Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ದೀದಿ ಆಡಳಿತದ ಅಂತ್ಯಕ್ಕೆ ಕ್ಷಣಗಣನೆ..ನಿಮ್ಮ ಒಂದು ಮತ ಮಹಾಜಂಗಲ್ ರಾಜ್​ಗೆ ಕೊನೆಯ ಮೊಳೆಯಾಗಲಿದೆ ಎಂದ ಪ್ರಧಾನಿ ಮೋದಿ | Narendra Modi

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿನ ಟಿಎಂಸಿಯ 15 ವರ್ಷಗಳ ಮಹಾಜಂಗಲ್ ರಾಜ್​ ಆಡಳಿತವನ್ನು ಕೊನೆಗಾಣಿಸಲು ಈಗ ಸರಿಯಾದ ಸಮಯ ಬಂದಿದೆ ಎಂದು ಭಾನುವಾರ ಹೇಳಿದರು.
ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪಶ್ಚಿಮ ಬಂಗಾಳಕ್ಕೆ ಬದಲಾವಣೆ ಅಗತ್ಯವಿದ್ದು, ಜನರು ಟಿಎಂಸಿಯ ದುರಾಡಳಿತದಿಂದ ಬೇಸತ್ತಿದ್ದಾರೆ ಮತ್ತು ಬ್ಯಾನರ್ಜಿ ಮತ್ತು ಅವರ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಸಿದ್ಧವಾಗಿದ್ದಾರೆ ಎಂದು ಹೇಳಿದರು.
ಟಿಎಂಸಿ ರಾಜ್ಯದ ಯುವಕರು, ಮಹಿಳೆಯರು, ರೈತರು ಮತ್ತು ಮೀನುಗಾರರ ಪಾಲಿಗೆ ಶತ್ರುವಾಗಿದ್ದು, ಬಿಜೆಪಿಯಿಂದ ಮಾತ್ರ ಪಶ್ಚಿಮ ಬಂಗಾಳ ಅಭಿವೃದ್ಧಿ ಹೊಂದಲು ಸಾಧ್ಯ, ಮಮತಾ ಸರ್ಕಾರ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ನೀಡುತ್ತಿಲ್ಲ, ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತ ಅಂತ್ಯವಾಗಿದ್ದು, ಈಗ ಮುಂದಿನ ಸರದಿ ಬಂಗಾಳ ಎಂದರು.
ಪಶ್ಚಿಮ ಬಂಗಾಳಕ್ಕಾಗಿ ತಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ ಪ್ರಧಾನಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೇ ಬಂಗಾಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ, ಈ ಹಿಂದೆ ಯುಪಿಎ ಸರ್ಕಾರದ ಪಾಲುದಾರನಾಗಿದ್ದ ಟಿಎಂಸಿಗೆ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ಪ್ರಯತ್ನಗಳಿಂದಾಗಿಯೇ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ದುರ್ಗಾ ಪೂಜೆಗೂ ಸಾಂಸ್ಕೃತಿಕ ಪರಂಪರೆಯ ಸ್ಥಾನಮಾನ ನೀಡಿದೆ, ಪಶ್ಚಿಮ ಬಂಗಾಳಕ್ಕೆ ತನ್ನದೇ ಆದ ಸಾಮರ್ಥ್ಯವಿದ್ದು, ಇಲ್ಲಿ ದೊಡ್ಡ ನದಿಗಳಿವೆ, ಬಹಳ ವಿಸ್ತಾರವಾದ ಕರಾವಳಿ ಪ್ರದೇಶವಿದೆ, ಫಲವತ್ತಾದ ಭೂಮಿ ಇದೆ, ಪಶ್ಚಿಮ ಬಂಗಾಳದ ಪ್ರತಿಯೊಂದು ಜಿಲ್ಲೆಯೂ ವಿಶೇಷವಾದದ್ದನ್ನು ಹೊಂದಿದ್ದು, ಬಿಜೆಪಿ ಪ್ರತಿಯೊಂದು ಜಿಲ್ಲೆಯ ಈ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಮೋದಿ ಭರವಸೆ ನೀಡಿದರು.
ಟಿಎಂಸಿ ಸರ್ಕಾರ ಒಳನುಸುಳುವಿಕೆಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದ ಮೋದಿ, ಗಡಿಗಳಿಗೆ ಬೇಲಿ ಹಾಕಲು ಕೇಂದ್ರವು ಭೂಮಿಯನ್ನು ಕೋರುತ್ತಿದ್ದರೂ, ಟಿಎಂಸಿ ಸರ್ಕಾರಕ್ಕೆ ಯಾವುದೇ ಬೆಂಬಲವನ್ನು ನೀಡುತ್ತಿಲ್ಲ, ಇದಕ್ಕೆ ವ್ಯತಿರಿಕ್ತ ಎಂಬಂತೆ ಬ್ಯಾನರ್ಜಿಯವರ ಪಕ್ಷವು ಒಳನುಸುಳುಕೋರರಿಗೆ ದಾಖಲೆಗಳನ್ನು ತಯಾರಿಸುವಲ್ಲಿ ನಿರತವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇಲ್ಲಿನ ಟಿಎಂಸಿ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳು ನಿಮ್ಮನ್ನು ಸರಿಯಾಗಿ ತಲುಪಲು ಬಿಡುವುದಿಲ್ಲ, ನನ್ನ ಮತ್ತು ಬಿಜೆಪಿಯ ಮೇಲಿನ ಅವರ ದ್ವೇಷವನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಟಿಎಂಸಿ ಬಂಗಾಳದ ಜನರ ಮೇಲೆ ತನ್ನ ದ್ವೇಷವನ್ನು ಬೀರುತ್ತಿದೆ ಎಂದರು. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ(ಏಜೆನ್ಸೀಸ್​).