ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಮದ್ಯದ ವಾಸನೆಯೊಂದಿಗೆ ಸಂಸತ್ತಿಗೆ ಬರುತ್ತಿದ್ದರು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕುಡಿದು ಸಂಸತ್ತಿಗೆ ಬರುತ್ತಿದ್ದವರಿಂದ ಡ್ರಗ್ಸ್ ವಿರುದ್ಧ ಹೋರಾಟ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಂಗ್ರೂರ್ನಲ್ಲಿ ಬುಧವಾರ(ನ. 04) ನಡೆದ ಇನ್ಸಾಫ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ಪಿಡುಗಿನ ವಿರುದ್ಧ ಹೋರಾಡುವ ಸಿಎಂ ಮಾನ್ ಅವರ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಮತ್ತು ಆಪ್ ಸರ್ಕಾರವು ಡ್ರಗ್ಸ್ ತಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಸಿಎಂ ಮಾನ್ ಅವರನ್ನು ಸಂಸತ್ನಲ್ಲಿ ಭೇಟಿಯಾಗಿದ್ದನ್ನು ನೆನಪಿಸಿಕೊಂಡ ಅವರು, ನಾನು ಅವರೊಂದಿಗೆ ಲೋಕಸಭೆಯಲ್ಲಿದ್ದೆ. ಅವರು ನಮ್ಮೊಂದಿಗೆ ಕುಳಿತು ಜೋಕ್ ಹೇಳುತ್ತಿದ್ದರು. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಅವರ ಉಸಿರಿನಿಂದ ಮದ್ಯದ ವಾಸನೆ ಬರುತ್ತಿತ್ತು ಎಂದು ಆರೋಪಿಸಿದ್ದಾರೆ.
ಮುಂದುವರೆದು, ಮದ್ಯಪಾನವು ವೈಯಕ್ತಿಕ ವಿಷಯ ಎಂದು ಸ್ಪಷ್ಟಪಡಿಸಿದ ಎಂದ ಅವರು, ಮಾನ್ ಅವರು ಮದ್ಯಪಾನ ಮಾಡಲು ನಮ್ಮ ಯಾವುದೇ ಆಕ್ಷೇಪಣೆಯಿಲ್ಲ. ಕುಡಿಯಬಾರದು ಎಂದು ನಾನು ಹೇಳುತ್ತಿಲ್ಲ. ಅದು ವೈಯಕ್ತಿಕ ಆಯ್ಕೆ. ಆದರೆ, ಪ್ರತಿದಿನ ಮದ್ಯದ ಪ್ರಭಾವಕ್ಕೆ ಒಳಗಾಗಿ, ಅಂತಹ ಮುಖ್ಯಮಂತ್ರಿಯೊಬ್ಬರು ಡ್ರಗ್ಸ್ ಸೇವನೆಯ ವಿರುದ್ಧದ ಹೋರಾಟವನ್ನು ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಸಬಹುದು ಎಂದು ಪ್ರಶ್ನಿಸಿದ್ದಾರೆ.
ಪಂಜಾಬ್ ಭಗವಂತ್ ಮಾನ್ ಮತ್ತು ಆಪ್ ಪಕ್ಷವನ್ನು ನಂಬಿತ್ತು. ಡ್ರಗ್ಸ್ ನಿರ್ಮೂಲನೆ ಮಾಡುವ ಭರವಸೆ ನೀಡಿದ್ದರು. ಆದರೆ ಅವರು ಎಲ್ಲಿಂದ ಡ್ರಗ್ಸ್ ನಿರ್ಮೂಲನೆ ಮಾಡಿದ್ದಾರೆ? ಪಂಜಾಬ್‌ನ ಯಾವ ಭಾಗದಿಂದ ಅವರು ಮಾದಕ ವಸ್ತು ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ? ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹಲವು ವರ್ಷಗಳ ಹಿಂದೆ, ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಹರಡುತ್ತಿವೆ ಎಂದು ನಾನು ಹೇಳಿದ್ದೆ. ಆ ಸಮಯದಲ್ಲಿ ಬಿಜೆಪಿ ಮತ್ತು ಅಕಾಲಿ ದಳ ಸರ್ಕಾರವು ರಾಹುಲ್ ಗಾಂಧಿಗೆ ಪಂಜಾಬ್ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿತ್ತು. ಇಂದು ರಾಜ್ಯಕ್ಕೆ ಅದೇ ದೊಡ್ಡ ಪಿಡುಗಾಗಿದೆ ಎಂದಿದ್ದಾರೆ.
ಪಂಜಾಬ್‌ಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಸರ್ಕಾರ ಬೇಕು. ಕೇಂದ್ರ ಗೃಹ ಸಚಿವರು ಪಂಜಾಬ್ ಅನ್ನು ನಡೆಸುವುದಿಲ್ಲ, ದೆಹಲಿಯ ಮುಖ್ಯಮಂತ್ರಿಯೂ ಪಂಜಾಬ್ ಅನ್ನು ನಡೆಸುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಯ ಹಸ್ತಕ್ಷೇಪವಿಲ್ಲದೆ ತನ್ನ ಮುಖ್ಯಮಂತ್ರಿಗೆ ಆಡಳಿತ ನಡೆಸಲು ಅವಕಾಶ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ (ಏಜೆನ್ಸೀಸ್).