ಬಿಹಾರದ ಶಾಸಕರ ತರಬೇತಿ ಶಿಬಿರದಲ್ಲಿ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಖಡಕ್ ಮಾತು
- ಚುನಾವಣೆಯಲ್ಲಿ ಗೆಲ್ಲುವುದು ಸುಲಭ, ಜನರ ನಂಬಿಕೆ ಗಳಿಸುವುದು ಮುಖ್ಯ!
- ಬಿಹಾರದ ಶಾಸಕರ ತರಬೇತಿ ಶಿಬಿರದಲ್ಲಿ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಖಡಕ್ ಮಾತು
- ಬಿಹಾರದ ಅಭಿವೃದ್ಧಿ ಹಾಗೂ ರಾಜಕಾರಣಿಗಳ ಜವಾಬ್ದಾರಿ ಬಗ್ಗೆ ಲೆಕ್ಚರ್
ಪಾಟ್ನಾ: ಚುನಾವಣೆಯಲ್ಲಿ ಗೆಲ್ಲುವುದು ಕೇವಲ ಮೊದಲ ಹೆಜ್ಜೆ ಅಷ್ಟೇ. ವೋಟ್ ಹಾಕಿ ಗೆಲ್ಲಿಸಿದ ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಜವಾದ ನಾಯಕತ್ವ, ಎಂದು ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ (C P Radhakrishnan) ರಾಜಕಾರಣಿಗಳಿಗೆ ಸಂದೇಶ ನೀಡಿದ್ದಾರೆ.
ಗಯಾದಲ್ಲಿ ನಡೆದ ಬಿಹಾರ ಶಾಸಕರ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳಿಗೆ ಜವಾಬ್ದಾರಿಯ ಪಾಠ ಮಾಡಿದರು.
ಮಹಾನ್ ನಾಯಕರನ್ನು ನೀಡಿದ ಪುಣ್ಯಭೂಮಿ!
ಬಿಹಾರದ ರಾಜಕೀಯ ಪ್ರಜ್ಞೆಯನ್ನು ಕೊಂಡಾಡಿದ ಉಪರಾಷ್ಟ್ರಪತಿಗಳು, ದೇಶದ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಬಿಹಾರ ಯಾವಾಗಲೂ ಮಾರ್ಗದರ್ಶಕನಾಗಿ ನಿಂತಿದೆ ಎಂದರು. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ತುರ್ತು ಪರಿಸ್ಥಿತಿಯ ಹೋರಾಟದವರೆಗೆ ಬಿಹಾರ ದೇಶಕ್ಕೆ ಹೊಸ ದಾರಿ ತೋರಿಸಿದೆ. ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್ ಮತ್ತು ಕರ್ಪೂರಿ ಠಾಕೂರ್ ರಂತಹ ಮಹಾನ್ ನಾಯಕರನ್ನು ನೀಡಿದ ಈ ಪುಣ್ಯಭೂಮಿ ಭಾರತೀಯ ರಾಜಕೀಯಕ್ಕೆ ಹೊಸ ಶಕ್ತಿ ತುಂಬಿದೆ ಎಂದು ನೆನಪಿಸಿಕೊಂಡರು.
ಸದನ ಅಡ್ಡಿಪಡಿಸುವುದು ಸರಿಯಲ್ಲ
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಚುನಾವಣೆ ಮುಗಿದ ಮೇಲೆ ಎಲ್ಲರ ಏಕೈಕ ಗುರಿ ಅಭಿವೃದ್ಧಿ ಮಾತ್ರ ಆಗಿರಬೇಕು. ಶಾಸಕಾಂಗದ ಕಲಾಪಗಳನ್ನು ಪದೇ ಪದೇ ಅಡ್ಡಿಪಡಿಸುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯಾವುದೇ ಸಾರ್ವಜನಿಕ ಸಮಸ್ಯೆ ಇದ್ದರೂ ಅದನ್ನು ಜಗಳವಾಡಿ ಸಮಯ ವ್ಯರ್ಥ ಮಾಡುವ ಬದಲು, ಗಂಭೀರ ಚರ್ಚೆ ಮತ್ತು ಸಂವಾದಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಶಾಸಕರಿಗೆ ಕಿವಿಮಾತು ಹೇಳಿದರು.
ಬಿಹಾರ ಬೆಳೆಯದಿದ್ದರೆ ಭಾರತ ಸೂಪರ್ ಪವರ್ ಆಗಲ್ಲ!
ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಗಯಾದ ಪವಿತ್ರ ಭೂಮಿಯಿಂದ ಪ್ರತಿನಿಧಿಗಳು ಕರುಣೆ ಮತ್ತು ನಿಸ್ವಾರ್ಥ ಸೇವೆಯ ಸ್ಫೂರ್ತಿ ಪಡೆಯಬೇಕು ಎಂದ ರಾಧಾಕೃಷ್ಣನ್, ರಾಜ್ಯದ ಪ್ರಮುಖ ಸಮಸ್ಯೆಯೊಂದರ ಬಗ್ಗೆ ಮಾತನಾಡಿದರು.
ಬಿಹಾರದಿಂದ ಯುವಕರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಬೇಕು. ಬಿಹಾರವನ್ನೇ ಒಂದು ದೊಡ್ಡ ಉದ್ಯೋಗದ ಹಬ್ ಆಗಿ ಬದಲಾಯಿಸಬೇಕು ಎಂದು ಕರೆ ನೀಡಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕನಸು ನನಸಾಗಬೇಕಾದರೆ, ಅದಕ್ಕೆ ಬಿಹಾರದ ಅಭಿವೃದ್ಧಿ ಅತಿ ಮುಖ್ಯ ಎಂದು ಅವರು ಪ್ರತಿಪಾದಿಸಿದರು, (ಏಜನ್ಸೀಸ್).