ಗಾಜಿಯಾಬಾದ್‌ನಲ್ಲಿ ಲಿಫ್ಟ್ ನಡುವೆ ಸಾಕು ನಾಯಿಗಳ ಜಗಳ: ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ
ಗಾಜಿಯಾಬಾದ್: ಮೊದಲೆಲ್ಲಾ ಜನರು ವಠಾರಗಳಲ್ಲಿ ಒಂದೇ ಕುಟುಂಬದ ಜನರಂತೆ ಬದುಕುತ್ತಿದ್ದರು. ಆದರೆ ಈಗ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚಾದಂತೆ ಅಲ್ಲಿನ ನಿವಾಸಿಗಳ ನಡುವಿನ ಸಣ್ಣಪುಟ್ಟ ಜಗಳಗಳೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ.
ಅದರಲ್ಲೂ ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವ ವಿಚಾರದಲ್ಲಿ ನೆರೆಹೊರೆಯವರ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಆದರೆ, ಘಾಜಿಯಾಬಾದ್‌ನ ಅಪಾರ್ಟ್ಮೆಂಟ್ವೊಂದರಲ್ಲಿ ಇದೇ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ, ಇಬ್ಬರು ಮಹಿಳೆಯರು ಪರಸ್ಪರ ಕೈಕೈ ಮಿಲಾಯಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಅಸಹ್ಯಕರ ಜಗಳ!
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ಜನಪ್ರಿಯ 'ವಿಂಡ್ಸರ್ ಪ್ಯಾರಡೈಸ್ ಸೊಸೈಟಿ'ಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 12 ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಈ ಕದನದ ದೃಶ್ಯಗಳು ಈಗ ಸೊಸೈಟಿಯ ಲಿಫ್ಟ್ (Lift Fight) ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಲಿಫ್ಟ್ ಒಳಗೆ ನುಗ್ಗುವಾಗ ಶುರುವಾದ ಕಿರಿಕ್!
ಶಿಕ್ಷಕಿ ಹಿನಾ ಬರಿ, ದೂರಿನಲ್ಲಿ ತಿಳಿಸಿರುವ ಪ್ರಕಾರ, ಶ್ವೇತಾ ಸುಬೆ ಎಂಬ ಮಹಿಳೆ ತಮ್ಮ ಸಾಕು ನಾಯಿಯೊಂದಿಗೆ ಈಗಾಗಲೇ ಲಿಫ್ಟ್‌ನ ಒಳಗೆ ಇದ್ದರು. ಹಿನಾ ಲಿಫ್ಟ್ ಪ್ರವೇಶಿಸಲು ಹೋದಾಗ, ಶ್ವೇತಾ ಅವರು ಒಳಗೆ ಬರದಂತೆ ತಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಇಬ್ಬರ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದೆ.
ಮಾತು ತಾರಕಕ್ಕೇರುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ನಾಯಿಯನ್ನು ನಿಯಂತ್ರಿಸಲು ಬಳಸುವ ಕೋಲಿನಿಂದ ಶ್ವೇತಾ ಅವರು ಹಿನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿ ಹಿನಾ ಕೈಯಿಂದ ತಡೆದಾಗ, ಶ್ವೇತಾ ಅವರ ಕನ್ನೆಗೆ ಬಾರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಸಿಸಿಟಿವಿ ವಿಡಿಯೋನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಗಳವಾಡಿಕೊಳ್ಳುತ್ತಿರುವುದು ಮತ್ತು ಕೊನೆಗೆ ಲಿಫ್ಟ್‌ನ ಹೊರಗೆ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ಬಂದು ಇಬ್ಬರನ್ನು ಬಿಡಿಸುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಈ ಹಲ್ಲೆಯಿಂದ ಆಘಾತಕ್ಕೊಳಗಾದ ಶಾಲಾ ಶಿಕ್ಷಕಿ ಹಿನಾ ಬರಿ ಅವರು ನೇರವಾಗಿ ನಂದಗ್ರಾಮ್ ಪೊಲೀಸ್ ಠಾಣೆಗೆ ತೆರಳಿ, ಆರೋಪಿ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಲಿಖಿತ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಂದಗ್ರಾಮ್ ಎಸಿಪಿ ಜಿಯಾವುದ್ದೀನ್ ಅಹ್ಮದ್, ಶಿಕ್ಷಕಿ ನೀಡಿರುವ ದೂರಿನ ಆಧಾರದ ಮೇಲೆ ಎನ್‌ಸಿಆರ್ (NCR) ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣವೇನು ಮತ್ತು ಜಗಳದ ಸಮಯದಲ್ಲಿ ಯಾರು ತಪ್ಪು ಮಾಡಿದ್ದರು ಎಂಬುದನ್ನು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಸ್ಥಳದಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಇತರೆ ನಿವಾಸಿಗಳ ಹೇಳಿಕೆಗಳನ್ನು ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ವಿಶ್ವಾಸ ನೀಡಿದ್ದಾರೆ, (ಏಜೆನ್ಸೀಸ್).