ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ದುರ್ಮರಣ 
ದೇಶ

ಮಹಾ ಡಿಸಿಎಂ ಅಜಿತ್​ ಪವಾರ್​ ದುರ್ಮರಣ: ಅಚ್ಚರಿಯ ಹೇಳಿಕೆ ನೀಡಿದ ಲಿಯರ್​ಜೆಟ್​ 45 ವಿಮಾನದ ಓನರ್​! Ajit Pawar

ಪ್ರಮುಖ ಮುಖ್ಯಾಂಶಗಳು

  • ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
  • ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸೇರಿದಂತೆ ಐವರು ಮಂದಿ ದುರ್ಮರಣ
  • ಘಟನೆಯ ಬೆನ್ನಲ್ಲೇ ಲಿಯರ್​ಜೆಟ್​ 45 ವಿಮಾನದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ
  • ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ತನಿಖೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದಂತೆ. ವಿಎಸ್​ಆರ್​ ವಿಮಾನ ಸಂಸ್ಥೆಯ ಮಾಲೀಕ ವಿಕೆ ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ
ಪುಣೆ: ವಿಎಸ್ಆರ್​ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನಕ್ಕೆ ಸೇರಿದ ಲಿಯರ್‌ಜೆಟ್ 45 ವಿಮಾನ ಪತನಗೊಂಡು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್​ ಪವಾರ್ ( Ajit Pawar )​ ಸೇರಿದಂತೆ ಐದು ಮಂದಿ ಸಾವಿಗೀಡಾಗಿದ್ದಾರೆ. ಇಂದು ಬೆಳಗ್ಗೆ ಮುಂಬೈನಿಂದ ಹೊರಟ ವಿಮಾನವು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡುವಾಗ ಪತನಗೊಂಡಿತು. 2023ರ ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಲಿಯರ್​ಜೆಟ್​ 45 ಅಪಘಾತದ ನಂತರ, ಇತ್ತೀಚಿನ ವರ್ಷಗಳಲ್ಲಿ ವಿಎಸ್​ಆರ್​ ವಿಮಾನ ಸಂಸ್ಥೆಗೆ ಸೇರಿದ ಎರಡನೇ ಪ್ರಮುಖ ಅಪಘಾತ ಇದಾಗಿದೆ.
ಈ ಘಟನೆಯ ಬೆನ್ನಲ್ಲೇ ಲಿಯರ್​ಜೆಟ್​ 45 ವಿಮಾನದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ತನಿಖೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದಂತೆ. ವಿಎಸ್​ಆರ್​ ವಿಮಾನ ಸಂಸ್ಥೆಯ ಮಾಲೀಕ ವಿಕೆ ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾವು ವಿಮಾನವನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೆವು. ವಿಮಾನದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರಲಿಲ್ಲ. ಅಲ್ಲದೆ, ಯಾವುದೇ ತಾಂತ್ರಿಕ ದೋಷವೂ ಇರಲಿಲ್ಲ ಎಂದಿದ್ದಾರೆ.

ನಾವೇಕೆ ಸ್ಥಗಿತಗೊಳಿಸಬೇಕು?

ಅಂದಹಾಗೆ, ವಿಎಸ್​ಆರ್​ ಕಂಪನಿ 7 ಲಿಯರ್​ಜೆಟ್​ ವಿಮಾನಗಳನ್ನು ಆಪರೇಟ್​ ಮಾಡುತ್ತಿದ್ದು, ಈ ಘಟನೆಯ ಬೆನ್ನಲ್ಲೇ ಎಲ್ಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಕೆ ಸಿಂಗ್​, ನಾವೇಕೆ ಸ್ಥಗಿತಗೊಳಿಸಬೇಕು? ಎಲ್ಲ ವಿಮಾನಗಳು ಫಿಟ್​ ಆಗಿವೆ. ನಾವೇಕೆ ಅವುಗಳ ಹಾರಾಟವನ್ನು ನಿಲ್ಲಿಸಲಿ? ಅದು ನನ್ನ ನಿರ್ಧಾರವಲ್ಲ. ನಮ್ಮ ವಿಮಾನ ವಿಶ್ವದಾದ್ಯಂತ ತುಂಬಾ ವಿಶ್ವಾಸಾರ್ಹ ವಿಮಾನ ಎಂದು ವಿಕೆ ಸಿಂಗ್​ ತಿಳಿಸಿದ್ದಾರೆ. ಈ ಮೂಲಕ ಈ ದುರಂತದಲ್ಲಿ ನಮ್ಮ ತಪ್ಪಿಲ್ಲ ಎಂದು ವಿಕೆ ಸಿಂಗ್​ ಸಮರ್ಥಿಸಿಕೊಂಡಿದ್ದಾರೆ.
ಅಂದಹಾಗೆ, ಲಿಯರ್‌ಜೆಟ್ ವಿಮಾನವು ಅಮೆರಿಕದ ಸಂಶೋಧಕ ಬಿಲ್ ಲಿಯರ್ ಅವರ ಸೃಷ್ಟಿಯಾಗಿದೆ. ಸ್ವಿಸ್ ಯುದ್ಧ ವಿಮಾನದ ಮಾದರಿಯಲ್ಲಿ ಈ ವಿಮಾನವನ್ನು ತಯಾರಿಸಲಾಗಿದೆ. ಇದು ಎಂಟು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುತ್ತದೆ. ಈ ಬ್ರ್ಯಾಂಡ್ ಅನ್ನು ಕೆನಡಾದ ಬೊಂಬಾರ್ಡಿಯರ್ ಕಂಪನಿ, 1990 ರಲ್ಲಿ ಸ್ವಾಧೀನಪಡಿಸಿಕೊಂಡಿತು. ಸೂಪರ್ ರಿಚ್‌ನ ಐಷಾರಾಮಿ ಜೆಟ್ ಪ್ರಯಾಣಕ್ಕೆ ಒಂದು ಕಾಲದಲ್ಲಿ ಇದು ಹೆಸರಾಗಿತ್ತು. ಯಾವಾಗ ಬೊಂಬಾರ್ಡಿಯರ್ ಕಂಪನಿ, ತನ್ನ ಗ್ಲೋಬಲ್ ಮತ್ತು ಚಾಲೆಂಜರ್ ಸರಣಿಯ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿತೋ ಆಗ ಲಿಯರ್​​ಜೆಟ್​ನ ಉತ್ಪಾದನೆ 2021ರಲ್ಲಿ ಕೊನೆಗೊಂಡಿತು.

ವಿಮಾನ ಪತನ

ಇಂದು ಮುಂಬೈನಿಂದ ಬೆಳಗ್ಗೆ 8.10 ಕ್ಕೆ ಹೊರಟ ವಿಮಾನ 8.50ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, 8.45ರ ಸುಮಾರಿಗೆ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಡಿಸಿಎಂ ಅಜಿತ್​ ಪವಾರ್​ ಸೇರಿ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಪಿಎಸ್ಒ ವಿದಿಪ್ ಜಾಧವ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಎಂದು ಗುರುತಿಸಲಾಗಿದೆ.

ವಿಮಾನ ಪತನ ಹೇಗೆ ಸಂಭವಿಸಿತು ಎಂಬುವುದರ ಕಂಪ್ಲೀಟ್​ ಡೀಟೆಲ್ಸ್​ ಈ ಕೆಳಕಂಡಂತಿದೆ

* ಇಂದು (ಜ.28) ಬೆಳಗ್ಗೆ ಪುಣೆ ಮತ್ತು ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು. ಇದರಿಂದ ಪೈಲಟ್​ಗೆ ಏನು ಕಾಣುತ್ತಿರಲಿಲ್ಲ.

* ಬಾರಾಮತಿ ವಿಮಾನ ನಿಲ್ದಾಣದ ಏರ್​ಸ್ಟ್ರಿಪ್​ ತುಂಬಾ ಚಿಕ್ಕದಾಗಿದೆ ಮತ್ತು ಯಾವುದೇ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಸೌಲಭ್ಯಗಳನ್ನು ರನ್​ವೇ ಹೊಂದಿಲ್ಲ. ಇದು ಕೂಡ ಲ್ಯಾಂಡಿಂಗ್​ಗೆ ಸಮಸ್ಯೆಯಾಯಿತು.

* ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಪೈಲಟ್ ಶಾಂಭವಿ ಪಾಠಕ್​, ಸ್ವಯಂ ಚಾಲಿತ ಮತ್ತು ವಿಸುವಲ್​ ಲ್ಯಾಂಡಿಂಗ್​ಗೆ ಪ್ರಯತ್ನಿಸಿದರು.

* ಲ್ಯಾಂಡಿಂಗ್​ ಮಾಡುವಾಗ ವಿಮಾನ ನೇರವಾಗಿ ರನ್​ವೇ ಸಮೀಪ ಬರಲಿಲ್ಲ ಹೀಗಾಗಿ ವಿಮಾನ, ಒಂದು ದೊಡ್ಡ ಟರ್ನ್​ ತೆಗೆದುಕೊಂಡಿತು. ಇದರಿಂದ ಮೊದಲ ಲ್ಯಾಂಡಿಂಗ್​ ಫೇಲ್​ ಆಯಿತು.

* ದಟ್ಟ ಮಂಜಿನಿಂದಾಗಿ ವಿಮಾನವನ್ನು ರನ್​ವೇಗೆ ಸರಿಯಾಗಿ ಹೊಂದಿಸುವುದು ತುಂಬಾ ಕಷ್ಟಕರವಾಗಿತ್ತು.

* ಮೊದಲ ಪ್ರಯತ್ನ ವಿಫಲವಾದಾಗ ಪೈಲಟ್​ ಎರಡನೇ ಲ್ಯಾಂಡಿಂಗ್​ ಪ್ರಯತ್ನವನ್ನು ಮಾಡಿದರು.

* ಎರಡನೇ ಪ್ರಯತ್ನದ ವೇಳೆ ಪೈಲಟ್​ ಮೇಡೇ ಕರೆಯನ್ನು ನೀಡಿದರು. ಮೇಡೇ ಕರೆ ಎಂದರೆ, ವಿಮಾನ ಅಥವಾ ಹಡಗುಗಳಲ್ಲಿ ಗಂಭೀರ ತುರ್ತು ಸಂದರ್ಭದಲ್ಲಿ ರೇಡಿಯೋ ಮೂಲಕ ನೀಡುವ ಅಂತಾರಾಷ್ಟ್ರೀಯ ತುರ್ತು ಸಿಗ್ನಲ್ ಅಥವಾ ಸಹಾಯಕ್ಕಾಗಿ ಮಾಡುವ ಕರೆಯಾಗಿದೆ.

* ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮೂಲಗಳ ಪ್ರಕಾರ ಬಾರಾಮತಿ ಒಂದು ಟೇಬಲ್​ ಟಾಪ್​ ರನ್​ವೇ. ಅಂದರೆ, ಗುಡ್ಡ ಅಥವಾ ಎತ್ತರದ ಚಪ್ಪಟೆ ಜಾಗದ ಮೇಲೆ ನಿರ್ಮಿಸಲಾದ ರನ್‌ವೇ ಆಗಿದೆ.

* ಎರಡನೇ ಪ್ರಯತ್ನದ ಲ್ಯಾಂಡಿಂಗ್​ ವೇಳೆ ವಿಮಾನವು ರನ್​ವೇ ಅಂಚಿನ ಬಳಿಯೇ ನೆಲಕ್ಕೆ ಅಪ್ಪಳಿಸಿತು.

* ಅಂದಾಜು 100 ಅಡಿ ಎತ್ತರದಲ್ಲಿ ಇರುವಾಗಲೇ ವಿಮಾನವೂ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು.

* ನಿಯಂತ್ರಣ ತಪ್ಪಿದ ವಿಮಾನ, ರನ್​ವೇ ತಲುಪುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತು.

* ನೆಲಕ್ಕೆ ಅಪ್ಪಳಿಸಿದ ಪರಿಣಾಮ, ತಕ್ಷಣ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಇದಾದ ಬಳಿಕ ಅನೇಕ ಸಣ್ಣ ಸ್ಫೋಟಗಳು ಕೂಡ ಸಂಭವಿಸಿದವು.

* ಸರಣಿ ಸ್ಫೋಟಗಳಿಂದಾಗಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಥಳದಲ್ಲೇ ಹೊತ್ತಿ ಉರಿಯಿತು.

* ಬೆಂಕಿ ಆವರಿಸಿಕೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.

* ಸದ್ಯ ಅಪಘಾತದ ತನಿಖೆ ಮುಂದುವರೆದಿದ್ದು, ಅಂತಿಮ ಕಾರಣವನ್ನು ಡಿಜಿಸಿಎ ವರದಿಯಲ್ಲಿ ದೃಢಪಡಿಸಲಾಗುತ್ತದೆ.

ಯಾವ ಕಾರಣಕ್ಕೆ ಅಜಿತ್​ ಪವಾರ್​ ವಿಮಾನದಲ್ಲಿ ಹೊರಟ್ಟಿದ್ದರು?

ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ಅಜಿತ್​ ಪವಾರ್ ಅವರು ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಮಂಗಳವಾರ, ಅಜಿತ್ ಪವಾರ್ ಮುಂಬೈನಲ್ಲಿದ್ದರು, ಅಲ್ಲಿ ಅವರು ಮೂಲಸೌಕರ್ಯ ಕುರಿತ ಮಹಾರಾಷ್ಟ್ರ ಸಚಿವ ಸಂಪುಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆ ಮುಗಿಸಿ, ಇಂದು ಬಾರಾಮತಿಗೆ ಹೊರಟರು. ಆದರೆ, ವಿಮಾನ ಲ್ಯಾಂಡಿಂಗ್​ ವೇಳೆ ದುರಂತ ಸಾವಿಗೀಡಾಗಿದ್ದಾರೆ, (ಏಜೆನ್ಸೀಸ್​).