ವಿರೋಧ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡು ಯೂಟರ್ನ್ ಹೊಡೆದ್ರಾ ಅಣ್ಣಾಮಲೈ..?  
ದೇಶ

ನಮ್ಮ ಅಜೆಂಡಾನೇ ಬೇರೆ, ಸಿಜೆಪಿ ಅವರದ್ದೇ ಬೇರೆ!....ವಿರೋಧ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡು ಯೂಟರ್ನ್ ಹೊಡೆದ್ರಾ ಅಣ್ಣಾಮಲೈ..? | Annamalai

ಚೆನ್ನೈ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ವಿರುದ್ಧದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದ ನಂತರ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅಣ್ಣಾಮಲೈ (Annamalai) ಒಂದು ದಿನದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

ಚೆನ್ನೈ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ವಿರುದ್ಧದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದ ನಂತರ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅಣ್ಣಾಮಲೈ (Annamalai) ಒಂದು ದಿನದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

ತಾವೇ ಆರಂಭಿಸಿರುವ ವೀ ದಿ ಲೀಡರ್ಸ್ ರಾಜಕೀಯ ಚಳವಳಿಯ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಣ್ಣಾಮಲೈ, ಒಂದೆಡೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅದೇ ರೀತಿಯಲ್ಲಿ ಸಿಜೆಪಿ ಪ್ರತಿಭಟನೆಗಳ ಹಿಂದಿನ ಮೂಲ ಕಾಳಜಿಯನ್ನು ಬೆಂಬಲಿಸುವುದಾಗಿ ತಿಳಿಸಿದರು.

ನಮ್ಮದು ಕಾಕ್ರೋಚ್ ಜನತಾ ಪಕ್ಷದೊಂದಿಗೆ ಯಾವುದೇ ರಾಜಕೀಯ ಸಂಬಂಧವಿಲ್ಲ ಮತ್ತು ನಾವು ಎಂದಿಗೂ ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ಅವರ ಕಾರ್ಯಸೂಚಿಯೂ ಬೇರೆ, ನಮ್ಮ ಕಾರ್ಯಸೂಚಿಯೂ ಬೇರೆ ಎಂದು ಹೇಳಿದರು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅಥವಾ ಸಂಘಟನೆಗೂ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಮತ್ತು ಹೋರಾಡುವ ಮೂಲಭೂತ ಹಕ್ಕಿದೆ ಎಂಬುದನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಜಿರಳೆಗಳಿಗೆ ಬಿಜೆಪಿ ನೆರವು...? ದೆಹಲಿ ನಾಯಕನ ಉದಾಹರಣೆ ನೀಡಿದ ಅಣ್ಣಾಮಲೈ...ಪೋಸ್ಟ್​ನಲ್ಲಿ ಪ್ರಧಾನಿ ಮೋದಿ ಬಗ್ಗೆಯೂ ಉಲ್ಲೇಖ! | Annamalai

ಅಭಿಜಿತ್ ದೀಪ್ಕೆ ನೇತೃತ್ವದ ಸಿಜೆಪಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ನಡೆಸಿದ ಪ್ರತಿಭಟನೆಯನ್ನು ದೆಹಲಿ ಪೊಲೀಸರು ಹತ್ತಿಕ್ಕಿದ ಕ್ರಮವನ್ನು ಅಣ್ಣಾಮಲೈ ಈ ಹಿಂದೆ ಕಟುವಾಗಿ ಟೀಕಿಸಿದ್ದರು. ಅಣ್ಣಾಮಲೈ ಅವರ ಈ ಹೇಳಿಕೆಯು ತಮಿಳುನಾಡು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೆ ಮತ್ತೆ ತಿರುಗೇಟು ನೀಡಿರುವ ಸಿಂಗಂ, ದೇಶಭಕ್ತಿಯ ಕುರಿತು ತಮಗೆ ಯಾರೂ ಪಾಠ ಮಾಡಬೇಕಾಗಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶಪ್ರೇಮದ ಪ್ರಮಾಣಪತ್ರ ಬೇಡ

ದೇಶದ ಹಲವು ರಾಜ್ಯಗಳಲ್ಲಿ ವಾಸಿಸಿ, ಅಲ್ಲಿನ ಪರಿಸ್ಥಿತಿಗಳನ್ನು ಹತ್ತಿರದಿಂದ ಬಲ್ಲ ತಮಗೆ ಭಾರತದ ಅಖಂಡತೆ ಮತ್ತು ಸಾರ್ವಭೌಮತೆಯ ಬಗ್ಗೆ ಸಂಪೂರ್ಣ ಅರಿವಿದೆ. ಹಾಗಾಗಿ ಯಾರೂ ತಮಗೆ ದೇಶಪ್ರೇಮದ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಅಥವಾ ಸಿಜೆಪಿ ಕಾರ್ಯಕರ್ತರು ಯಾವುದೇ ತಪ್ಪು ಮಾಡಿದ್ದರೆ, ಅಧಿಕಾರಿಗಳು ಸೇಡು ತೀರಿಸಿಕೊಳ್ಳುವ ಧೋರಣೆಯನ್ನು ಬಿಟ್ಟು ಕೇವಲ ಕಾನೂನು ಮತ್ತು ನಿಗದಿತ ಪ್ರಕ್ರಿಯೆಯ ಪ್ರಕಾರವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಣ್ಣಾಮಲೈ ಆಗ್ರಹಿಸಿದರು.

ದೇಶದ ಸಾರ್ವಭೌಮತೆಗೆ ನಿಜವಾದ ಬೆದರಿಕೆ ಇದ್ದರೆ ಗುಪ್ತಚರ ಸಂಸ್ಥೆಗಳಾದ ಐಬಿ ಮತ್ತು ರಾವ್‌ ಬಳಸಿ, ತಪ್ಪು ಮಾಡಿದವರನ್ನು ಜೈಲಿಗೆ ಹಾಕಿ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಸೃಷ್ಟಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುವ ಯಾವುದೇ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದ ಅಣ್ಣಾಮಲೈ, ಆದರೆ ತಪ್ಪೆನ್ನುವ ವಿಷಯಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬೆಳವಣಿಗೆಯು ಅಣ್ಣಾಮಲೈ ಹಾಗೂ ಅವರ ಮಾಜಿ ಪಕ್ಷವಾದ ಬಿಜೆಪಿ ನಡುವಿನ ಮಾತಿನ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಬಿಜೆಪಿ ತೊರೆದು ಸ್ವಂತ ರಾಜಕೀಯ ಚಳುವಳಿ ಆರಂಭಿಸಿರುವ ಅಣ್ಣಾಮಲೈ, ಸಿಜೆಪಿ ಪ್ರತಿಭಟನಾ ತಂತ್ರಗಳನ್ನು ತಾವು ಸಂಪೂರ್ಣವಾಗಿ ಒಪ್ಪದಿದ್ದರೂ, ಸರ್ಕಾರದ ನೀತಿಗಳನ್ನು ವಿರೋಧಿಸುವ ಅವರ ಹಕ್ಕನ್ನು ಬೆಂಬಲಿಸುವುದಾಗಿ ಪುನರುಚ್ಚರಿಸಿದ್ದಾರೆ.

ಅಣ್ಣಾಮಲೈ ಟ್ಟೀಟ್​!

ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಸೇರಿದಂತೆ ಸಿಜೆಪಿ ನಾಯಕರ ಬಂಧನವನ್ನು ಖಂಡಿಸಿರುವ ಅಣ್ಣಾಮಲೈ, ದೆಹಲಿ ಪೊಲೀಸರ ಈ ರೀತಿಯ ಏಕಪಕ್ಷೀಯ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಹೇಳಿದ್ದ ಮಾತನ್ನು ಈ ಸಂದರ್ಭದಲ್ಲಿ ಅಣ್ಣಾಮಲೈ ನೆನಪಿಸಿದರು. ಅಂದು ಮೋದಿ ಅವರ ಮಾತುಗಳು ಸರಿಯಾಗಿದ್ದವು ಎಂದಾದರೆ, ಇಂದಿನ ಸರ್ಕಾರದ ವಿರುದ್ಧದ ಧ್ವನಿಯನ್ನು ಮಾತ್ರ ಯಾಕೆ ಬಂಧನಗಳ ಮೂಲಕ ದಮನ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ ಅಣ್ಣಾಮಲೈ, ಆಡಳಿತದಲ್ಲಿ 12 ವರ್ಷಗಳಿಗೂ ಅಧಿಕ ಕಾಲ ಪೂರ್ಣ ಬಹುಮತ ಹೊಂದಿದ್ದರೂ ಬಿಜೆಪಿ ಬೇಕಂತಲೇ ಹೊಸ ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಿದೆ ಎಂದರು. ದೆಹಲಿಯಲ್ಲಿ ನಡೆದ ದಸರಾ ಆಚರಣೆಯ ರಾಮಲೀಲಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅಶೋಕ್ ಗೋಯಲ್ ನೇತೃತ್ವದಲ್ಲಿ ಕಾಕ್ರೋಚ್ ಪ್ರತಿಕೃತಿ ದಹಿಸಿರುವುದನ್ನು ಉಲ್ಲೇಖಿಸಿದ ಅವರು, ಇದು ಬಿಜೆಪಿಯ ವಿರೋಧವೋ ಅಥವಾ ಸಿಜೆಪಿಗೆ ಉಚಿತ ಪ್ರಚಾರ ನೀಡುವ ತಂತ್ರವೋ ಎಂದು ವ್ಯಂಗ್ಯವಾಡಿದರು. ಅಣ್ಣಾಮಲೈ ಅವರ ಈ ಹೇಳಿಕೆಗಳಿಗೆ ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣ ತಿರುಪತಿ ತಿರುಗೇಟು ನೀಡಿದ್ದು, ಶಾಂತಿಯುತ ಪ್ರತಿಭಟನೆ ಹಾಗೂ ಉದ್ದೇಶಪೂರ್ವಕ ಕಾನೂನು ಉಲ್ಲಂಘನೆ ನಡುವಿನ ವ್ಯತ್ಯಾಸವನ್ನು ಅಣ್ಣಾಮಲೈ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆಯಾಗಿ ಅಣ್ಣಾಮಲೈ ಅವರ ಈ ಹೊಸ ರಾಜಕೀಯ ನಿಲುವು ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​).