Yogi Adityanath | ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌ: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ದ್ವಂದ್ವ ನೀತಿಯನ್ನು ಅನುಸರಿಸುತ್ತಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯ ಘಟನೆಯನ್ನು ಮುಂದಿಟ್ಟುಕೊಂಡು ಹಿಂದೂ ಧರ್ಮದ ವಿರುದ್ಧ ದಾಳಿ ಮಾಡುತ್ತಿರುವ ವಿಪಕ್ಷಗಳು, ವಕ್ಫ್ ಭೂಮಿ ಹಗರಣಗಳ ವಿಚಾರದಲ್ಲಿ ಏಕೆ ಮೌನವಾಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತಾಪ್‌ಗಢದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ವಿರೋಧ ಪಕ್ಷಗಳು ಕೇವಲ ಒಂದು ಘಟನೆಯನ್ನು ದೊಡ್ಡದು ಮಾಡಿ ಒಟ್ಟಾರೆ ಹಿಂದೂ ಧರ್ಮವನ್ನು ಅವಮಾನಿಸಲು ಮತ್ತು ಅಯೋಧ್ಯೆಯ ಪ್ರಾಮುಖ್ಯತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಊಸರವಳ್ಳಿಗೂ ನಾಚಿಕೆಯಾಗುತ್ತೆ!..
ಇಂದು ಅಯೋಧ್ಯೆ ಜಗತ್ತಿನಾದ್ಯಂತ ಇರುವ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಜನರು ಅಯೋಧ್ಯೆಗೆ ಬರುತ್ತಿರುವುದು ವಿರೋಧ ಪಕ್ಷದವರಿಗೆ ದೊಡ್ಡ ನೋವನ್ನು ಉಂಟುಮಾಡಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ರಾಜಕೀಯ ಯು-ಟರ್ನ್‌ಗಳನ್ನು ನೋಡಿದರೆ ಊಸರವಳ್ಳಿಯೂ ಸಹ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಬೇಕು. ಇವರು ಕೇವಲ ಒಂದು ಘಟನೆಯನ್ನು ಹಿಡಿದುಕೊಂಡು, ಅದನ್ನು ಇಡೀ ದೇಶದಾದ್ಯಂತ ದೊಡ್ಡದು ಮಾಡಿ ಹಿಂದೂಗಳನ್ನು ಅವಮಾನಿಸುತ್ತಿದ್ದಾರೆ ಮತ್ತು ಅವರ ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಎಂದರು.
ಅಯೋಧ್ಯೆಯ ಕಳ್ಳತನದ ನೆಪದಲ್ಲಿ ಹಿಂದೂಗಳ ನಂಬಿಕೆಯೊಂದಿಗೆ ಆಟವಾಡುತ್ತಿರುವ ಎಸ್ಪಿ ಮತ್ತು ಕಾಂಗ್ರೆಸ್ ನಾಯಕರು, ವಕ್ಫ್ ಹೆಸರಿನಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದಾಗ ಒಂದೇ ಒಂದು ಬಾರಿಯಾದರೂ ಧ್ವನಿ ಎತ್ತಿದ್ದೀರಾ..? ಎಂದು ಪ್ರಶ್ನಿಸಿರುವ ಯೋಗಿ, ಬಡವರಿಗೆ, ದೀನದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಸಿಗಬೇಕಾಗಿದ್ದ ಭೂಮಿಯನ್ನು ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳು ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ವಶಪಡಿಸಿಕೊಂಡು ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ. ಆದರೂ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಇದರ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಸಿಎಂ ಆರೋಪಿಸಿದರು.
ತನಿಖೆಗೆ ಆದೇಶಿಸಿದ್ದು ನಾವೇ!..
ರಾಮಮಂದಿರ ದೇಣಿಗೆ ಕಳ್ಳತನದ ಪ್ರಕರಣವನ್ನು ತಮ್ಮ ಸರ್ಕಾರ ನಿಭಾಯಿಸಿದ ರೀತಿಯನ್ನು ಸಮರ್ಥಿಸಿಕೊಂಡಿರುವ ಯೋಗಿ ಆದಿತ್ಯನಾಥ್, ವಿಷಯ ಬೆಳಕಿಗೆ ಬಂದ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ರಾಮಜನ್ಮಭೂಮಿ ಟ್ರಸ್ಟ್ ಖುದ್ದಾಗಿ ಎಸ್‌ಐಟಿ (SIT) ತನಿಖೆಗೆ ಒಪ್ಪಿಸುವಂತೆ ವಿನಂತಿಸಿತ್ತು. ಸತ್ಯ ಎಂದಿದ್ದರೂ ಹೊರಬರಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಎಸ್‌ಐಟಿ ತನಿಖಾ ವರದಿಯ ಆಧಾರದ ಮೇಲೆಯೇ ಎಫ್‌ಐಆರ್ ದಾಖಲಿಸಲಾಗಿದ್ದು, ಸೂಕ್ತ ಪುರಾವೆಗಳು ಲಭ್ಯವಿರುವ ಎಲ್ಲ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.
ಸದ್ಯ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಬಳಿ ಜನರಿಗೆ ಹೇಳಿಕೊಳ್ಳಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಅವರು ಕೇವಲ ಎರಡೇ ಅಜೆಂಡಾಗಳನ್ನು ಇಟ್ಟುಕೊಂಡಿದ್ದಾರೆ. ಒಂದು, ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವುದು ಮತ್ತು ಇನ್ನೊಂದು, ಜನರ ಧಾರ್ಮಿಕ ನಂಬಿಕೆಗಳ ಮೇಲೆ ದಾಳಿ ಮಾಡುವುದು. ಕಾಂಗ್ರೆಸ್ ಒಂದು ಕಾಲದಲ್ಲಿ ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣ ಈ ಜಗತ್ತಿನಲ್ಲೇ ಇರಲಿಲ್ಲ, ಅವರೆಲ್ಲ ಕಾಲ್ಪನಿಕ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಅಯೋಧ್ಯೆಯ ಬಾಬರಿ ರಚನೆಯನ್ನು ಕೈ ಮತ್ತು ಸಮಾಜವಾದಿ ಪಕ್ಷಗಳು ಬೆಂಬಲಿಸಿದ್ದವು ಮತ್ತು ಅದಕ್ಕಾಗಿ ಮೊಸಳೆ ಕಣ್ಣೀರು ಸುರಿಸಿದ್ದವು. ಆದರೆ ಈಗ, ಊಸರವಳ್ಳಿ ಬಣ್ಣ ಬದಲಾಯಿಸುವಂತೆ, ಜನರ ಧಾರ್ಮಿಕ ನಂಬಿಕೆಗೆ ತೊಂದರೆಯಾಗುತ್ತಿದೆ ಎಂದು ನಾಟಕವಾಡುತ್ತಿದ್ದಾರೆ ಎಂದು ಯೋಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳಿಗೆ ಅಯೋಧ್ಯೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ..
ವಿರೋಧ ಪಕ್ಷಗಳಿಗೆ ಅಯೋಧ್ಯೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದಿರುವ ಆದಿತ್ಯನಾಥ್, ಅಯೋಧ್ಯೆಯು ಎಂದಿನಿಂದ ನಿಮ್ಮ ನಂಬಿಕೆಯ ಕೇಂದ್ರವಾಯಿತು..? ರಾಮಭಕ್ತರು ತಮ್ಮ ನಂಬಿಕೆ ಅಯೋಧ್ಯೆಯೊಂದಿಗೆ ಬೆಸೆದಿದೆ ಎಂದು ಹೇಳಿದರೆ ಅದಕ್ಕೊಂದು ಅರ್ಥವಿದೆ ಮತ್ತು ಅವರಿಗೆ ಆ ಹಕ್ಕಿದೆ. ಆದರೆ ಕಾಂಗ್ರೆಸ್‌ಗೆ ಆ ಹಕ್ಕಿಲ್ಲ. ಭಗವಾನ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿದ ಪಕ್ಷ ಮತ್ತು ರಾಮಭಕ್ತರ ಮೇಲೆ ಗುಂಡು ಹಾರಿಸಿದ ಸಮಾಜವಾದಿ ಪಕ್ಷ ಇಂದು ಯಾವ ನಂಬಿಕೆಯ ಬಗ್ಗೆ ಮಾತನಾಡುತ್ತಿವೆ ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರಗಳು ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ನಿಧಿಯನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿದ ಯುಪಿ ಸಿಎಂ, ಹಿಂದೂ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಬಳಸಬೇಕಾಗಿದ್ದ ಸಾರ್ವಜನಿಕ ಹಣವನ್ನು ಸ್ಮಶಾನಗಳ ಸುತ್ತಲೂ ಗೋಡೆಗಳನ್ನು ನಿರ್ಮಿಸಲು ಹೇಗೆ ಬಳಸಿಕೊಳ್ಳಲಾಯಿತು..? ಆಗ ನಿಮ್ಮ ಧಾರ್ಮಿಕ ನಂಬಿಕೆಗಳು ಎಲ್ಲಿ ಹೋಗಿದ್ದವು..? ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿದ್ದಾಗ, ಗೋವುಗಳನ್ನು ಕಳ್ಳಸಾಗಣೆದಾರರಿಗೆ ಒಪ್ಪಿಸಿ ಕಟಾವು ಮಾಡಿಸುತ್ತಿದ್ದಾಗ ಹಿಂದೂಗಳ ನಂಬಿಕೆಗೆ ಧಕ್ಕೆಯಾಗುತ್ತಿರಲಿಲ್ಲವೇ..? ಎಂದು ಯೋಗಿ ಆದಿತ್ಯಾನಾಥ್ ಪ್ರಶ್ನೆಗಳ ಸುರಿಮಳೆಗೈದರು(ಏಜೆನ್ಸೀಸ್).