ಅಮೆರಿಕದಲ್ಲಿ ಓದಲು ಅಷ್ಟೊಂದು ಹಣ ಎಲ್ಲಿಂದ ಬಂತು? RTI ಕಾರ್ಯಕರ್ತನ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಅಭಿಜಿತ್ ದೀಪ್ಕೆ! Abhijeet Deepke
- ಅಮೆರಿಕದಲ್ಲಿ ವ್ಯಾಸಂಗ ಮಾಡಲು ಹಣ ಎಲ್ಲಿಂದ ಬಂತು ಎಂಬ ಆರ್‌ಟಿಐ ಕಾರ್ಯಕರ್ತನ ಪ್ರಶ್ನೆಗೆ ಅಭಿಜಿತ್ ದೀಪ್ಕೆ ಸ್ಪಷ್ಟನೆ
- ಬೋಸ್ಟನ್ ವಿಶ್ವವಿದ್ಯಾಲಯದ ಸ್ಕಾಲರ್‌ಶಿಪ್ ಹಾಗೂ ಶಿಕ್ಷಣ ಸಾಲದಿಂದ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದಾಗಿ ಅಭಿಜಿತ್ ಸ್ಪಷ್ಟನೆ
- ನೋಂದಾಯಿತವಲ್ಲದ ಸಿಜೆಪಿ ಪಕ್ಷ ದೇಣಿಗೆ ಸ್ವೀಕರಿಸುವುದು ಕಾನೂನುಬಾಹಿರ ಎಂದು ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಗಂಭೀರ ಆರೋಪ
- ಅಭಿಜಿತ್ ದೀಪ್ಕೆ ತಂದೆಯ ಅಕ್ರಮ ಆಸ್ತಿ ಸಂಪಾದನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ
ನವದೆಹಲಿ: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಆರ್‌ಟಿಐ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ( Abhijeet Deepke ) ಬಹಿರಂಗವಾಗಿಯೇ ಸ್ಪಷ್ಟನೆ ನೀಡಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಅಭಿಜಿತ್ ದೀಪ್ಕೆ ಅವರ ಹಣಕಾಸು ವ್ಯವಹಾರಗಳ ಬಗ್ಗೆ ಮತ್ತು ವಿದೇಶಿ ಶಿಕ್ಷಣದ ನಿಧಿಯ ಮೂಲದ ಕುರಿತು ಚುನಾವಣಾ ಆಯೋಗ, ಸಿಬಿಐಸಿ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಒಂದು ಬೆಳವಣಿಗೆ ನಡೆದಿದೆ.
ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಭಿಜಿತ್, ತಮಗೆ ಬೋಸ್ಟನ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ದೊರೆತಿತ್ತು. ಇದರ ಜೊತೆಗೆ ಶಿಕ್ಷಣ ಸಾಲವನ್ನು ಪಡೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಮುಂದಿನ ಚಟುವಟಿಕೆಗಳು ಸಂಪೂರ್ಣವಾಗಿ ಕ್ರೌಡ್ ಫಂಡ್‌ಮೆಂಟ್ (ಜನರ ನೆರವು) ಮೂಲಕವೇ ನಡೆಯಲಿವೆ ಎಂದು ತಿಳಿಸಿದ ದೀಪ್ಕೆ, ತಾವು ನಡೆಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಆಹಾರ ನೀಡಿದ್ದಲ್ಲದೆ, ಪೊಲೀಸರು ಕೂಡ ನೀರು ಖರೀದಿಸಲು ರಹಸ್ಯವಾಗಿ ಸಹಾಯ ಮಾಡಿದರು ಎಂದು ಸ್ಮರಿಸಿದ್ದಾರೆ.
ಮತ್ತೊಂದೆಡೆ, ನೋಂದಾಯಿತವಲ್ಲದ ಸಿಜೆಪಿ ಪಕ್ಷವು ದೇಣಿಗೆ ಸ್ವೀಕರಿಸುವುದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅಡಿ ಕಾನೂನುಬಾಹಿರ ಎಂದು ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಆರೋಪಿಸಿದ್ದು, ಅಭಿಜಿತ್ ಅವರ ತಂದೆ ಹಾಗೂ ಎಂಐಡಿಸಿ ಮಾಜಿ ಜೂನಿಯರ್ ಇಂಜಿನಿಯರ್ ಭಗವಾನ್ ರಾವ್ ದೀಪ್ಕೆ ಅವರ ಆಸ್ತಿಗಳ ಬಗ್ಗೆಯೂ ಉನ್ನತ ತನಿಖೆಗೆ ಒತ್ತಾಯಿಸಿದ್ದಾರೆ.
ಮಧ್ಯಮ ವರ್ಗದ ಹಿನ್ನೆಲೆಯ ಕುಟುಂಬದಿಂದ ಬಂದು ಅಮೆರಿಕದಂತಹ ದೇಶದಲ್ಲಿ ಉನ್ನತ ಶಿಕ್ಷಣ ಪಡೆದ ದೀಪ್ಕೆ ಅವರ ಆರ್ಥಿಕ ಮೂಲಗಳು ಹಾಗೂ ತಂದೆಯ ಅಕ್ರಮ ಆಸ್ತಿ ಸಂಪಾದನೆಯ ಆರೋಪಗಳ ಕುರಿತಾದ ಈ ವಿವಾದವು ಪ್ರಸ್ತುತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್).