ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಫಾರ್ಮ್ 6 ಕಾನೂನು ಬಾಹಿರ ಬದಲಾವಣೆಗೆ ಟಿಸಿಎಸ್​​ಗೆ ಆದೇಶಿಸಿದ್ಯಾರು?; ಚುನಾವಣಾ ಆಯೋಗದ ವಿರುದ್ಧ ದಾಳಿ ಮುಂದುವರೆಸಿದ ರಾಹುಲ್ | Rahul Gandhi

ಎಸ್​ಐಆರ್ ಪ್ರಕ್ರಿಯೆ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6ನಲ್ಲಿ ಕಾನೂನುಬಾಹಿರ ಬದಲಾವಣೆ ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ಗೆ ಆದೇಶ ನೀಡಿದ್ಯಾರು ಎಂದು ಗುರುವಾರ(ಅ. 01) ಪ್ರಶ್ನಿಸಿದ್ದಾರೆ.

ನವದೆಹಲಿ: ಎಸ್​ಐಆರ್ ಪ್ರಕ್ರಿಯೆ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6ನಲ್ಲಿ ಕಾನೂನುಬಾಹಿರ ಬದಲಾವಣೆ ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ಗೆ ಆದೇಶ ನೀಡಿದ್ಯಾರು ಎಂದು ಗುರುವಾರ(ಅ. 01) ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಆಯುಕ್ತರೇ ದಾಖಲಿಸಿರುವಂತೆ, ಆನ್‌ಲೈನ್ 'ಫಾರ್ಮ್ 6' ಅನ್ನು ಅಕ್ರಮವಾಗಿ ಬದಲಾಯಿಸಲಾಗಿದೆ. ಆ ಬದಲಾವಣೆಯನ್ನು ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಚುನಾವಣಾ ಆಯೋಗದ ಯಾರಾದರೂ ಆದೇಶ ನೀಡಿದ್ದರೇ? ಅಥವಾ ಬದಲಾವಣೆಯನ್ನು ಮಾಡಲು ಆ ಐಟಿ ಕಂಪನಿಯ ಮೇಲೆ ಒತ್ತಡ ಹೇರಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ರಾಹುಲ್ ಗಾಂಧಿಯವರ ಪೋಸ್ಟ್ ಅನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜನರಲ್ ಝಡ್ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಜುಲೈ 2026ರ ಮಧ್ಯದಲ್ಲಿ ಸಿಇಸಿ ಫಾರ್ಮ್ 6 ಬದಲಾವಣೆಗಳನ್ನು ಅಸಂವಿಧಾನಿಕವಾಗಿ ಪರಿಚಯಿಸಿತು. ಸ್ಪಷ್ಟವಾಗಿ, ಈ ಕಾನೂನು ಬಾಹಿರ ಬದಲಾವಣೆಯನ್ನು ಪ್ರಧಾನಿ ಮತ್ತು ಗೃಹ ಸಚಿವರ ಜೋಡಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಎಸ್​ಐಆರ್ ಪ್ರಕ್ರಿಯೆ, ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪ ಹಿನ್ನೆಲೆ ಎಲ್ಲಾ ಜಿಲ್ಲೆಗಳಲ್ಲಿ ಮೆರವಣಿಗೆಗಳು ಮತ್ತು ಐದು ಬೃಹತ್ ರ್ಯಾಲಿಗಳು ಸೇರಿದಂತೆ ಸರಣಿ ಜಂಟಿ ಪ್ರತಿಭಟನೆಗಳನ್ನು ನಡೆಸುವುದಾಗಿ ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟ ಘೋಷಿಸಿದ ಮರುದಿನ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಇನ್ನೂ ಇಂಡಿಯಾ ಒಕ್ಕೂಟವು, ಭವಿಷ್ಯದ ಚುನಾವಣೆಗಳನ್ನು ಮತಪತ್ರಗಳ ಮೂಲಕವೇ ನಡೆಸಬೇಕೆಂದು ಒತ್ತಾಯಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಮಾಡಿದೆ (ಏಜೆನ್ಸೀಸ್).