ಭಾರತದ ಡಿಎನ್‌ಎದಲ್ಲೇ ಏಕತೆಯಲ್ಲಿ ವೈವಿಧ್ಯತೆಯಿದೆ ಎಂಬ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆಯನ್ನು ಟೀಕಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal), ಬರೀ ಮಾತುಗಳು ಮುಖ್ಯವಲ್ಲ, ಮಾಡುವ ಕೆಲಸಗಳು ಮಾತನಾಡಬೇಕು ಎಂದಿದ್ದಾರೆ. ದೇಶದ ಒಳಗಡೆ ಈ ವಿಚಾರದ ಬಗ್ಗೆ ಮೌನ ವಹಿಸುವ ಭಾಗವತ್ ಅವರು ವಿದೇಶದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಭಾಷಣಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿರುವ ಸಿಬಲ್, ನ್ಯೂಯಾರ್ಕ್‌ನಲ್ಲಿ ಭಾಗವತ್: ವೈವಿಧ್ಯತೆಯು ನಮ್ಮ ಸಹಜ ಏಕತೆಯ ಅಲಂಕಾರವಾಗಿದೆ. ಅದನ್ನು ರಕ್ಷಿಸಬೇಕು. ವಿದೇಶದಲ್ಲಿ ಜಾಣತನದ ಮಾತುಗಳು, ದೇಶದ ಒಳಗಡೆ ಮೌನ. ಮಾತುಗಳು ಮುಖ್ಯವಲ್ಲ, ಕೆಲಸಗಳು ಮಾತನಾಡಬೇಕು! ಎಂದು ಬರೆದುಕೊಂಡಿದ್ದಾರೆ. ಭಾಗವತ್ ಅವರ ಈ ಹೇಳಿಕೆಯು ವಿದೇಶದಲ್ಲಿ ಜಾಣತನದ ಮಾತುಗಳು ಆದರೆ ದೇಶದಲ್ಲಿ ಮೌನ ಎಂದು ಸಿಬಲ್ ವಿವರಿಸಿದ್ದಾರೆ.
ಅಮೆರಿಕದಲ್ಲಿ ಭಾಗವತ್ ಹೇಳಿದ್ದೇನು...?
ಏಕತೆ ಮತ್ತು ವೈವಿಧ್ಯತೆ ಎರಡೂ ಭಾರತದ ಡಿಎನ್‌ಎಯಲ್ಲೇ ಇವೆ ಎಂದು ಹೇಳಿದ ಭಾಗವತ್, ಪ್ರತಿಯೊಂದು ದೇಶಕ್ಕೂ ಈಡೇರಿಸಲು ಒಂದು ಉದ್ದೇಶ ಮತ್ತು ಸಾಧಿಸಲು ಒಂದು ವಿಧಿ ಇರುತ್ತದೆ ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಉಲ್ಲೇಖಿಸಿದರು. ಭಾರತಕ್ಕೆ ನೀಡಲಾದ ವಿಧಿ ಏನು..? ಭಾರತವು ಈ ಏಕತೆಯಲ್ಲಿ ವೈವಿಧ್ಯತೆಯನ್ನು ಅರಿತುಕೊಳ್ಳಲು ಮತ್ತು ಕಾಲಕಾಲಕ್ಕೆ ಜಗತ್ತಿಗೆ ಅದನ್ನು ಅರಿತುಕೊಳ್ಳುವಂತೆ ಮಾಡಲು ಅಲ್ಲಿದೆ. ನಾವು ಒಂದಾಗಿದ್ದೇವೆ, ಮತ್ತು ಈ ವೈವಿಧ್ಯತೆಯ ಕಾರಣದಿಂದಾಗಿ, ಆ ಏಕತೆಯು ಅಲಂಕರಿಸಲ್ಪಟ್ಟಿದೆ ಎಂದು ಅವರು ಹೇಳಿದರು.