ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ 
ದೇಶ

ನಿತೀಶ್​ ಕುಮಾರ್​ ಹಿಜಾಬ್ ವಿವಾದ; ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ನಾಲಿಗೆ ಹರಿಬಿಟ್ಟ ಯುಪಿ ಸಚಿವ | Sanjay Nishad

Sanjay Nishad: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯುವತಿಯೊಬ್ಬಳ ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ನೀಡಿರುವ ಕೀಳು ಮಟ್ಟದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ನಿಶಾದ್, ನಿತೀಶ್​ ಕುಮಾರ್ ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದು, ಅವರು ಕೂಡ ಒಬ್ಬ ಮನುಷ್ಯ. ಹಿಜಾಬ್ ಅನ್ನು ಮುಟ್ಟಿದ ಮಾತ್ರಕ್ಕೆ ಅವರನ್ನು ಈ ರೀತಿ ಬೇಟೆಯಾಡಬಾರದು ಎಂದಿದ್ದಾರೆ. ಸಚಿವ ನಿಶಾದ್​​ರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ನಾಯಕಿ ಸುಮಿಯಾ ರಾಣಾ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಅಸ್ಲಂ ಶೇಖ್ ಈ ಹೇಳಿಕೆಗಳನ್ನು ನೀಚ ಮತ್ತು ಸ್ತ್ರೀದ್ವೇಷಪೂರಿತ ಎಂದು ಕರೆದಿದ್ದು, ಹಿಜಾಬ್ ಮುಸ್ಲಿಂ ಮಹಿಳೆಯರಿಗೆ ಪವಿತ್ರವಾದದ್ದು. ಅದನ್ನು ಉಲ್ಲಂಘಿಸುವುದು ಹಲ್ಲೆಗೆ ಸಮಾನ. ಅದನ್ನು ಅಪಹಾಸ್ಯ ಮಾಡುವುದು ಹೇಯ ಕೃತ್ಯ. ಇಂತಹ ಮನಸ್ಥಿತಿಯಿಂದಾಗಿಯೇ ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಬಿಜೆಪಿ ಆಡಳಿತದಲ್ಲಿ ಅಸುರಕ್ಷಿತರಾಗಿದ್ದಾರೆ. ಅಲ್ಲಿ ಬೇಟಿ ಬಚಾವೋ ಬೇಟಿ ಪಡಾವೋನಂತಹ ಘೋಷಣೆಗಳು ಖಾಲಿ ಘೋಷಣೆಗಳಾಗಿದ್ದು. ಯಾವುದೇ ಧರ್ಮದ ಯಾವುದೇ ಮಹಿಳೆ ಇದಕ್ಕೆ ಅರ್ಹರಲ್ಲ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಏನಿದು ವಿವಾದ...?

ತಮ್ಮ ಸಚಿವಾಲಯದಲ್ಲಿ ನಡೆದ ಸಂವಾದ್ ಎಂಬ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಮುಖ ಗಂಟಿಕ್ಕಿ ಇದು ಏನು? ಎಂದು ಉದ್ಗರಿಸುತ್ತಾ ಯುವತಿಯ ಹಿಜಾಬ್ ಕೆಳಗೆ ಎಳೆದರು. ಸಿಎಂ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಅವರ ತೋಳನ್ನು ಎಳೆದು ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಈ ಕಾರ್ಯಕ್ರಮದಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು(ಏಜೆನ್ಸೀಸ್​).