ಮಹಿಳಾ ಟಿ20 ವಿಶ್ವಕಪ್ 2026; ಭಾರತ ತಂಡ ಪ್ರಕಟ: ಹರ್ಮನ್‌ಪ್ರೀತ್ ಪಡೆಗೆ ಶಾಕ್ ಕೊಟ್ಟ ಸ್ಟಾರ್ ಆಟಗಾರ್ತಿಯರ ಗೈರು!
ನವದೆಹಲಿ: ವಿಶ್ವ ಕ್ರಿಕೆಟ್‌ನ ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಬಲಿಷ್ಠ ಭಾರತ ತಂಡವನ್ನು(India Squad for Women's T20 World Cup) ಪ್ರಕಟಿಸಿದೆ. ಜೂನ್ 14 ರಿಂದ ಆರಂಭವಾಗಲಿರುವ ಈ ಮಹಾ ಸಮರಕ್ಕೆ ಅನುಭವಿ ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಆದರೆ, ತಂಡದ ಪ್ರಕಟಣೆಯ ಬೆನ್ನಲ್ಲೇ ಭಾರತೀಯ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಅಮನಜೋತ್ ಕೌರ್ ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.
ಅಮನಜೋತ್ ಕೌರ್ ಗೈರು: ತಂಡಕ್ಕೆ ತುಂಬಲಾರದ ನಷ್ಟ?
ಭಾರತ ತಂಡದ ಬ್ಯಾಲೆನ್ಸ್ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅಮನಜೋತ್ ಕೌರ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಬಗ್ಗೆ ಮಾಹಿತಿ ನೀಡಿ, ಅಮನಜೋತ್ ಗಂಭೀರ ಗಾಯಕ್ಕೆ ಒಳಗಾಗಿದ್ದು, ಮುಂದಿನ 3 ರಿಂದ 4 ತಿಂಗಳು ಕ್ರಿಕೆಟ್ ಅಂಗಳದಿಂದ ದೂರವಿರಲಿದ್ದಾರೆ ಎಂದು ತಿಳಿಸಿದ್ದಾರೆ. ಅವರೊಂದಿಗೆ ಪ್ರತಿಭಾವಂತ ಆಟಗಾರ್ತಿ ಕಾಶ್ವಿ ಗೌತಮ್ ಕೂಡ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಆರಂಭ!
ಭಾರತ ತಂಡವು ಜೂನ್ 14 ರಂದು ತನ್ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯದೊಂದಿಗೆ ಭಾರತದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.
ಗ್ರೂಪ್ ಎ: ಭಾರತ ತಂಡವು ಬಲಿಷ್ಠ 'ಗ್ರೂಪ್ ಎ' ನಲ್ಲಿದ್ದು, ಇಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ತಂಡಗಳ ಸವಾಲನ್ನು ಎದುರಿಸಬೇಕಿದೆ. ವಿಶ್ವದ ಅತ್ಯುತ್ತಮ ತಂಡಗಳು ಒಂದೇ ಗುಂಪಿನಲ್ಲಿರುವುದರಿಂದ ಸೆಮಿಫೈನಲ್ ಹಾದಿ ಸುಲಭವಾಗಿಲ್ಲ.
ಇಂಗ್ಲೆಂಡ್ ವಿರುದ್ಧ ಅಗ್ನಿಪರೀಕ್ಷೆ
ವಿಶ್ವಕಪ್‌ಗೂ ಮುನ್ನ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೇ ಅಂತ್ಯ ಮತ್ತು ಜೂನ್ ಮೊದಲ ವಾರದಲ್ಲಿ ನಡೆಯಲಿರುವ ಈ ಸರಣಿಗೆ ವಿಶ್ವಕಪ್ ತಂಡವನ್ನೇ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಸೋತಿರುವ ಹರ್ಮನ್ ಪಡೆಗೆ, ಇಂಗ್ಲೆಂಡ್ ವಿರುದ್ಧದ ಪ್ರದರ್ಶನವು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅತಿ ಮುಖ್ಯವಾಗಿದೆ.
ಮಹಿಳಾ ಟಿ20 ವಿಶ್ವಕಪ್ 2026ಕ್ಕೆ ಭಾರತ ತಂಡ ಹೀಗಿದೆ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ನಂದಿನಿ ಶರ್ಮಾ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೀ ಚರಣಿ.
ಶ್ರೇಯಾಂಕ ಪಾಟೀಲ್ ಮೇಲೆ ಕನ್ನಡಿಗರ ಕಣ್ಣು!
ಕರ್ನಾಟಕದ ಪ್ರತಿಭೆ ಶ್ರೇಯಾಂಕ ಪಾಟೀಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಆಫ್ ಸ್ಪಿನ್ ಮತ್ತು ಕೆಳಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ಶ್ರೇಯಾಂಕ, ವಿಶ್ವಕಪ್‌ನಲ್ಲಿ ಭಾರತದ ಎಕ್ಸ್-ಫ್ಯಾಕ್ಟರ್ ಆಗುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಕಹಿಯನ್ನು ಮರೆತು, ಅಮನಜೋತ್ ಅವರಂತಹ ಪ್ರಮುಖ ಆಟಗಾರ್ತಿಯ ಅಲಭ್ಯತೆಯ ನಡುವೆಯೂ ಭಾರತ ಈ ಬಾರಿ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).