ನಾವು ಎಲ್ಲರೊಂದಿಗೆ ಸೇರಿ ಕೆಲಸ ಮಾಡುತ್ತೇವೆ! ಇನ್ಮೇಲೆ ರಾಜ್ಯದಲ್ಲಿ ಕೇವಲ ಕಾನೂನಿನ ಆಡಳಿತ ಮಾತ್ರ: ಬಂಗಾಳದಲ್ಲಿ ರಾಜಕೀಯ ದ್ವೇಷಕ್ಕೆ ಸಿಎಂ ಸುವೇಂದು ಅಧಿಕಾರಿ ಬ್ರೇಕ್!  
ದೇಶ

ನಾವು ಎಲ್ಲರೊಂದಿಗೆ ಸೇರಿ ಕೆಲಸ ಮಾಡುತ್ತೇವೆ! ಇನ್ಮೇಲೆ ರಾಜ್ಯದಲ್ಲಿ ಕೇವಲ ಕಾನೂನಿನ ಆಡಳಿತ ಮಾತ್ರ: ಬಂಗಾಳದಲ್ಲಿ ರಾಜಕೀಯ ದ್ವೇಷಕ್ಕೆ ಸಿಎಂ ಸುವೇಂದು ಅಧಿಕಾರಿ ಬ್ರೇಕ್! Suvendu Adhikari

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯದ ರಾಜಕೀಯ ಮತ್ತು ಆಡಳಿತ ಚರಿತ್ರೆಯಲ್ಲೇ ಅತ್ಯಂತ ಕ್ರಾಂತಿಕಾರಿ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ದ್ವೇಷ ಕೇವಲ ಚುನಾವಣೆ ಮುಗಿಯುವವರೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆ ಮುಗಿದ ಮೇಲೆ ಇಡೀ ವರ್ಷ ಆಡಳಿತ ಯಂತ್ರ ಮತ್ತು ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳ ನಡುವೆ ಸೂಕ್ತ ಸಮನ್ವಯ ಇರಬೇಕು. ಬಂಗಾಳದಲ್ಲಿ ಇನ್ಮೇಲೆ ಯಾವುದೇ ಆಡಳಿತ ಪಕ್ಷದ ದರ್ಪದ ಕಾನೂನು ನಡೆಯುವುದಿಲ್ಲ, ಬದಲಿಗೆ ಕೇವಲ ದೇಶದ ಸಂವಿಧಾನ ಮತ್ತು ಕಾನೂನಿನ ಆಡಳಿತ ಮಾತ್ರ ನಡೆಯಲಿದೆ ಎಂದು ಸಿಎಂ ಸುವೇಂದು ಅಧಿಕಾರಿ(Suvendu Adhikari) ಘೋಷಿಸಿದ್ದಾರೆ.
ಈ ಬಗ್ಗೆ ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ಮಂಗಳವಾರ ನಡೆದ ಹೂಗ್ಲಿ, ಉತ್ತರ 24 ಪರಗಣ ಮತ್ತು ನಾಡಿಯಾ ಜಿಲ್ಲೆಗಳ ಹೈ-ಲೆವೆಲ್ ಜಂಟಿ ಆಡಳಿತಾತ್ಮಕ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಮಹತ್ವದ ಸಂದೇಶ ನೀಡಿದ್ದಾರೆ.

ಮಮತಾ ಹಳೇ ನೀತಿಗೆ ಸುವೇಂದು ಕೌಂಟರ್!

ಕಳೆದ ಐದು ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಆಡಳಿತಾವಧಿಯಲ್ಲಿ ವಿರೋಧ ಪಕ್ಷದ ಶಾಸಕರಿಗೆ ಮತ್ತು ಸಂಸದರಿಗೆ ಜಿಲ್ಲಾ ಮಟ್ಟದ ಯಾವುದೇ ಸರ್ಕಾರಿ ಸಭೆಗಳಿಗೆ ಆಹ್ವಾನ ನೀಡಲಾಗುತ್ತಿರಲಿಲ್ಲ. ಎಡಪಕ್ಷಗಳು, ಕಾಂಗ್ರೆಸ್ ಹಾಗೂ ಬಿಜೆಪಿಯ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಉನ್ನತ ಮಟ್ಟಕ್ಕೆ ತಲುಪಿಸಲು ಜಾಗವೇ ಇರಲಿಲ್ಲ. ಇದನ್ನು ಬಲವಾಗಿ ನೆನೆಸಿದ ಸುವೇಂದು ಅಧಿಕಾರಿ, ಕಳೆದ ಐದು ವರ್ಷಗಳಲ್ಲಿ ನಮ್ಮ ಶಾಸಕರು ಕರೆ ಮಾಡಿದರೆ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ಗಳು (BDO) ಮತ್ತು ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗಳು (OC) ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಈ ವ್ಯವಸ್ಥೆಯನ್ನು ನಾವು ಈಗ ಸಂಪೂರ್ಣವಾಗಿ ಬದಲಾಯಿಸಿದ್ದೇವೆ. ಕೇಂದ್ರ ಮತ್ತು ರಾಜ್ಯದ ಈ ಡಬಲ್ ಇಂಜಿನ್ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭವೂ ತಾರತಮ್ಯವಿಲ್ಲದೆ ಬಂಗಾಳದ ಕಟ್ಟಕಡೆಯ ಪ್ರಜೆಗೂ ತಲುಪಬೇಕು ಎಂದಿದ್ದಾರೆ.

ಬಿಜೆಪಿ ಸಭೆಯಲ್ಲಿ ಟಿಎಂಸಿ ಸಂಸದೆ ಭಾಗಿ!; ಮಹುವಾ ಮೊಯಿತ್ರಾಗೆ ಇಲ್ಲ ಆಹ್ವಾನ!

ಹೂಗ್ಲಿ, ಉತ್ತರ 24 ಪರಗಣ ಮತ್ತು ನಾಡಿಯಾ ಜಿಲ್ಲೆಗಳ ಒಟ್ಟು 68 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳು ತೃಣಮೂಲ ಕಾಂಗ್ರೆಸ್ ವಶದಲ್ಲಿವೆ. ಮುಖ್ಯಮಂತ್ರಿಗಳ ಈ ಹೊಸ ಸಮನ್ವಯ ನೀತಿಯ ಭಾಗವಾಗಿ, ಟಿಎಂಸಿಯ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಉತ್ತರ 24 ಪರಗಣ ಜಿಲ್ಲೆಯ ಆರು ಮಂದಿ ಟಿಎಂಸಿ ಶಾಸಕರು ಈ ಬಿಜೆಪಿ ಸರ್ಕಾರದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಆದರೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುವ ಕೃಷ್ಣನಗರದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಮಾತ್ರ ಈ ಸಭೆಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ಉತ್ತರಿಸಿದ ಸಿಎಂ, ಯಾವ ಜನಪ್ರತಿನಿಧಿಗಳು ಕೇವಲ ರಾಜಕೀಯ ಮಾಡದೆ, ಸಾರ್ವಜನಿಕರ ಕೆಲಸಕ್ಕಾಗಿ ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಸಕ್ತಿ ತೋರಿಸುತ್ತಾರೋ ಅಂಥವರನ್ನು ಮಾತ್ರ ಆಯ್ದು ಸಭೆಗಳಿಗೆ ಕರೆಯಲಾಗುವುದು. ಬಾರಾಸತ್ ಸಂಸದೆಯ ಮಾತುಗಳನ್ನು ನಾನು ಕೇಳಿ ಅವರಿಗೆ ಆಹ್ವಾನ ನೀಡಲು ಸೂಚಿಸಿದ್ದೆ, ಅವರು ಇಂದು ಸಭೆಗೆ ಬಂದಿದ್ದಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಜೂನ್ 15 ರಿಂದ ಬೃಹತ್ ಕಲ್ಯಾಣ ಶಿಬಿರಗಳು; ಇಂದಿನಿಂದಲೇ ಅನ್ನಪೂರ್ಣ ಭಂಡಾರ ಅರ್ಜಿ ವಿತರಣೆ!

ಇದೇ ವೇಳೆ ಬಂಗಾಳದ ಜನತೆಗೆ ಮತ್ತೊಂದು ಪ್ರಮುಖ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿಗಳು, ಬರುವ ಜೂನ್ 15 ರಿಂದ ಜೂನ್ 17 ರವರೆಗೆ ರಾಜ್ಯಾದ್ಯಂತ ಬೃಹತ್ ಕಲ್ಯಾಣ ಶಿಬಿರಗಳನ್ನು ಆಯೋಜಿಸಲಾಗುವುದು. ಈ ಶಿಬಿರಗಳ ಮೂಲಕ ಸರ್ಕಾರದ ಹಳೆಯ ಮತ್ತು ಹೊಸ ಯೋಜನೆಗಳ ಹಣಕಾಸು ನೆರವನ್ನು ನೇರವಾಗಿ ಜನರಿಗೆ ತಲುಪಿಸಲಾಗುವುದು ಎಂದಿದ್ದಾರೆ. ಇದರೊಂದಿಗೆ ಮಹಿಳೆಯರಿಗೆ ಮಾಸಿಕ ನೆರವು ನೀಡುವ ಬಹುನಿರೀಕ್ಷಿತ ‘ಅನ್ನಪೂರ್ಣ ಭಂಡಾರ’ ಯೋಜನೆಯ ಅರ್ಜಿ ನಮೂನೆಗಳ ವಿತರಣೆಯು ಬುಧವಾರದಿಂದಲೇ ಆರಂಭವಾಗಲಿದ್ದು, ಸಾರ್ವಜನಿಕರು ತಕ್ಷಣವೇ ಅರ್ಜಿಗಳನ್ನು ಅಪ್‌ಲೋಡ್ ಮಾಡಿ ಯೋಜನೆಯ ಲಾಭ ಪಡೆಯಬೇಕು ಎಂದು ಸಿಎಂ ಸುವೇಂದು ಕರೆ ನೀಡಿದ್ದಾರೆ.
ವಿರೋಧ ಪಕ್ಷಗಳನ್ನು ದ್ವೇಷಿಸುವ ಹಳೆಯ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು, ಎಲ್ಲರನ್ನೂ ಒಳಗೊಳ್ಳುವ ಮೂಲಕ ಹೊಸ ಮಾದರಿಯ ಆಡಳಿತ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಈ ಹೆಜ್ಜೆ ಪಶ್ಚಿಮ ಬಂಗಾಳದ ರಾಜಕೀಯ ದಿಕ್ಸೂಚಿಯನ್ನೇ ಬದಲಾಯಿಸುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್​).