ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ತಾವು ಬಹಳ ಹಿಂದಿನಿಂದಲೂ ಬಲ್ಲವರಾಗಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ಗೌರವಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಭಾಯಿ ಪ್ರಧಾನಿಯಾಗುವ ಮೊದಲಿನಿಂದಲೂ ನನಗೆ ಪರಿಚಯ. ಅವರ ಮನೆಗೂ ಭೇಟಿ ನೀಡಿದ್ದೇನೆ. ನಾವಿಬ್ಬರೂ ಗುಜರಾತಿಗಳು ಎಂಬ ಕಾರಣಕ್ಕೆ ವಿಶೇಷ ಬಾಂಧವ್ಯವಿದೆ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ರಾಜಕೀಯಕ್ಕೆ ಸಂಬಂಧಿಸಿದವೇ ಹೊರತು ವೈಯಕ್ತಿಕ ವಿಚಾರಗಳಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಹಲವು ವರ್ಷಗಳಿಂದ ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸುತ್ತಾ ಬಂದಿದೆ. ಕಾಂಗ್ರೆಸ್ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮಾಡಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಭೇಟಿಗಳಲ್ಲಿಯೂ ಪಿತ್ರೋಡಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಇತ್ತೀಚಿನ ಪ್ರತಿಭಟನೆಗಳ ವಿಚಾರದಲ್ಲಿಯೂ ಬಿಜೆಪಿ ಕಾಂಗ್ರೆಸ್ ಮತ್ತು ಪಿತ್ರೋಡಾ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿರುವ ಆರೋಪ ಮಾಡಿತ್ತು. ಆದರೆ ಈ ಆರೋಪಗಳನ್ನು ಪಿತ್ರೋಡಾ ತಳ್ಳಿಹಾಕಿದ್ದು, ಆಧಾರರಹಿತ ಎಂದು ಕರೆದಿದ್ದಾರೆ. 1984ರ ಸಿಖ್ ವಿರೋಧಿ ಗಲಭೆ ಕುರಿತು ನೀಡಿದ್ದ ಹೇಳಿಕೆಯೂ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. 40 ವರ್ಷಗಳ ಹಿಂದೆ ನಡೆದ ವಿಚಾರವನ್ನು ಈಗೇಕೆ ಚರ್ಚಿಸಬೇಕು? ಎಂಬ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಸ್ಯಾಮ್ ಭಾಯಿ ಮತ್ತು ಅಂಜನಾ ಬೆನ್ ಅವರಿಗೆ ದೀಪಾವಳಿ ಹಾಗೂ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಮುಂಬರುವ ವರ್ಷ ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಗನ್ನಾಥ್ ಎಂದು ಮೋದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಿತ್ರೋಡಾ, ಶುಭಾಶಯಗಳಿಗೆ ಧನ್ಯವಾದಗಳು ನರೇಂದ್ರಭಾಯಿ. ನಿಮಗೂ ಅದೇ ರೀತಿಯ ಶುಭಾಶಯಗಳನ್ನು ಕೋರುತ್ತೇವೆ. ನೀವು ಆರೋಗ್ಯದಿಂದ ದೀರ್ಘಕಾಲ ಇರಲಿ ಎಂದು ಹಾರೈಸಿದ್ದರು. ರಾಜಕೀಯದಲ್ಲಿ ವಿರೋಧಾಭಾಸಗಳಿದ್ದರೂ ವೈಯಕ್ತಿಕ ಸಂಬಂಧಗಳು ಮತ್ತು ಪರಸ್ಪರ ಗೌರವಕ್ಕೆ ಅವಕಾಶವಿದೆ ಎಂಬ ಸಂದೇಶವನ್ನು ಈ ಬೆಳವಣಿಗೆ ನೀಡಿದೆ.