ಮಹಾರಾಷ್ಟ್ರ: ದೀಪಾವಳಿ ಹಬ್ಬದ ಸಂಭ್ರಮವನ್ನು ತಾಯಿಯ ಮನೆಯಲ್ಲಿ ಕಳೆಯಬೇಕೆಂದು ಎರಡೂವರೆ ವರ್ಷದ ಪುಟ್ಟ ಮಗಳೊಂದಿಗೆ ಬಂದಿದ್ದ 35 ವರ್ಷದ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದಾರೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಬೆಚ್ಚಿಬೀಳಿಸಿದ್ದು, ಕೊನೆಯದಾಗಿ ಆಕೆಯ ಜೊತೆಗಿದ್ದ ಸ್ನೇಹಿತನ ನಡವಳಿಕೆ ಮತ್ತು ಆತ ಹೇಳುತ್ತಿರುವ ಕಥೆ ಪೊಲೀಸರಿಗೆ ತೀವ್ರ ಅನುಮಾನ ಹುಟ್ಟಿಸಿದೆ. ಪುಣೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರ್ದಾ ತುರ್ಕರ್ (35) ಮೃತ ದುರ್ದೈವಿಯಾಗಿದ್ದಾರೆ.
2024ರಲ್ಲಿ ವಿವಾಹವಾಗಿದ್ದ ವರ್ದಾ ಅವರ ಪತಿ ಇಂದೋರ್‌ನಲ್ಲಿ ನೆಲೆಸಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ವರ್ದಾ ತಮ್ಮ ಎರಡೂವರೆ ವರ್ಷದ ಪುಟ್ಟ ಕಂದಮ್ಮನೊಂದಿಗೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿರುವ ತವರು ಮನೆಗೆ ಬಂದಿದ್ದರು. ಹಬ್ಬದ ಸಡಗರದಲ್ಲಿದ್ದ ಕುಟುಂಬಕ್ಕೆ ಶನಿವಾರ ಸಂಜೆ ಆಘಾತವೊಂದು ಎದುರಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ಸಂಜೆ ಸುಮಾರು 4 ಗಂಟೆಗೆ ವರ್ದಾ ತಮ್ಮ ಸ್ನೇಹಿತ ನಿತೇಶ್ ಅಗರ್ವಾಲ್ ಎಂಬಾತನೊಂದಿಗೆ ವಾಯಂಗಂಗಾ ನದಿಯ ದಡಕ್ಕೆ ವಿಹಾರಕ್ಕೆಂದು ತೆರಳಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ನಿತೇಶ್, ವರ್ದಾ ಕುಟುಂಬಸ್ಥರಿಗೆ ಕರೆ ಮಾಡಿ ಯಾವುದೋ ಅಹಿತಕರ ಘಟನೆ ನಡೆದಿದೆ ಎಂದು ಆತಂಕದಿಂದ ತಿಳಿಸಿದ್ದಾನೆ. ಗಾಬರಿಗೊಂಡ ಸಂಬಂಧಿಕರು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿಭಾಗದಲ್ಲಿರುವ ಬೊಂಡ್ರಾಣಿ ಅರಣ್ಯ ಪ್ರದೇಶಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ಕಂಡ ದೃಶ್ಯ ಎದೆ ಝಲ್ಲೆನ್ನುವಂತಿತ್ತು — ವರ್ದಾ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ತಕ್ಷಣವೇ ಅವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಸಂಜೆ 7 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು.
ವರ್ದಾ ಅವರ ಮೇಲೆ ಹರಿತವಾದ ಆಯುಧದಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ನೇಹಿತ ನಿತೇಶ್ ಅಗರ್ವಾಲ್ ಪೊಲೀಸರ ಮುಂದೆ ಹೊಸದೊಂದು ಕಥೆ ಕಟ್ಟಿದ್ದು, ಅಪರಿಚಿತ ಮುಖವಾಡಧಾರಿಗಳು ನಮ್ಮ ಮೇಲೆ ಏಕಾಏಕಿ ದಾಳಿ ನಡೆಸಿ ದರೋಡೆ ಮಾಡಿದರು ಎಂದು ಹೇಳಿಕೊಂಡಿದ್ದಾನೆ. ಆದರೆ, ಮುಖವಾಡಧಾರಿಗಳು ದಾಳಿ ನಡೆಸಿದ್ದೇ ನಿಜವಾಗಿದ್ದರೆ, ಜೊತೆಗಿದ್ದ ನಿತೇಶ್ ಮೈಮೇಲೆ ಒಂದು ಸಣ್ಣ ಗಾಯವೂ ಆಗಿಲ್ಲವೇಕೆ ಎಂಬ ಪ್ರಶ್ನೆ ಪೊಲೀಸರಿಗೆ ಎದುರಾಗಿದೆ. ಅಷ್ಟೇ ಅಲ್ಲದೆ, ಆತನ ಪ್ರತಿ ಹೇಳಿಕೆಯಲ್ಲೂ ಗೊಂದಲ ಮತ್ತು ವಿರೋಧಾಭಾಸಗಳು ಎದ್ದು ಕಾಣುತ್ತಿವೆ.
ಇದೇ ಕಾರಣಕ್ಕೆ ಪೊಲೀಸರು ನಿತೇಶ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದರೋಡೆಯ ನಾಟಕವಾಡಿ ಸ್ನೇಹಿತನೇ ಈ ಹತ್ಯೆ ಮಾಡಿದ್ದಾನೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ನಿಗೂಢ ಕಾರಣವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ತನಿಖೆಯ ನಂತರವಷ್ಟೇ ಅಸಲಿ ಸತ್ಯ ಹೊರಬರಲಿದೆ.