ನವದೆಹಲಿ: 94 ಲಕ್ಷ ಮೌಲ್ಯದ ದುಬಾರಿ ಕೈಗಡಿಯಾರವನ್ನು ಧರಿಸಿದ ಹಿನ್ನಲೆ ದುಬೈನಿಂದ ಸ್ಪೈಸ್ಜೆಟ್ ವಿಮಾನವನ್ನೇರಿ ಭಾರತಕ್ಕೆ ಬಂದಿದ್ದ ವ್ಯಕ್ತಿಯನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.
ಈ ಘಟನೆ ನವೆಂಬರ್ 11 ರಂದು ನಡೆದಿದೆ ಎಂದು ಹೇಳಲಾಗುತ್ತಿದ್ದು, ದುಬೈನಿಂದ ಬಂದಿಳಿದಿದ್ದ ಪ್ರಯಾಣಿಕನೊಬ್ಬನ ಬಳಿ ಸುಮಾರು 94 ಲಕ್ಷ ಮೌಲ್ಯದ ಪಾಟೆಕ್ ಫಿಲಿಪ್ (Patek Philippe) ಕೈ ಗಡಿಯಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ವಾಚ್ ಮತ್ತು ವ್ಯಕ್ತಿಯ ಬಂಧನದ ಬಗ್ಗೆ ದೆಹಲಿ ಕಸ್ಟಮ್ಸ್ ಇಲಾಖೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ದುಬೈನಿಂದ ಸ್ಪೈಸ್ಜೆಟ್ SG5106 ವಿಮಾನವನ್ನೇರಿ ಬಂದಿದ್ದ ಪ್ರಯಾಣಿಕ ದೆಹಲಿಯ ಇಂದಿರಾಗಾಂಧಿ ಏರ್ಪೋರ್ಟ್ನ ಮೂರನೇ ನಂಬರ್ ಟರ್ಮಿನಲ್ ಮೂಲಕ ನಿರ್ಗಮಿಸುತ್ತಿದ್ದ. ಆ ಸಂದರ್ಭದಲ್ಲಿ ಅವನ ಮೇಲೆ ಮೆಟಲ್ ಡಿಟೆಕ್ಟರ್ಅನ್ನು ಪ್ರಯೋಗಿಸಿದಾಗ ಎಚ್ಚರಿಕೆಯ ಶಬ್ದ ಬಂದಿದೆ.
ನಂತರ ಅವನ ಬಳಿಯಿಂದ ಲೋಹದ ವಸ್ತುಗಳನ್ನು ಪರಿಶೀಲಿಸಲು ಮುಂದಾದಾಗ ಈ ಪಾಟೆಕ್ ಫಿಲಿಪ್ ವಾಚ್ ಪತ್ತೆಯಾಗಿದೆ. ನಂತರ ಕಸ್ಟಮ್ ಸಿಬ್ಬಂದಿಗಳು ಈ ಕೈಗಡಿಯಾರ ಒರಿಜಿನಲ್ ಅಥವಾ ಡುಪ್ಲಿಕೇಟ್ ಎಂದು ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆ ನಂತರ ಈ ಗಡಿಯಾರ ಪಕ್ಕಾ ಒರಿಜಿನಲ್ ಎಂದು ತಿಳಿದುಬಂದಿದ್ದು, ಇದರ ಅಂದಾಜು ಮೌಲ್ಯ 94 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಮೇಲೆ ಈ ವಾಚ್ ಮತ್ತು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಏರ್ಪೋರ್ಟ್ ಹಾಗೂ ದೆಹಲಿ ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 1962 ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110ರ ಅಡಿಯಲ್ಲಿ ಆ ಐಷಾರಾಮಿ ಕೈಗಡಿಯಾರವನ್ನು ಮತ್ತು ಅದೇ ಕಾಯಿದೆಯ ಸೆಕ್ಷನ್ 104 ರ ಅಡಿಯಲ್ಲಿ ಪ್ರಯಾಣಿಕನನ್ನೂ ಬಂಧಿಸಲಾಗಿದೆ ಎಂದಿದ್ದಾರೆ. ಇನ್ನೂ ಈ ಪ್ರಕರಣ ವಿಚಾರಣಾ ಹಂತದಲ್ಲಿರುವ ಕಾರಣ ಬಂಧಿತನ ಹೆಸರು ಮತ್ತು ವಿವಿರಗಳನ್ನು ಬಹಿರಂಗ ಪಡಿಸಿಲ್ಲ.
ವಿಶ್ವದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ವಾಚ್ ಬ್ರ್ಯಾಂಡ್ಗಳಲ್ಲಿ ಒಂದಾದ ‘ಪಾಟೆಕ್ ಫಿಲಿಪ್’ (Patek Philippe) ವಾಚ್ಗಳು ಕೋಟ್ಯಂತರ ರೂಪಾಯಿ ಬೆಲೆಬಾಳಲು ಅವುಗಳ ಅಸಾಧಾರಣ ಕರಕುಶಲತೆ ಮತ್ತು ಅಪರೂಪತೆಯೇ ಪ್ರಮುಖ ಕಾರಣವಾಗಿದೆ.
ಈ ಸ್ವಿಸ್ ವಾಚ್ಗಳನ್ನು ಯಂತ್ರಗಳಿಗಿಂತ ಹೆಚ್ಚಾಗಿ ನುರಿತ ಕುಶಲಕರ್ಮಿಗಳು ಕೈಯಿಂದಲೇ ಅತ್ಯಂತ ಸೂಕ್ಷ್ಮವಾಗಿ ಜೋಡಿಸುತ್ತಾರೆ. ಒಂದು ಸಂಕೀರ್ಣ ವಾಚ್ ಸಿದ್ಧಪಡಿಸಲು ತಿಂಗಳುಗಳಿಂದ ಹಿಡಿದು ಹಲವು ವರ್ಷಗಳೇ ಬೇಕಾಗುತ್ತವೆ. ಇವುಗಳ ತಯಾರಿಕೆಯಲ್ಲಿ 18 ಕ್ಯಾರೆಟ್ ಚಿನ್ನ, ಪ್ಲಾಟಿನಂ ಮತ್ತು ಅಪರೂಪದ ರತ್ನಗಳನ್ನು ಬಳಸಲಾಗುತ್ತದೆ ಹೀಗಾಗಿ ಇದರ ಬೆಲೆ ಗಗನವನ್ನು ತಲುಪುತ್ತದೆ.
ಅಲ್ಲದೆ, ಕಂಪನಿಯು ವಾರ್ಷಿಕವಾಗಿ ಅತ್ಯಂತ ಸೀಮಿತ ಸಂಖ್ಯೆಯ ವಾಚ್ಗಳನ್ನು ಮಾತ್ರ ಉತ್ಪಾದಿಸುವುದರಿಂದ, ಮಾರುಕಟ್ಟೆಯಲ್ಲಿ ಇವುಗಳಿಗೆ ಭಾರಿ ಬೇಡಿಕೆಯಿದೆ. ಶಾಶ್ವತ ಕ್ಯಾಲೆಂಡರ್, ಚಂದ್ರನ ಚಲನೆ ಮುಂತಾದ ಅತಿ ಸಂಕೀರ್ಣ ಯಾಂತ್ರಿಕ ವಿನ್ಯಾಸಗಳನ್ನು ಒಳಗೊಂಡಿರುವ ಈ ವಾಚ್ಗಳು ಕಾಲಾನಂತರದಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಹೀಗಾಗಿ ಇವುಗಳನ್ನು ಕೇವಲ ಸಮಯ ತೋರಿಸುವ ಸಾಧನವಾಗಿ ನೋಡದೆ, ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವ ಅಮೂಲ್ಯ ಆಸ್ತಿ ಮತ್ತು ಅತ್ಯುತ್ತಮ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ, (ಏಜೆನ್ಸೀಸ್).