ದೇಶ

ಬೆಟ್ಟದಷ್ಟು ಕಷ್ಟ, ಸೀರೆ ತೊಟ್ಟು ಬರಿಗಾಲಿನಲ್ಲಿ ಓಟ: ಹೋಮ್‌ಗಾರ್ಡ್‌ ಕನಸು ಬೆನ್ನತ್ತಿದ ಕವಿತಾ ಮಹತೋ ಸಾಹಸಗಾಥೆ ಇದು! | Kavita Mahto

Kavita Mahto: ಜಾರ್ಖಂಡ್‌ನ ರಾಮಗಢ ಜಿಲ್ಲೆಯಿಂದ ವೈರಲ್ ಆಗಿರುವ ವಿಡಿಯೋ ಕೇವಲ ಒಂದು ದೃಶ್ಯವಲ್ಲ, ಬದಲಿಗೆ ಬದುಕಿನ ಕಷ್ಟಗಳೊಂದಿಗೆ ಹೋರಾಡಿ ಗೆಲ್ಲಲು ಹೊರಟ ಒಬ್ಬ ಮಹಿಳೆಯ ದಿಟ್ಟ ಕಥೆ. ಸೀರೆ ಧರಿಸಿ, ಪಾದಗಳಿಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಓಡಿದ ಆಕೆಯ ಛಲ ಎಲ್ಲರ ಹೃದಯದಲ್ಲಿ ಹೆಮ್ಮೆಯ ಭಾವ ಮೂಡಿಸದೆ ಇರಲು ಸಾಧ್ಯವಿಲ್ಲ.

Kavita Mahto: ಜಾರ್ಖಂಡ್‌ನ ರಾಮಗಢ ಜಿಲ್ಲೆಯಿಂದ ವೈರಲ್ ಆಗಿರುವ ವಿಡಿಯೋ ಕೇವಲ ಒಂದು ದೃಶ್ಯವಲ್ಲ, ಬದಲಿಗೆ ಬದುಕಿನ ಕಷ್ಟಗಳೊಂದಿಗೆ ಹೋರಾಡಿ ಗೆಲ್ಲಲು ಹೊರಟ ಒಬ್ಬ ಮಹಿಳೆಯ ದಿಟ್ಟ ಕಥೆ. ಸೀರೆ ಧರಿಸಿ, ಪಾದಗಳಿಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಓಡಿದ ಆಕೆಯ ಛಲ ಎಲ್ಲರ ಹೃದಯದಲ್ಲಿ ಹೆಮ್ಮೆಯ ಭಾವ ಮೂಡಿಸದೆ ಇರಲು ಸಾಧ್ಯವಿಲ್ಲ. ಕವಿತಾ ಕುಮಾರಿ ಮಹತೋ ಎಂಬ ಈ ಧೈರ್ಯಶಾಲಿ ಮಹಿಳೆ ಪ್ರದರ್ಶಿಸಿದ ಛಲ ನಿಜಕ್ಕೂ ಇಡೀ ಸಮಾಜಕ್ಕೆ ಮಾದರಿ ಅಂದರೆ ಅತಿಶಯೋಕ್ತಿಯಾಗದು.

ಕವಿತಾ ಅವರ ಈ ಓಟವು ಯಾವುದೇ ಹವ್ಯಾಸಕ್ಕಾಗಿಯಲ್ಲ, ಬದಲಿಗೆ, ಬದುಕಿನ ಕಷ್ಟಗಳನ್ನು ಮೆಟ್ಟಿನಿಂತು ಕುಟುಂಬವನ್ನು ರಕ್ಷಿಸಿಕೊಳ್ಳಲು ಹೋಮ್‌ಗಾರ್ಡ್‌ ಉದ್ಯೋಗಕ್ಕಾಗಿ ನಡೆದ ಫಿಸಿಕಲ್ ಟೆಸ್ಟ್ ಅಗ್ನಿಪರೀಕ್ಷೆಯಾಗಿತ್ತು.

ಇದನ್ನೂ ಓದಿ:

ಕವಿತಾ ಮಹತೋ ಏನು ಹೇಳಿದ್ರು..? ಇಲ್ಲಿದೆ ನೋಡಿ!

ಮಾಧ್ಯಮದೊಂದಿಗೆ ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡ ಕವಿತಾ, ಪತಿ ಅನಾರೋಗ್ಯಕ್ಕೆ ತುತ್ತಾಗಿ ದೀರ್ಘಕಾಲ ಚಿಕಿತ್ಸೆ ಪಡೆದರೂ ಕೊನೆಗೆ ನಮ್ಮನ್ನಗಲಿದರು ಎಂದು ಕಣ್ಣೀರಿಟ್ಟಿದ್ದಾರೆ. ಪತಿಯ ಚಿಕಿತ್ಸೆಗಾಗಿ ಮಾಡಿದ ಸಾಲ ಬೆಟ್ಟದಷ್ಟಿದ್ದು, ಇಂದಿಗೂ ಅದನ್ನು ತೀರಿಸಲಾಗದೆ, ಅದರ ಹೊರೆಯ ಚಿಂತೆಯಿಂದ ತಮಗೆ ರಾತ್ರಿ ಸರಿಯಾಗಿ ನಿದ್ದೆಯೂ ಬರುವುದಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಓಟದ ಸ್ಪರ್ಧೆಗೆ ಬೇಕಾದ ಟ್ರ್ಯಾಕ್ ಸೂಟ್ ಅಥವಾ ಬೂಟುಗಳನ್ನು ಖರೀದಿಸಲು ತಮ್ಮ ಬಳಿ ಕಾಸಿರಲಿಲ್ಲ, ಹಾಗಾಗಿ ಅನಿವಾರ್ಯವಾಗಿ ಸೀರೆಯುಟ್ಟುಕೊಂಡೇ ಓಡಬೇಕಾಯಿತು. ಸೀರೆಯಲ್ಲಿ ಓಡುತ್ತಿರುವಾಗ ತಮಗೆ ಸ್ವಲ್ಪ ಸಂಕೋಚ ಹಾಗೂ ಮುಜುಗರವೆನಿಸಿತು ಮತ್ತು ತಮ್ಮ ಚಪ್ಪಲಿ ಕೂಡ ಹರಿದುಹೋಗಿತ್ತು ಎಂದು ಅವರು ವಿವರಿಸಿದ್ದಾರೆ. ಆದರೆ, ಎಂಥವರನ್ನೂ ಕರಗಿಸುವ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಅವರು ತೋರಿದ ಅದಮ್ಯ ಛಲ ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಹೋಮ್‌ಗಾರ್ಡ್‌ ಹುದ್ದೆಯ ಈ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ 1600 ಮೀಟರ್ ದೂರವನ್ನು ಕ್ರಮಿಸಲು 10 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ಆದರೆ ಕವಿತಾ ಅವರು ನಿಗದಿತ 10 ನಿಮಿಷಗಳ ಬದಲಿಗೆ ಕೇವಲ 6 ನಿಮಿಷಗಳಲ್ಲೇ ಆ ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪತಿ ಇಲ್ಲದ ಕಾರಣ ತಮ್ಮ ಇಬ್ಬರು ಮಕ್ಕಳ ಭವಿಷ್ಯವನ್ನು ತಾವೇ ರೂಪಿಸಬೇಕಾದ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಮುಂದಿನ ಬದುಕಿನ ಚಿಂತೆಯೇ ಅವರನ್ನು ಬೇರೆ ಯಾವ ಯೋಚನೆಗೂ ಅವಕಾಶ ನೀಡುತ್ತಿಲ್ಲ. ಹೇಗಾದರೂ ಮಾಡಿ ಒಂದು ಒಳ್ಳೆಯ ಉದ್ಯೋಗ ಪಡೆಯಬೇಕು ಎನ್ನುವುದೇ ಏಕೈಕ ಗುರಿಯಾಗಿದೆ ಎಂದು ಕವಿತಾ ವಿವರಿಸಿದ್ದಾರೆ.

ಸುಮಾರು 27 ವರ್ಷ ವಯಸ್ಸಿನ ಕವಿತಾ ಕುಮಾರಿ ಅವರ ಪತಿ ಸುಮಾರು 3 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಪತಿಯ ಅಗಲಿಕೆಯ ಬಳಿಕ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಅತ್ತೆ-ಮಾವರ ಜವಾಬ್ದಾರಿ ಕವಿತಾ ಅವರ ಹೆಗಲೇರಿದೆ. ಈ ಮೊದಲು ಅವರು ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದರು. ಆದರೆ ಮುಂಜಾನೆಯೇ ಕೆಲಸಕ್ಕೆ ಹೋಗಬೇಕಿದ್ದರಿಂದ ಮನೆಯ ಜವಾಬ್ದಾರಿ ಮತ್ತು ಕೆಲಸಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಆ ಸೆಕ್ಯುರಿಟಿ ಗಾರ್ಡ್ ಕೆಲಸವನ್ನೂ ಬಿಡಬೇಕಾಯಿತು ಎಂದು ತಿಳಿದುಬಂದಿದೆ(ಏಜೆನ್ಸೀಸ್​).