Hussain Sagar: ತಮ್ಮ ಜೀವಕ್ಕೆ, ಜೀವನಕ್ಕೆ ಎಂಥದ್ದೇ ಹೊಡೆತ ಬೀಳಲಿ, ತಾಯಿ ಮಾತ್ರ ಎಂದಿಗೂ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ ಎಂಬ ಮಾತು ಇಂದಿಗೂ ನಮ್ಮಲ್ಲಿದೆ. ಹೋದರೆ ನನ್ನ ಜೀವವೇ ಹೋಗಲಿ ಎಂದು ಮಕ್ಕಳ ಪ್ರಾಣ ಉಳಿಸಲು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ತಾಯಿ, ಅದೇ ಮಗುವನ್ನು ಕೆರೆಗೆ ಬಿಸಾಡಿ ಹೋಗುತ್ತಾಳೆ ಎಂದರೆ ನಂಬಲು ಸಾಧ್ಯವೇ? ಅಚ್ಚರಿ ಎನಿಸಿದರೂ ಇದು ನಿಜವೇ ಎಂಬುದಕ್ಕೆ ಹೈದರಾಬಾದ್ನಲ್ಲಿ ನಡೆದ ಈ ಘಟನೆಯೇ ಜ್ವಲಂತ ಸಾಕ್ಷಿ.
ತನ್ನ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಮಹಿಳೆಯೊಬ್ಬರು, ಎಷ್ಟೋ ಆಸ್ಪತ್ರೆಗಳನ್ನು ಸುತ್ತಿ, ಮಗಳ ಆರೋಗ್ಯದ ಬಗ್ಗೆ ತೋರಿಸಿದರೂ ಆಕೆ ಗುಣಮುಖಳಾಗುವ ಲಕ್ಷಣಗಳು ಕಾಣಿಸಿಲ್ಲ. ಮತ್ತೊಂದೆಡೆ, ತೀರ ಬಡತನವಿದ್ದು, ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ತನ್ನ ಮೇಲೆಯೇ ಸಂಪೂರ್ಣವಾಗಿ ಇದ್ದ ಕಾರಣ, ಮಗಳನ್ನು ಕೆರೆಗೆ ಬಿಸಾಡುವಂತೆ ಕಠೋರ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದೃಷ್ಟವಶಾತ್ ಬಾಲಕಿ ಪ್ರಾಣಪಾಯದಿಂದ ಬದುಕುಳಿದಿದ್ದು, ಸ್ಥಳೀಯ ಆಟೋ ಚಾಲಕ ಆಕೆಯನ್ನು ಸಾವಿನಿಂದ ಪಾರು ಮಾಡಿದ ಪುಣ್ಯಾತ್ಮ ಎನ್ನಲಾಗಿದೆ.
ಹಳೆಯ ಬೋಯನ್‌ಪಲ್ಲಿಯ ಹಸ್ಮತ್‌ಪೇಟ್ ನಿವಾಸಿಯಾದ ಶಬಾನಾ ಎಂಬ ಮಹಿಳೆಯನ್ನು ಆಕೆಯ ಪತಿ ಐದು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದು, ಅಂದಿನಿಂದಲೂ ಸ್ಥಳೀಯ ಮನೆಗಳಲ್ಲಿ ಕೆಲಸ ಮಾಡಿಕೊಂಡು ತನ್ನಿಬ್ಬರು ಹೆಣ್ಣುಮಕ್ಕಳನ್ನು ಸಾಕುತ್ತಿದ್ದ ಶಬಾನಾಗೆ, ಅವರ ಎರಡನೇ ಮಗಳಾದ ರುಕ್ಸಾನಾ (6) ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳು. ಮಗು ಕಳೆದ ಕೆಲವು ದಿನಗಳಿಂದ ಕರುಳಿನ ಸೋಂಕಿನಿಂದ ಬಳಲುತ್ತಿತ್ತು. ಮಗಳನ್ನು ಗುಣಪಡಿಸಲು ಹಲವು ಆಸ್ಪತ್ರೆಗಳಿಗೆ ಕರೆದೊಯ್ದಿದ್ದೇ ಆದರೂ ಎಲ್ಲಿಯೂ ಪ್ರಯೋಜನವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದ ಹಿನ್ನೆಲೆ ಹಣದ ಅವಶ್ಯಕತೆ ಎದುರಾಗಿತ್ತು.
ಉತ್ತಮ ಚಿಕಿತ್ಸೆ ಕೊಡಿಸುವುದು ಶಬಾನಾಗೆ ಹೊರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನಗೆ ಬೇರೆ ದಾರಿಯೇ ಇಲ್ಲವೆಂದು ಕಠೋರ ನಿರ್ಧಾರವನ್ನು ಕೈಗೊಂಡರು. ಅದೇ, ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಗಳನ್ನು ಹುಸೇನ್ ಸಾಗರ್ ಕರೆಗೆ ಬಿಸಾಡಿ ಹೋಗುವುದು. ಮಗಳೊಂದಿಗೆ ಇದ್ದ ಶಬಾನಾ, ನೋಡ ನೋಡುತ್ತಿದ್ದಂತೆಯೇ ಪುತ್ರಿಯನ್ನು ನೀರಿಗೆ ನೂಕಿದ್ದಾರೆ. ಈ ವೇಳೆ, ಅದೇ ದಾರಿಯಲ್ಲಿ ಹೋಗುತ್ತಿದ್ದ ಆಟೋ ಚಾಲಕರೊಬ್ಬರು ಮಗುವನ್ನು ಕಂಡು ತಕ್ಷಣವೇ ಕೆರೆಗೆ ಜಿಗಿದು ಬಾಲಕಿಯ ಜೀವವನ್ನು ಉಳಿಸಿದ್ದಾರೆ. ಸದ್ಯ ಮಗುವಿಗೆ ಗಾಂಧಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).