ರಾಂಚಿ: ಜಾರ್ಖಂಡ್ನ ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದ ಮಹಿಳೆಯೊಬ್ಬರ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬರು ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಕಾನ್ಸ್ಟೇಬಲ್ ಬಂಧಿಸಿದ್ದು, ಪಿಎಸ್ಐ ಸೇರಿ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 29ರ ರಾತ್ರಿ ಈ ಘಟನೆ ನಡೆದಿದ್ದು, ಗಮ್ಹರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
ಮಹಿಳೆ ನೀಡಿದ ದೂರಿನಲ್ಲಿ, ಗುರುವಾರ ಸಂಜೆ ಪತಿಯೊಂದಿಗೆ ಜಗಳವಾದಾಗ, ಆತ ತನ್ನನ್ನು ಹೊಡೆಯಬಹುದೆಂಬ ಭಯದಿಂದ ತಾನು ಮನೆಯಿಂದ ಹೊರಬಂದಿದ್ದು, ನೆರೆಮನೆಯೊಂದಕ್ಕೆ ತೆರಳಿ, ತಮ್ಮ ಮೊಬೈಲ್ ಫೋನ್ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದು, ಕೂಡಲೇ ಅಲ್ಲಿಗೆ ಆಗಮಿಸಿದ ಪಿಸಿಆರ್ ವಾಹನವು ಆಕೆಯನ್ನು ಆ ರಾತ್ರಿಯೇ ಪೊಲೀಸ್ ಠಾಣೆಗೆ ಕರೆತಂದಿತು ಎಂದು ಹೇಳಿದ್ದಾರೆ.
ಕರ್ತವ್ಯದಲ್ಲಿದ್ದ ಅಧಿಕಾರಿಗಳು ತನಗೆ ವಿಶ್ರಾಂತಿ ಪಡೆಯಲು ಪೊಲೀಸ್ ಠಾಣೆಯಲ್ಲಿ ಒಂದು ಕೊಠಡಿ ಒದಗಿಸಿದರು. ಬಳಿಕ ಆಕೆ ಕೋಣೆಯಲ್ಲಿದ್ದಾಗ, ಪೊಲೀಸ್ ಠಾಣೆಯಲ್ಲಿ ವೈರ್ಲೆಸ್ ಆಪರೇಟರ್ ಆಗಿದ್ದ ಆರೋಪಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸ್ವರ್ಗಿಯಾರಿ ಅವರು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಸೆರೈಕೇಲಾ) ಅನುಭವ್ ಭಾರದ್ವಾಜ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಎಸ್ಡಿಪಿಒ ವರದಿಯ ಆಧಾರದ ಮೇಲೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ತನಿಖೆ ಮುಂದುವರೆದಿದೆ (ಏಜೆನ್ಸೀಸ್).