ಕೋಲ್ಕತ್ತಾ: ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ವೇದಿಕೆ ಸಜ್ಜಾಗಿದೆ. ಇಷ್ಟು ದಿನ 'ವೆಸ್ಟ್ ಬೆಂಗಾಲ್' (West Bengal) ಎಂದು ಕರೆಯಲ್ಪಡುತ್ತಿದ್ದ ರಾಜ್ಯದ ಹೆಸರನ್ನು ಇನ್ಮುಂದೆ 'ಪಶ್ಚಿಮ ಬಂಗ' (Paschim Banga) ಎಂದು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ದೊರಕಿದೆ. ಸೋಮವಾರ (ನ.23) ಕೋಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಸ್ವತಃ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಈ ನಿರ್ಧಾರಕ್ಕೆ ಅಂತಿಮ ಮುದ್ರೆ ಬಿದ್ದರೆ, ಕನ್ನಡ ಅಥವಾ ಬಂಗಾಳಿಯಲ್ಲಿ ಮಾತ್ರವಲ್ಲದೆ ಇಂಗ್ಲಿಷ್‌ನಲ್ಲೂ 'West Bengal' ಬದಲಿಗೆ 'Paschim Banga' ಎಂದೇ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯದ ಹೆಸರು ಬದಲಾಯಿಸುವ ಪ್ರಕ್ರಿಯೆಯನ್ನು ಸರ್ಕಾರ ಬಹಳ ವೇಗವಾಗಿ ಮುಂದುವರಿಸುತ್ತಿದ್ದು, ಡಿಸೆಂಬರ್ 4 ರಿಂದ 14 ರವರೆಗೆ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿಸೆಂಬರ್ 9 ರಂದು ಈ ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಅಧಿಕೃತವಾಗಿ ಸದನದಲ್ಲಿ ಮಂಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಈ ನಿರ್ಣಯ ಅಂಗೀಕಾರವಾದ ಬಳಿಕ, ಅಂತಿಮ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ನಂತರ ಸಂಸತ್ತಿಗೆ ಕಳುಹಿಸಿಕೊಡಲಾಗುತ್ತದೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಕೂಡ ಈ ಬಗ್ಗೆ ಸುಳಿವು ನೀಡಿದ್ದರು.
ಈ ದಿಢೀರ್ ನಿರ್ಧಾರದ ಹಿಂದಿನ ಕಾರಣವನ್ನು ಸಿಎಂ ಸುವೇಂದು ಅಧಿಕಾರಿ ವಿವರಿಸಿದ್ದಾರೆ. "1947ರ ಜೂನ್ 20 ರಂದು ದೇಶ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ರಚನೆಯ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದು ನಮ್ಮ ಇತಿಹಾಸಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಈ ಬದಲಾವಣೆ ಆಗಲೇಬೇಕು. ಇಂಗ್ಲಿಷ್‌ನಲ್ಲೂ ಇನ್ಮುಂದೆ ಇದು 'ಪಶ್ಚಿಮ ಬಂಗ' ಎಂದೇ ಕರೆಯಲ್ಪಡಲಿದೆ" ಎಂದು ಅವರು ಹೇಳಿದ್ದಾರೆ.
ಬಂಗಾಳದ ಹೆಸರು ಬದಲಾಯಿಸುವ ಚರ್ಚೆ ಇದೇ ಮೊದಲಲ್ಲ. ಈ ಹಿಂದೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯದ ಹೆಸರನ್ನು 'ಬಾಂಗ್ಲಾ' (Bangla) ಎಂದು ಬದಲಾಯಿಸಲು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು.
ಆಗ ಹೆಸರು ಬದಲಾವಣೆಗೆ ವರ್ಣಮಾಲೆ ಸಮಸ್ಯೆ ಎದುರಾಗಿತ್ತು. 'West Bengal' ಎಂಬ ಹೆಸರು 'W' ಅಕ್ಷರದಿಂದ ಶುರುವಾಗುವುದರಿಂದ, ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಬಂಗಾಳದ ಸರದಿ ಯಾವಾಗಲೂ ಕೊನೆಯಲ್ಲಿ ಬರುತ್ತಿತ್ತು. ಇದರಿಂದ ಆಡಳಿತಾತ್ಮಕವಾಗಿ ಹಿನ್ನಡೆಯಾಗುತ್ತಿದೆ ಎಂಬ ವಾದವಿತ್ತು. ಆದರೆ, ಮಮತಾ ಸರ್ಕಾರದ 'ಬಾಂಗ್ಲಾ' ಪ್ರಸ್ತಾವನೆಗೆ ಕೇಂದ್ರದಿಂದ ಅನುಮತಿ ಸಿಕ್ಕಿರಲಿಲ್ಲ. ಈಗಿನ 'ಪಶ್ಚಿಮ ಬಂಗ' (Paschim Banga) ಹೆಸರು ಇಂಗ್ಲಿಷ್‌ನಲ್ಲಿ 'P' ಅಕ್ಷರದಿಂದ ಶುರುವಾಗುವುದರಿಂದ, ಪಟ್ಟಿಯಲ್ಲಿ ರಾಜ್ಯದ ಸ್ಥಾನವೂ ಮೇಲಕ್ಕೆ ಬರಲಿದೆ.
ಸ್ವಾತಂತ್ರ್ಯದ ನಂತರ ಆಡಳಿತ ಮತ್ತು ಭಾಷಾ ಗುರುತಿಗಾಗಿ ದೇಶದ ಹಲವು ರಾಜ್ಯಗಳು ತಮ್ಮ ಹೆಸರನ್ನು ಬದಲಿಸಿಕೊಂಡಿವೆ. 1950 ರಲ್ಲಿ 'ಯುನೈಟೆಡ್ ಪ್ರಾವಿನ್ಸಸ್' ಉತ್ತರ ಪ್ರದೇಶವಾಯಿತು ಹಾಗೂ 'ಈಸ್ಟ್ ಪಂಜಾಬ್' ಪಂಜಾಬ್ ಆಯಿತು. 1969 ರಲ್ಲಿ 'ಮದ್ರಾಸ್' ರಾಜ್ಯಕ್ಕೆ ತಮಿಳುನಾಡು ಎಂದು ಮರುನಾಮಕರಣ ಮಾಡಲಾಯಿತು.
1972 ರಲ್ಲಿ 'ನೆಫಾ' (NEFA) ಅರುಣಾಚಲ ಪ್ರದೇಶವಾದರೆ, 1973 ರಲ್ಲಿ ನಮ್ಮ 'ಮೈಸೂರು' ರಾಜ್ಯ ಕರ್ನಾಟಕವಾಯಿತು. 2007 ರಲ್ಲಿ 'ಉತ್ತರಾಂಚಲ' ಉತ್ತರಾಖಂಡವಾಯಿತು ಮತ್ತು 2011ರಲ್ಲಿ 'ಒರಿಸ್ಸಾ' ಒಡಿಶಾ ಆಯಿತು. ಇತ್ತೀಚೆಗಷ್ಟೇ ಅಂದರೆ 2026ರಲ್ಲಿ 'ಕೇರಳ' ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಇದೀಗ ಈ ಸಾಲಿಗೆ ಪಶ್ಚಿಮ ಬಂಗಾಳ ಕೂಡ ಸೇರ್ಪಡೆಯಾಗಲು ಸಜ್ಜಾಗಿದ್ದು, ರಾಜ್ಯ ಸಚಿವ ಸಂಪುಟವೇನೋ ಒಪ್ಪಿಗೆ ನೀಡಿದೆ, ಮುಂದೆ ವಿಧಾನಸಭೆ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಪ್ರಕ್ರಿಯೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).