ದೇಶ

ಕೇಂದ್ರ ಸಚಿವ ಸ್ಥಾನಕ್ಕೆ ಎಲ್ ಮುರುಗನ್ ರಾಜೀನಾಮೆ? ಸ್ಥಾನದಿಂದ ಮುಕ್ತಗೊಳಿಸುವಂತೆ ಪ್ರಧಾನಿ ಮೋದಿಗೆ ಪತ್ರ | L Murugan

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಲ್​.ಮುರುಗನ್ ಅವರು ಮಂಗಳವಾರ(ಅ. 13) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕೇಂದ್ರ ಸಚಿವ ಸ್ಥಾನ ಮತ್ತು ರಾಜ್ಯಸಭಾ ಸಂಸದ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಲ್​.ಮುರುಗನ್ ಅವರು ಮಂಗಳವಾರ(ಅ. 13) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕೇಂದ್ರ ಸಚಿವ ಸ್ಥಾನ ಮತ್ತು ರಾಜ್ಯಸಭಾ ಸಂಸದ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆಗಳನ್ನು ಹೊಂದಿರುವ ಮುರುಗನ್, ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಸಚಿವ ಸ್ಥಾನದಿಂದ ಮುಕ್ತಗೊಳಿಸುವಂತೆ ಮತ್ತು ತಮಿಳುನಾಡಿನಲ್ಲಿ ಪಕ್ಷದ ವಿಸ್ತರಣೆಗೆ ಪೂರ್ಣ ಸಮಯ ಮೀಸಲಿಡಲು ರಾಜ್ಯಸಭಾ ಸದಸ್ಯತ್ವವನ್ನು ತ್ಯಜಿಸಲು ಅನುಮತಿ ನೀಡುವಂತೆ ವಿನಂತಿಸಿದ್ದಾರೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಎಲ್​.ಮುರಗನ್, ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಕೆಲಸ ಮಾಡುವ ಉದ್ದೇಶದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಮಟ್ಟಕ್ಕೆ ಹಿಂತಿರುಗಿ ಬಿಜೆಪಿಯನ್ನು ಬಲಪಡಿಸಲು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದು ದೊಡ್ಡ ಗೌರವವೆಂದು ಪರಿಗಣಿಸುವುದಾಗಿ ಹೇಳಿರುವ ಅವರು, ಭಾರತ ಮಾತೆ ಮತ್ತು ತಮಿಳುನಾಡಿಗೆ ಸೇವೆ ಸಲ್ಲಿಸುವುದು ತಮ್ಮ ಜೀವನದ ಶ್ರೇಷ್ಠ ವಿಷಯ. ದಿನಗೂಲಿ ಕಾರ್ಮಿಕನ ಮಗನ ಮಟ್ಟದಿಂದ ಕೇಂದ್ರ ಸಚಿವ ಸ್ಥಾನಕ್ಕೆ ಏರಿದ್ದೇನೆ. ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ದೇಶ ಮೊದಲು, ನಂತರ ಪಕ್ಷ ಮತ್ತು ನಾನು ಎಂಬ ಸಿದ್ದಾಂತವನ್ನು ಪಾಲಿಸುತ್ತೇನೆ ಎಂದಿದ್ದಾರೆ.

ತಮಿಳುನಾಡು ಮೂಲದ ಮುರುಗನ್ ಅವರು ಪ್ರಸ್ತುತ ಮಧ್ಯಪ್ರದೇಶದಿಂದ ರಾಜ್ಯಸಭೆಯ ಸಂಸದರಾಗಿದ್ದಾರೆ. ಕೇಂದ್ರ ಸಚಿವ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು, 2017-2020 ರವರೆಗೆ ರಾಷ್ಟ್ರೀಯ ಎಸ್‌ಸಿ ಆಯೋಗದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ (ಏಜೆನ್ಸೀಸ್).