ರಾಹುಲ್ ಮತ್ತು ಸ್ವಪ್ನಾ ದೇವಿ ( Woman Eloped )
- ಮಗಳ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಂದಿಗೆ ಪರಾರಿಯಾಗಿದ್ದ ಮಹಿಳೆ ಮತ್ತೆ ಎಸ್ಕೇಪ್
- ಭಾವಿ ಅಳಿಯನಿಗೆ ಕೈಕೊಟ್ಟು ಆತನ ಭಾವನ ಜತೆ ಓಡಿ ಹೋದ 43 ವರ್ಷದ ಮಹಿಳೆ
- ಮದುವೆಯ ನಂತರ ಸ್ವಪ್ನಾ ದೇವಿಯ ನಡೆ ಬದಲಾಯಿತು ಎಂದು ಭಾವಿ ಅಳಿಯನಾಗಬೇಕಿದ್ದ ರಾಹುಲ್ ಆರೋಪ
Woman Eloped : ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಮಗಳ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಂದಿಗೆ ಕೆಲವು ತಿಂಗಳುಗಳ ಹಿಂದೆ ಎಸ್ಕೇಪ್ ಆಗಿದ್ದ 43 ವರ್ಷದ ಮಹಿಳೆ ಇದೀಗ ಮತ್ತೆ ಬೇರೊಬ್ಬನ ಜತೆ ಪರಾರಿಯಾಗಿದ್ದಾಳೆ.
ಕೆಲವು ತಿಂಗಳುಗಳ ಹಿಂದೆ ರಾಹುಲ್ ಹೆಸರಿನ ಯುವಕ, ತನ್ನ ಮದುವೆಗೆ ಕೇವಲ 12 ದಿನಗಳು ಬಾಕಿ ಇರುವಾಗಲೇ ತನ್ನ ಭಾವಿ ಅತ್ತೆ ಸ್ವಪ್ನಾ ದೇವಿಯ ಜತೆ ಓಡಿಹೋಗಿದ್ದ. ಅಲ್ಲದೆ, ಆಕೆಯನ್ನು ಮದುವೆ ಸಹ ಆದ. ಈ ಘಟನೆ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಇದೀಗ, ಸ್ವಪ್ನಾ ದೇವಿ ತನ್ನ ಹೊಸ ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ.
ಸ್ವಪ್ನಾ ತನ್ನ ಸಹೋದರಿಯ ಪತಿಯೊಂದಿಗೆ ಓಡಿಹೋಗಿದ್ದಾಳೆ ಎಂದು ರಾಹುಲ್, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಪ್ನ ಮತ್ತು ನನ್ನ ಭಾವ ದೇವೇಂದ್ರ, 2 ಲಕ್ಷ ರೂಪಾಯಿ ಮತ್ತು ಒಂದಿಷ್ಟು ಆಭರಣಗಳನ್ನು ಕದ್ದು ಮನೆಯಿಂದ ಎಸ್ಕೇಪ್ ಆಗಿದ್ದಾರೆ ಎಂದು ರಾಹುಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಈ ಆರೋಪಗಳನ್ನು ದೇವೇಂದ್ರ ಅವರು ನಿರಾಕರಿಸಿದ್ದಾರೆ. ಅಲ್ಲದೆ, ನಾನು ಪ್ರಸ್ತುತ ಗುಜರಾತ್‌ನಲ್ಲಿದ್ದೇನೆ ಮತ್ತು ಸ್ವಪ್ನಾ ದೇವಿ ನನ್ನೊಂದಿಗೆ ಇಲ್ಲ ಎಂದು ದೇವೇಂದ್ರ ಹೇಳುತ್ತಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಸ್ವಪ್ನಾಳ ಮಗಳಿಗೂ ರಾಹುಲ್ಗೂ ಆರಂಭದಲ್ಲಿ ನಿಶ್ಚಿತಾರ್ಥ ಆಗಿತ್ತು. ಇದರ ನಡುವೆ ಮನೆಗೆ ಬಂದು ಹೋಗುತ್ತಿದ್ದ ಭಾವಿ ಅಳಿಯನ ಮೇಲೆ ಸ್ವಪ್ನಾಗೆ ಮನಸ್ಸಾಗಿತ್ತು. ರಾಹುಲ್ ಕೂಡ ಭಾವಿ ಅತ್ತೆಯ ಮೇಲೆ ಕಣ್ಣಾಕ್ಕಿದ್ದ. ಬಳಿಕ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಮದುವೆಗೆ ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿರುವಾಗಲೇ ಸ್ವಪ್ನಾ, ರಾಹುಲ್ ಜತೆ ಎಸ್ಕೇಪ್ ಆದಳು.
ಕೊನೆಗೆ ಸಂಬಂಧಿಕರ ವಿರೋಧದ ನಡುವೆಯೂ, ಇಬ್ಬರೂ ವಿವಾಹವಾದರು ಮತ್ತು ಬಿಹಾರಕ್ಕೆ ತೆರಳಿ ಜತೆಯಾಗಿ ಜೀವನ ನಡೆಸಲು ಆರಂಭಿಸಿದರು. ಈ ವೇಳೆ ಸ್ವಪ್ನಾ ತನ್ನ ಹೆಸರನ್ನು ಬದಲಾಯಿಸಿಕೊಂಡಳು. ಆದಾಗ್ಯೂ, ಮದುವೆಯ ನಂತರ ಸ್ವಪ್ನಾಳ ನಡೆ ಬದಲಾಯಿತು ಅನ್ನೋದು ರಾಹುಲ್ ಆರೋಪ. ಆಕೆ ನನಗೆ ವಿಷ ನೀಡಿ ಕೊಲ್ಲಲು ಪ್ರಯತ್ನಿಸಿದಳು ಎಂದು ರಾಹುಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ, ರಾಹುಲ್ ಅಲಿಗಢದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಘಟನೆ ಬಿಹಾರದಲ್ಲಿ ನಡೆದಿದ್ದು, ಅಲ್ಲಿಗೆ ಹೋಗಿ ದೂರು ನೀಡಬೇಕೆಂದು ಯುಪಿ ಪೊಲೀಸರು ರಾಹುಲ್‌ಗೆ ತಿಳಿಸಿದ್ದಾರೆ. ಇದು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರಕರಣವಲ್ಲ ಎಂದು ಯುಪಿ ಪೊಲೀಸರು ರಾಹುಲ್‌ಗೆ ವಿವರಿಸಿದ್ದಾರೆ.
ಕುಡುಕ ಗಂಡನ ಕಿರುಕುಳದಿಂದಾಗಿ ಓಡಿ ಹೋದೆ
ಈ ಹಿಂದೆ ತನ್ನ ಭಾವಿ ಅಳಿಯನ ಜತೆ ಓಡಿ ಹೋದಾಗ ಕುಟುಂಬಸ್ಥರು ದೂರು ನೀಡಿದ್ದರು. ಬಳಿಕ ಅಲಿಗಢ ಪೊಲೀಸರು ಸ್ವಪ್ನಾ ಮತ್ತು ರಾಹುಲ್ ಇಬ್ಬರನ್ನು ಪತ್ತೆ ಮಾಡಿ, ತಮ್ಮ ವಶಕ್ಕೆ ಪಡೆದುಕೊಂಡರು. ಈ ವೇಳೆ ರಾಹುಲ್ ಜೊತೆ ಓಡಿ ಹೋಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದ ಸ್ವಪ್ನಾ, ತನ್ನ ಕುಡುಕ ಗಂಡನ ಕಿರುಕುಳದಿಂದಾಗಿ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದೇನೆ ಎಂದಿದ್ದಳು. ಅಲ್ಲದೆ, ತನ್ನ ಮಗಳು ಆಗಾಗ ತನ್ನೊಂದಿಗೆ ಜಗಳವಾಡುತ್ತಿದ್ದಳು ಅಂತಾನೂ ಸಪ್ನಾ ಹೇಳಿದ್ದಳು. ಪ್ರಕರಣ ದಾಖಲಾಗಿದ್ದರಿಂದ ನಾನು ಮನೆಗೆ ವಾಪಸ್ ಬಂದೆ. ಅದೇನೆ ಆಗಲಿ ನಾನು ಮಾತ್ರ ಗೆಳೆಯ ರಾಹುಲ್ ಜೊತೆಯಲ್ಲೇ ವಾಸಿಸುತ್ತೇನೆ ಎಂದು ಸಪ್ನಾ ಪಟ್ಟು ಹಿಡಿದಿದ್ದರು. ಕೊನೆಗೆ, ರಾಹುಲ್ನನ್ನೇ ಆಕೆ ಮದುವೆಯಾದಳು. ಇದೀಗ ಬೇರೊಬ್ಬನ ಜತೆ ಆಕೆ ಓಡಿ ಹೋಗಿದ್ದಾಳೆ, (ಏಜೆನ್ಸೀಸ್).