ಮೃತ ಯುವತಿ ಮುಗ್ಧಾ ದೇಶ್​ಮುಖ್​ 
ದೇಶ

ಲಂಡನ್​​ನಲ್ಲಿದ್ದೇನೆ ಎಂದಿದ್ದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆ; ಸಾವಿನ ಹಿಂದಿನ ರಹಸ್ಯವಿನ್ನೂ ನಿಗೂಢ..Pune

  • ಲಂಡನ್​ನಲ್ಲಿ ಎಂಬಿಎ ಅಭ್ಯಾಸಕ್ಕೆಂದು ತೆರಳಿದ್ದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆ.

  • ಆಹಾರ ವಿತರಣಾ ವಹಿವಾಟಿನಿಂದ ಪುಣೆಯಲ್ಲಿ ವಾಸವಾಗಿರು ಫ್ಲಾಟ್ ಪತ್ತೆ ಹಚ್ಚಿದ ಪೊಲೀಸರು.

  • ಪೋಷಕರಿಗೂ ತಿಳಿಸಿದ ಮುಗ್ಧ ದೇಶ್​ಮುಖ್​​​ ನಿಗೂಢವಾಗಿ ಬದುಕುತ್ತಿದ್ದದ್ದು ಯಾಕೆ ಎನ್ನುವುದರ ಸುತ್ತ ಪೊಲೀಸರ ತನಿಖೆ ಶುರು.

ಪುಣೆ: 2025ರಲ್ಲಿ ಲಂಡನ್​ನಲ್ಲಿ ಎಂಬಿಎ ಓದಲು ತೆರಳಿದ್ದ 34 ವರ್ಷದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ನಿಗೂಢವಾಗಿ ಭಾರತದಲ್ಲಿ ಬದುಕುತ್ತಿದ್ದದ್ದು ಯಾಕೆ. ಎಂಬಿಎ ಓದನ್ನು ಅರ್ಧಕ್ಕೆ ಬಿಟ್ಟು ಬಂದಿದ್ಯಾಕೆ. ಆಕೆಯ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿದೆ.

ಹೌದು, ಮುಗ್ಧಾ ದೇಶ್​ಮುಖ್​ ಎನ್ನುವ ಯುವತಿ ಲಂಡನ್​ನಲ್ಲಿ ಎಂಬಿಎ ಓದಲು 2025 ಜುಲೈನಲ್ಲಿ ತೆರಳಿದ್ದರು. ಆದರೆ, 2026 ಅಕ್ಟೋಬರ್​ನಲ್ಲಿ ಮಹಾರಾಷ್ಟ್ರದ ಪುಣೆಯ ತಮ್ಮ ಫ್ಲಾಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆನ್​ಲೈನ್​ ಫುಡ್​ ಫ್ಲಾಟ್​ಫಾರ್ಮ್​ನೊಂದಿಗೆ ನಡೆಸಿದ್ದ ವಹಿವಾಟು, ಆಕೆ ಎಲ್ಲಿದ್ದಾರೆ ಎನ್ನುವುದರ ಸುಳಿವು ನೀಡಲು ಸಹಕರಿಸಿತು.

ಪುಣೆಯಲ್ಲಿ ನಿಗೂಢ ವಾಸ

ಛತ್ರಪತಿ ಸಂಭಾಜಿನಗರದ ನಿವಾಸಿ ಮುಗ್ಧಾ ದೇಶ್​ಮುಖ್​ ಕಳೆದ ವರ್ಷ 2025 ಜುಲೈನಲ್ಲಿ ಎಂಬಿಎಗಾಗಿ ಲಂಡನ್​ಗೆ ತೆರಳಿ, 2026ರಲ್ಲಿ ಪೋಷಕರಿಗೆ ತಿಳಿಯದಂತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಪುಣೆಯ ಪಿಂಪ್ರಿ ಚಿಂಚ್​ವಾಡ್​ ವ್ಯಾಪ್ತಿಯ ಗಹುಂಜೆಯಲ್ಲಿ ಲೋಧಾ ಬೆಲ್ಮಂಡೋದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದುಕೊಂಡು, ಇಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸುತ್ತಾ, ನಿಗೂಢವಾಗಿ ವಾಸ ಮಾಡುತ್ತಿದ್ದರು.

ಲಂಡನ್​ಗೆ ತೆರಳಿದ್ದ ಮುಗ್ಧ ಆಗಸ್ಟ್​ಗೆ ವಾಪಸ್

ಮುಗ್ಧಾ ದೇಶ್​​ಮುಖ್​ ಎಂಬಿಎಗಾಗಿ ಲಂಡನ್​ನಲ್ಲೇ ಇದ್ದಾರೆ ಎಂದು ಪೋಷಕರು ನಂಬಿದ್ದರು. ನಿತ್ಯ ಆಕೆಯೊಂದಿಗೆ ಸಂಪರ್ಕದಲ್ಲಿ ಸಹ ಇದ್ದರು. ಆದರೆ, ಆಕೆ ಭಾರತಕ್ಕೆ ಬಂದಿದ್ದಾಳೆ ಎನ್ನುವ ಸುಳಿವೇ ಇರಲಿಲ್ಲ. ಅ.24ರಂದು ಆಕೆಗೆ ಎಷ್ಟೇ ಕರೆ ಮಾಡಿದರೂ ಕಾಲ್​ ಕನೆಕ್ಟ್ ಆಗಲಿಲ್ಲ. ಕೊನೆಗೆ ಫೋನ್​ ಸ್ವಿಚ್​ ಆಫ್​ ಆಗಿತ್ತು. ಇದರಿಂದ ಆತಂಕಗೊಂಡ ಅವರ ತಂದೆ ಅವಿನಾಶ್​ ದೇಶ್​ಮುಖ್​ ಲಂಡನ್​ನಲ್ಲಿರುವ ಆಕೆಯ ಸ್ನೇಹಿತರಿಗೆ ಕರೆ ಮಾಡಿದಾಗ, ಮುಗ್ಧ ಅವರು ಆಗಸ್ಟ್​ನಲ್ಲಿಯೇ ಲಂಡನ್​ ತೊರೆದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಶಾಕ್​ಗೊಳಗಾದ ಅವರ ತಂದೆ ಪೊಲೀಸರಿಗೆ ದೂರು ಕೊಟ್ಟರು.

ಮುಗ್ಧ ಬ್ಯಾಂಕ್​ ಖಾತೆ ವಹಿವಾಟನ್ನು ಪರಿಶೀಲಿಸಿದ ಅವಿನಾಶ್​ ದೇಶ್​ಮುಖ್​, ಅಕ್ಟೋಬರ್ 8ರಿಂದ 25ರವರೆಗೆ ಆಹಾರ ವಿತರಣೆ ಮತ್ತು ಆನ್​ಲೈನ್​ ಮೂಲಕ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಈ ಪೈಕಿ ಛತ್ರಪತಿ ಸಂಭಾಜಿನಗರದ ಓಸ್ಮಾನ್‌ಪುರ ಪ್ರದೇಶಕ್ಕೆ ಸಂಬಂಧಿಸಿದ ವಹಿವಾಟು ಕೂಡ ಇತ್ತು. ಇದರಿಂದ ಮುಗ್ಧಾ ಭಾರತಕ್ಕೆ ಮರಳಿರುವ ಶಂಕೆ ವ್ಯಕ್ತವಾಗಿದೆ.

ಛತ್ರಪತಿ ಸಂಭಾಜಿನಗರದ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಪಿಂಪ್ರಿ ಚಿಂಚ್​ವಾಡ್​ನ ಶಿರ್ಗಾಂವ್​ ಪೊಲೀಸರು ಗುಹಂಜೆ ಲೋಧಾ ಬೆಲ್ಮಂಡೋ ಫ್ಲಾಟ್​ಗೆ ತೆಳಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ, ಕೀಲಿ ಮಾಡುವವರ ಸಹಾಯದಿಂದ ಒಳಕ್ಕೆ ಪ್ರವೇಶಿಸಲಾಯಿತು.

ಮುಗ್ಧ ದೇಶ್​ಮುಖ್​ರ ಮೃತದೇಹ ಒಳಗೆ ಪತ್ತೆಯಾಗಿತ್ತು. ಆದರೆ, ಆಕೆಯ ದೇಹದ ಮೇಲೆ ಯಾವುದೇ ಗಾಯ ಕಂಡುಬಂದಿಲ್ಲ. ಸಾವಿಗೆ ನಿಖರ ಮಾಹಿತಿಯೂ ಸಿಕ್ಕಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರೂ ವರದಿಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ನಿಖರ ಮಾಹಿತಿಗಾಗಿ ವಿವಿಧ ಅಂಗಾಗಳ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಮುಗ್ಧಾ ಸಾವಿಗೆ ಕಾರಣ ಏನು?

ಮುಗ್ಧಾ ಭಾರತಕ್ಕೆ ಬಂದಿದ್ದು, ಆಗಸ್ಟ್​ನಲ್ಲಿ. ಆದರೆ, ಏಪ್ರಿಲ್​ನಲ್ಲಿಯೇ ಫ್ಲಾಟ್ ಖರೀದಿ ಮಾಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಅವರು ಪೋಷಕರಿಗೆ ಹೇಳದೆ ಲಂಡನ್​ನಿಂದ ಭಾರತಕ್ಕೆ ಬಂದಿದ್ದು ಯಾಕೆ. ಪುಣೆಯಲ್ಲಿ ಏಕಾಂಗಿ ವಾಸವಾಗಿದ್ದು ಏಕೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ, (ಏಜೆನ್ಸೀಸ್).