಾರ್ಯವಿಧಾನದ ಪ್ರಕಾರ ಪೂರ್ಣಗೊಳಿಸಲಾಗುತ್ತದೆ ತಿಳಿಸಿದ್ದಾರೆ. 
ಪಕ್ಷದ ಮೂಲಗಳ ಪ್ರಕಾರ, ಜ. 20ರಂದು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಸಿಎಂಗಳು, ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪದಾಧಿಕಾರಿಗಳನ್ನು ದೆಹಲಿಯಲ್ಲಿರುವಂತೆ ಕೇಳಿಕೊಳ್ಳಲಾಗಿದೆ. ಬಿಜೆಪಿಯ ಮುಖ್ಯ ಚುನಾವಣಾ ಅಧಿಕಾರಿ ಕೆ. ಲಕ್ಷ್ಮಣ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರ ಹೆಸರನ್ನು ಘೋಷಿಸಲಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂರು ಸೆಟ್​ಗಳನ್ನು ನಾಮಪತ್ರಗಳ್ನ ಸಲ್ಲಿಸಲಿದ್ದು, ಒಂದು ಸೆಟ್​ನಲ್ಲಿ 20ಕ್ಕೂ ಹೆಚ್ಚು ಚುನಾಯಿತ ರಾಜ್ಯಾಧ್ಯಕ್ಷ ಸಹಿ, ಮತ್ತೊಂದರಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಹಾಗೂ ನಡ್ಡಾ ಅವರ ಸಹಿ ಇರುತ್ತದೆ. ಮೂರನೇ ಸೆಟ್​ನಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿಯ ಸದಸ್ಯರ ಸಹಿ ಇರುತ್ತದೆ. ಈ ಮೂರರಲ್ಲಿ ಒಂದೇ ಹೆಸರು ನಾಮನಿರ್ದೇಶನಗೊಂಡರೆ, ಅದೇ ದಿನ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಬಿಜೆಪಿ ಅಧ್ಯಕ್ಷರ ಚುನಾವಣೆ ಸಂಬಂಧ ಚರ್ಚಿಸಿದ್ದಾರೆ. ಸಭೆಯಲ್ಲಿ ಕಾರ್ಯಾಧ್ಯಕ್ಷ ನಿತಿನ್ ನಬಿನ್, ಬಿ.ಎಲ್. ಸಂತೋಷ್, ಸುನಿಲ್ ಬನ್ಸಾಲ್, ಅರುಣ್ ಸಿಂಗ್ ಮತ್ತು ತರುಣ್ ಚುಗ್ ಉಪಸ್ಥಿತರಿದ್ದರು ಎನ್ನಲಾಗಿದೆ (ಏಜೆನ್ಸೀಸ್).