ಪ್ರಧಾನಿ ಮೋದಿ ಮತ್ತು ಅಖಿಲೇಶ್ ಯಾದವ್
ಲಖನೌ: ಕಳೆದ ವಾರ ಲೋಕಸಭೆಯಲ್ಲಿ ಮಾತನಾಡುತ್ತಾ ಅಖಿಲೇಶ್ ಜೀ ನಮ್ಮ ಸ್ನೇಹಿತ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ತಿರಸ್ಕರಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್(Akhilesh Yadav), ಅವರಂತಹ ಸ್ನೇಹಿತರು ನಮಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ ಮಸೂದೆಯ ಕುರಿತು ಪ್ರಧಾನಿ ಮೋದಿ ಮಾತನಾಡುವ ವೇಳೆ, ಅಖಿಲೇಶ್ ಜಿ ನನ್ನ ಸ್ನೇಹಿತ, ಆದ್ದರಿಂದ ಅವರು ಕೆಲವೊಮ್ಮೆ ನನಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದರು.
ಈ ಕುರಿತು ಲಖನೌದ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಇದು ಬಹಳ ಮುಖ್ಯವಾದ ಪ್ರಶ್ನೆ, ಅಂದು ನಮ್ಮ ಸದನದಲ್ಲಿ ನಮ್ಮ ಮೈಕ್ ಅನ್ನು ಆಫ್ ಮಾಡಲಾಯಿತು. ನಮಗೆ ಅಂತಹ ಸ್ನೇಹಿತರು ಅಗತ್ಯವಿಲ್ಲ ಎಂದು ನಾವು ಹೇಳಿದ್ದೇವೆ. ನಾನು ಏನು ಸಹಾಯ ಮಾಡಿದ್ದೇನೆ ಎಂದು ನೀವು ಅವರನ್ನೇ ಕೇಳಿದ್ರೆ ಮಾತ್ರ ಉತ್ತರಿಸಬಹುದು. ನನಗೆ ಗೊತ್ತಿರುವ ಪ್ರಕಾರ ಅಂತಹ ಯಾವುದೇ ವಿಷಯ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಸಂಸತ್ನಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಸೋಲನ್ನು, ಐತಿಹಾಸಿಕ ಪ್ರಜಾಪ್ರಭುತ್ವದ ಗೆಲುವು ಎಂದು ಕರೆದ ಅವರು, ಇಂಡಿಯಾ ಮೈತ್ರಿಕೂಟದ ಜನರಿಗೆ ಮತ್ತು ಎಲ್ಲಾ ನಾಯಕರಿಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಇದು ಕೇವಲ ಪ್ರಜಾಸತ್ತಾತ್ಮಕ ವಿಜಯವಲ್ಲ, ಬದಲಾಗಿ ಬಿಜೆಪಿಯ ಸೋಲು ಕೂಡ ಎಂದು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಮಹಿಳಾ ಮೀಸಲಾತಿ ಕುರಿತ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಅಖಿಲೇಶ್, ಸದನದ ಒಳಗೆ ಮತ್ತು ಹೊರಗೆ ಸಮಾಜವಾದಿಗಳು ಯಾವಾಗಲೂ ಮಹಿಳೆಯರಿಗೆ ಮೀಸಲಾತಿಯನ್ನು ಬೆಂಬಲಿಸಿದ್ದಾರೆ. ಯಾರಾದರೂ ಮೀಸಲಾತಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಅದು ಬಿಜೆಪಿ. ಅವರ ಉದ್ದೇಶಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).