

ಝಾನ್ಸಿ: ಸಾಮಾನ್ಯವಾಗಿ ಹ್ಯಾಂಡ್ ಪಂಪ್ ಒತ್ತಿದರೆ ತಣ್ಣನೆಯ ನೀರು ಬರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಹ್ಯಾಂಡ್ ಪಂಪ್ ಒತ್ತಿದಾಗ ನೀರಿನ ಬದಲು ಧಾರಾಕಾರವಾಗಿ ಕಳ್ಳಬಟ್ಟಿ (ಅಕ್ರಮ ಮದ್ಯ) ಹರಿದು ಬಂದಿದೆ. ಕೇಳಲು ವಿಚಿತ್ರ ಎನಿಸಿದರೂ ಇದು ಅಕ್ಷರಶಃ ಸತ್ಯವಾಗಿದ್ದು, ಅಕ್ರಮ ಮದ್ಯ ದಂಧೆಕೋರರ ಈ ಖತರ್ನಾಕ್ ಐಡಿಯಾ ಕಂಡು ಸ್ವತಃ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಝಾನ್ಸಿಯ ತೇಜ್‌ಪುರ ಘುರಾತ್ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 21 ರಂದು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಗ್ರಾಮದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದೆ.
ಮನೆಯೆಲ್ಲಾ ಹುಡುಕಾಡಿದರೂ ಅಧಿಕಾರಿಗಳಿಗೆ ಮೊದಲು ಎಲ್ಲಿಯೂ ಮದ್ಯದ ಸುಳಿವು ಸಿಕ್ಕಿರಲಿಲ್ಲ. ಆದರೆ, ಮನೆಯ ಅಂಗಳದಲ್ಲಿದ್ದ ಹ್ಯಾಂಡ್ ಪಂಪ್ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಕುತೂಹಲದಿಂದ ಪೊಲೀಸರು ಆ ಹ್ಯಾಂಡ್ ಪಂಪ್ ಅನ್ನು ಹೊಡೆಯಲು ಶುರುಮಾಡಿದಾಗ, ಅದರಿಂದ ನೀರಿನ ಬದಲು ಘಾಟು ವಾಸನೆಯ ಕಳ್ಳಬಟ್ಟಿ ಹೊರಬರಲು ಆರಂಭಿಸಿದೆ.
ಪೊಲೀಸರಿಗೆ ಮತ್ತು ಅಬಕಾರಿ ಅಧಿಕಾರಿಗಳಿಗೆ ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಕಳ್ಳರು ಈ ಮಾಸ್ಟರ್ ಪ್ಲಾನ್ ಮಾಡಿದ್ದರು. ಭೂಮಿಯ ಆಳದಲ್ಲಿ ದೊಡ್ಡ ಟ್ಯಾಂಕ್‌ಗಳನ್ನು ಅಳವಡಿಸಿ, ಅದರಲ್ಲಿ ಅಕ್ರಮ ಮದ್ಯವನ್ನು ಸಂಗ್ರಹಿಸಿಟ್ಟಿದ್ದರು.
ಯಾರಿಗೂ ಗೊತ್ತಾಗದಂತೆ ಆ ಟ್ಯಾಂಕ್‌ಗೆ ಪೈಪ್‌ಲೈನ್ ಸಂಪರ್ಕ ನೀಡಿ, ಮೇಲ್ಭಾಗದಲ್ಲಿ ನೋಡಲು ಥೇಟ್ ನೀರಿನ ಪಂಪ್‌ನಂತೆ ಕಾಣುವ ಹ್ಯಾಂಡ್ ಪಂಪ್ ಫಿಟ್ ಮಾಡಿದ್ದರು. ಗಿರಾಕಿಗಳು ಬಂದಾಗಲೆಲ್ಲಾ ಇದೇ ಪಂಪ್ ಒತ್ತಿ ಮದ್ಯ ತೆಗೆದು ಮಾರಾಟ ಮಾಡುತ್ತಿದ್ದರು.
ಈ ದಾಳಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪೊಲೀಸರು ಹ್ಯಾಂಡ್ ಪಂಪ್ ಹೊಡೆಯುತ್ತಿರುವುದು ಮತ್ತು ಅದರಿಂದ ಸುರಿಯುತ್ತಿರುವ ಮದ್ಯವನ್ನು ಕೆಳಗಿರುವ ತೊಟ್ಟಿಯಲ್ಲಿ ಸಂಗ್ರಹಿಸಿ, ನಂತರ ಪ್ಲಾಸ್ಟಿಕ್ ಜೆರಿಕ್ಯಾನ್‌ಗಳಿಗೆ ತುಂಬಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದನ್ನು ನೋಡಿದ ನೆಟ್ಟಿಗರು "ಕಳ್ಳರ ಬುದ್ಧಿವಂತಿಕೆಗೆ ಮೆಚ್ಚಲೇಬೇಕು" ಎಂದು ಕಮೆಂಟ್ ಮಾಡುತ್ತಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಸುಮಾರು 30 ಲೀಟರ್ ತಯಾರಿದ್ದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಮಾರಾಟಕ್ಕೆ ಸಿದ್ಧಪಡಿಸಿಟ್ಟಿದ್ದ ಸುಮಾರು 1,000 ಲೀಟರ್ ಕಚ್ಚಾ ಮದ್ಯವನ್ನು ಸ್ಥಳದಲ್ಲೇ ನಾಶಪಡಿಸಿ ದಂಧೆಕೋರರಿಗೆ ದೊಡ್ಡ ಶಾಕ್ ನೀಡಿದ್ದಾರೆ.
ಈ ಸಂಬಂಧ ತೇಜ್‌ಪುರ ಘುರಾತ್ ಗ್ರಾಮದ 30 ವರ್ಷದ ವಿನೀತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ದಂಧೆಯ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ, (ಏಜೆನ್ಸೀಸ್).