Nandigram Bypoll | ಸ್ವಂತ ಅಭ್ಯರ್ಥಿ ಕೈಕೊಡುತ್ತಿದ್ದಂತೆ 'ಕೈ' ಹಿಡಿದ ದೀದಿ!
ಕೊಲ್ಕತ್ತಾ: ನಂದಿಗ್ರಾಮ ಉಪಚುನಾವಣೆಯಲ್ಲಿ (Nandigram Bypoll) ತಮ್ಮ ಬಣದ ಅಭ್ಯರ್ಥಿಯನ್ನು ಕಳೆದುಕೊಂಡ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್‌ನ ತಮ್ಮ ಬಣವು ಈಗ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದು ಮಮತಾ ಬ್ಯಾನರ್ಜಿ ಶುಕ್ರವಾರ ತಿಳಿಸಿದ್ದಾರೆ. 1998 ರಲ್ಲಿ ತಾವೇ ಸ್ಥಾಪಿಸಿದ್ದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತಮಗೆ ಕಾಂಗ್ರೆಸ್‌ನ ಬೆಂಬಲವಿದೆ ಎಂದು ಉಲ್ಲೇಖಿಸಿದ ಅವರು, ರಾಹುಲ್ ಗಾಂಧಿ ನಿನ್ನೆ ನನಗೆ ಕರೆ ಮಾಡಿದ್ದರು. ನಾವಿಬ್ಬರೂ ಒಂದಾಗಿದ್ದೇವೆ. ನಾವು ಬಿಜೆಪಿಗೆ ಶರಣಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಮತಾ ಬಣವು ಭಾನುವಾರ ಸಂಚಿತಾ ಪ್ರಧಾನ್ ಡೇ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಗುರುವಾರ ರಾತ್ರಿ ಡೇ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದ್ದು, ಶುಕ್ರವಾರ ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದು ಬಹಿರಂಗವಾಗಿದೆ. ಅಕ್ಟೋಬರ್ 6 ರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಈಗಾಗಲೇ ಮುಗಿದಿರುವುದರಿಂದ, ಅವರ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ.
ನಾವು ಮುಂಚಿತವಾಗಿಯೇ ನಿರ್ಧರಿಸಿದ್ದಂತೆ, ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಮ್ಮ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಇದೇ ವೇಳೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಂದಿಗ್ರಾಮ ಉಪಚುನಾವಣೆಗೆ ಸ್ವತಃ ಮಮತಾ ಬ್ಯಾನರ್ಜಿ ಅವರೇ ಸ್ಪರ್ಧಿಸಲಿದ್ದಾರೆ ಎಂಬ ದೊಡ್ಡ ಮಟ್ಟದ ಚರ್ಚೆಗಳ ನಂತರ ಸಂಚಿತಾ ಡೇ ಅವರ ಹೆಸರು ಘೋಷಿಸಲಾಗಿತ್ತು.
ಅಕ್ರಮ ನೇಮಕಾತಿ ಹಗರಣದ ತೀರ್ಪಿನಿಂದಾಗಿ ಕೆಲಸ ಕಳೆದುಕೊಂಡಿದ್ದ ಶಿಕ್ಷಕಿ ಸಂಚಿತಾ ಡೇ, ನಂದಿಗ್ರಾಮದ ರಾಜಕೀಯ ಅಖಾಡಕ್ಕೆ ತೀರಾ ಹೊಸ ಅಭ್ಯರ್ಥಿಯಾಗಿದ್ದರು. 2021 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರೂ, ನಂತರ ಭವಾನಿಪುರ ಉಪಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಸುವೇಂದು ಅವರು ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದರು. ಒಬ್ಬರೇ ವ್ಯಕ್ತಿ ಎರಡು ಕ್ಷೇತ್ರಗಳ ಶಾಸಕರಾಗಿರಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲದ ಕಾರಣ, ಸುವೇಂದು ಅವರು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಅಕ್ಟೋಬರ್ 6 ರಂದು ನಂದಿಗ್ರಾಮದಲ್ಲಿ ಉಪಚುನಾವಣೆ ನಡೆಸುವುದು ಅನಿವಾರ್ಯವಾಯಿತು.
ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್‌ನ ಹೆಸರು ಮತ್ತು ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡ (ಫ್ರೀಜ್ ಮಾಡಿದ) ಬೆನ್ನಲ್ಲೇ ಮಮತಾಗೆ ಈ ಹೊಸ ಹಿನ್ನಡೆ ಎದುರಾಗಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ಬಣವಾಗಲಿ ಅಥವಾ ರಿತಬ್ರತ ಬ್ಯಾನರ್ಜಿ ಬಣವಾಗಲಿ ಈ ಉಪಚುನಾವಣೆಯಲ್ಲಿ ಆ ಪಕ್ಷದ ಚಿಹ್ನೆಯನ್ನು ಬಳಸಲು ಸಾಧ್ಯವಿಲ್ಲ.
ನಾಮಪತ್ರ ವಾಪಸ್ ಪಡೆದಿದ್ದ ಸಂಚಿತಾ ಪ್ರಧಾನ್
ನಂದಿಗ್ರಾಮ ಉಪಚುನಾವಣೆಗೆ ದೀದಿ ಬಣದ ಅಭ್ಯರ್ಥಿಯಾಗಿದ್ದ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ನಬನ್ನಾದಲ್ಲಿರುವ ರಾಜ್ಯ ಸಚಿವಾಲಯದಲ್ಲಿ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಉಪಚುನಾವಣೆಯ ಕಣದಿಂದ ಹಿಂದೆ ಸರಿದಿರುವ ವಿಷಯವಾಗಿ ಡೇ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ, ಆದರೆ ಅವರ ಈ ನಡೆ ನಂದಿಗ್ರಾಮದಲ್ಲಿ ಆಡಳಿತಾರೂಢ ಬಿಜೆಪಿ ಅನುಕೂಲವಾಗಲಿದ್ದು, ಇದನ್ನು ಸಿಎಂ ಅಧಿಕಾರಿ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಡೇ ಅವರ ಈ ಅಚ್ಚರಿಯ ನಿರ್ಧಾರದ ಹೊರತಾಗಿಯೂ, ನಂದಿಗ್ರಾಮದ ಸ್ಪರ್ಧೆಯು ಬಹುಮುಖಿ ಕಣವಾಗಿಯೇ ಉಳಿದಿದೆ, ಏಕೆಂದರೆ ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣವು ಮೊಹಮ್ಮದ್ ಎತೆಶಮುಲ್ ಹಕ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದ್ದರೆ, ಸಿಪಿಐ ಶಾಂತಿ ಗೋಪಾಲ್ ಗಿರಿಗೆ ಟಿಕೆಟ್ ನೀಡಿದೆ. ಅದೇ ರೀತಿ ಕಾಂಗ್ರೆಸ್ ಮಿಲನ್ ಪ್ರಧಾನ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಹಸಿರಾಣಿ ರಥ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ(ಏಜೆನ್ಸೀಸ್).