Modi Strategy | .ಮತದಾನದ ದಿನದ ಕಾರ್ಯಕ್ರಮಗಳ ಹಿಂದೆ ಅಡಗಿದೆ ದೊಡ್ಡ ರಾಜಕೀಯ ಲೆಕ್ಕಾಚಾರ
Modi Strategy: ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಜಾರಿಯಲ್ಲಿರುವ 48 ಗಂಟೆಗಳ ಕಡ್ಡಾಯ ಮೌನದ ಅವಧಿಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಬಲ ಸಂದೇಶ ರವಾನೆಯ ಸಮಯವನ್ನಾಗಿ ಬಳಸಿಕೊಳ್ಳುತ್ತಾ ಬಂದಿದ್ದು, ಸಾಮಾಜಿಕ ಜಾಲತಾಣದ ಈ ಯುಗದಲ್ಲಿ, ಹಳೆಯದಾಗಿರುವ ಈ ಮೌನದ ಪರಿಕಲ್ಪನೆಯನ್ನು ಮೀರಿ, ಮೋದಿ ತಮ್ಮ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಾ, ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇಂತಹದ್ದೇ ಒಂದು ಕಾರ್ಯತಂತ್ರ ಕಂಡುಬಂದಿದ್ದು, ಮಂಗಳವಾರ ಸಿಕ್ಕಿಂನಲ್ಲಿ ಮಕ್ಕಳೊಂದಿಗೆ ಫುಟ್ಬಾಲ್ ಆಡಿದ ಪ್ರಧಾನಿ, ಅಲ್ಲಿ ಗೋಲ್ ಬಾರಿಸುವ ಮೂಲಕ ಫುಟ್ಬಾಲ್ ಪ್ರಿಯ ರಾಜ್ಯವಾದ ಬಂಗಾಳದ ಮತದಾರರ ಭಾವನೆಗಳನ್ನು ಗೆಲ್ಲಲು ಪ್ರಯತ್ನಿಸಿದರು. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಮತದಾನ ನಡೆಯುತ್ತಿರುವಾಗಲೇ ಬುಧವಾರ ಉತ್ತರ ಪ್ರದೇಶದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದರು.
ಗಂಗಾ ಎಂಬ ಹೆಸರು ಬಂಗಾಳಿಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಾದ ಹೂಗ್ಲಿ ನದಿ ಮತ್ತು ಗಂಗಾಸಾಗರ ಮೇಳದೊಂದಿಗೆ ಆಳವಾಗಿ ಬೆರೆತಿರುವುದರಿಂದ, ಇದು ದೂರದ ಹೌರಾದ ಜನರ ಮೇಲೂ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪ್ರಧಾನಿ ಮೋದಿಯವರ ಈ ನಡೆಗೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಮೂಲಸೌಕರ್ಯ ಯೋಜನೆಯನ್ನು ಟೀಕಿಸುವುದರಲ್ಲಿ ತೊಡಗಿದ್ದರು. ಆದರೆ ಈ ವಿಷಯವು ಮತದಾರರ ಮನಸ್ಥಿತಿಗೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ. ಮೋದಿಯವರ ಚುನಾವಣಾ ದಿನದ ಕಾರ್ಯಕ್ರಮಗಳಲ್ಲಿ ಒಂದು ನಿರ್ದಿಷ್ಟ ಮಾದರಿ ಇದ್ದು, ಅದು ಈ ಹಿಂದಿನ ಚುನಾವಣೆಗಳಲ್ಲೂ ಪುನರಾವರ್ತನೆಯಾಗಿರುವುದನ್ನು ಕಾಣಬಹುದು.
2021ರಲ್ಲಿ ನಡೆದ ಬಂಗಾಳ ಚುನಾವಣೆಯ ಮತದಾನದ ದಿನದಂದು ಬಾಂಗ್ಲಾದೇಶದ ಓರಾಕಂಡಿಗೆ ಭೇಟಿ ನೀಡುವ ಮೂಲಕ ಮತುವಾ ಸಮುದಾಯದವರ ಗಮನ ಸೆಳೆದಿದ್ದರು. ಅದೇ ರೀತಿ ದೆಹಲಿ ಚುನಾವಣೆಯ ವೇಳೆ ಮಹಾಕುಂಭದಲ್ಲಿ ಸ್ನಾನ ಮಾಡಿದ್ದು ಮತ್ತು ಜಾರ್ಖಂಡ್ ಚುನಾವಣೆಯ ಸಮಯದಲ್ಲಿ ಗಯಾನಾ ಪ್ರವಾಸ ಕೈಗೊಂಡಿದ್ದು ಅವರ ಕಾರ್ಯತಂತ್ರದ ಭಾಗಗಳೇ ಆಗಿದ್ದವು ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿಷದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯ ಅಂತ್ಯದಲ್ಲಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಅವರು ನಡೆಸಿದ 45 ಗಂಟೆಗಳ ಧ್ಯಾನವು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ವಿರೋಧ ಪಕ್ಷಗಳ ಮೇಲಿನ ನಿರಂತರ ವಾಗ್ದಾಳಿಯ ಬಳಿಕ, ಆಧುನಿಕ ಭಾರತದ ದೃಷ್ಟಿಕೋನವುಳ್ಳ ಶಾಂತ ನಾಯಕನ ಇಮೇಜ್ ಅನ್ನು ಅವರು ಈ ಮೂಲಕ ಪ್ರದರ್ಶಿಸಿದರು. ಪಂಚತಂತ್ರದ ಕಥೆಯಂತೆ ಮೌನವು ಬಂಗಾರವಾಗಿದ್ದರೂ, ಮೋದಿಯವರ ವಿಷಯದಲ್ಲಿ ಈ ಮೌನದ ಅವಧಿಯು ಜನರಿಗೆ ಅತ್ಯಂತ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ(ಏಜೆನ್ಸೀಸ್).