ಮಗು ಅವ್ಯಾನ್ ಮತ್ತು ಮಗುವಿನ ಅಜ್ಜಿ
- ಹತ್ತು ವರ್ಷಗಳ ನಂತರ ಸಂತೋಷ ಕೊಟ್ಟ ದೇವರು ಅದನ್ನು ಅಷ್ಟೇ ಬೇಗ ಕಸಿದುಕೊಂಡು ಬಿಟ್ಟ
- ಇದು ಇಂದೋರ್‌ನ ಹಿರಿಯ ಮಹಿಳೆಯೊಬ್ಬರು ಕಣೀರಾಕುತ್ತಾ ಆಡಿದ ನೋವಿನ ಮಾತುಗಳು
- ಅದೇ ನೀರು ಇದೀಗ ವಿಷವಾಗಿ ಐದೂವರೆ ತಿಂಗಳ ಮಗು ಅವ್ಯಾನ್ ಪ್ರಾಣವನ್ನು ಕಸಿದುಕೊಂಡಿದೆ
ಇಂದೋರ್: ಹತ್ತು ವರ್ಷಗಳ ನಂತರ ನಮ್ಮ ಕುಟುಂಬಕ್ಕೆ ಸಂತೋಷ ಕೊಟ್ಟ ದೇವರು ಅದನ್ನು ಅಷ್ಟೇ ಬೇಗ ಕಸಿದುಕೊಂಡು ಬಿಟ್ಟ... ಇದು ಮಧ್ಯಪ್ರದೇಶದ ಇಂದೋರ್‌ನ ( Indore Family ) ಭಾಗೀರಥಪುರದ ಹಿರಿಯ ಮಹಿಳೆಯೊಬ್ಬರು ಕಣೀರಾಕುತ್ತಾ ಆಡಿದ ನೋವಿನ ಮಾತುಗಳು.
ಇಡೀ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಅದೇ ಮನೆಯ ಒಂದು ಮೂಲೆಯಲ್ಲಿ ಎಂದಿಗೂ ಎದೆಹಾಲು ಬಾರದಂತಹ ತಾಯಿ ದುಃಖಿಸುತ್ತಾ ಕುಳಿತಿದ್ದರು. ಆಕೆಗೆ ಎದೆಹಾಲು ಬಾರದಿರಲು ಅನಾರೋಗ್ಯ ಕಾರಣವಲ್ಲ, ಅದೊಂದು ಜೈವಿಕ ಸ್ಥಿತಿ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಮಗುವಿಗೆ ಪ್ಯಾಕೆಟ್ ಹಾಲಿಗೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಕುಡಿಸುತ್ತಿದ್ದರು. ನಲ್ಲಿಯಲ್ಲಿ ಬರುತ್ತಿದ್ದ ನೀರು ಇಡೀ ಕುಟುಂಬಕ್ಕೆ ಆಧಾರವಾಗಿತ್ತು. ಆ ನೀರಿನ ಮೇಲೆ ಎಲ್ಲರೂ ನಂಬಿಕೆ ಇಟ್ಟಿದ್ದರು. ಆದರೆ, ಅದೇ ನೀರು ಇದೀಗ ವಿಷವಾಗಿ ಐದೂವರೆ ತಿಂಗಳ ಮಗು ಅವ್ಯಾನ್ ಪ್ರಾಣವನ್ನು ಕಸಿದುಕೊಂಡಿದೆ.
ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ ಹಲವಾರು ಜನರು ಮೃತಪಟ್ಟಿದ್ದಾರೆ. ಮೃತ ಅವ್ಯಾನ್ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಮದುವೆಯಾಗಿ ಹೆಣ್ಣು ಮಗು ಹುಟ್ಟಿದ ಬಳಿಕ ಅನೇಕ ವರ್ಷಗಳವರೆಗೆ ಮತ್ತೊಂದು ಮಗು ಆಗಿರಲಿಲ್ಲ. ಹೀಗಾಗಿ ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡಿ, ಹರಕೆ ಕಟ್ಟಿಕೊಂಡಿದ್ದರು. ಬಲವಾದ ನಂಬಿಕೆಯೊಂದಿಗೆ ಮತ್ತೊಂದು ಮಗುವಿಗಾಗಿ ಎದುರು ನೋಡುತ್ತಿದ್ದರು. ಅಂತಿಮವಾಗಿ ಕಳೆದ ಜುಲೈ 8 ರಂದು ಗಂಡು ಮಗು ಜನಿಸಿತು. ಅವರ ಮಗಳು ಕಿಂಜಾಲ್ ಜನಿಸಿದ ಹತ್ತು ವರ್ಷಗಳ ನಂತರ ಅವ್ಯಾನ್ ಜನಿಸಿದ.
ಮಗು ಅವ್ಯಾನ್ ಆರೋಗ್ಯವಾಗಿತ್ತು. ಯಾವುದೇ ಅನಾರೋಗ್ಯವಿರಲಿಲ್ಲ. ಆದರೆ, ಎರಡು ದಿನಗಳ ಹಿಂದೆ ಅವ್ಯಾನ್‌ಗೆ ಜ್ವರ ಮತ್ತು ಅತಿಸಾರ ಕಾಣಿಸಿಕೊಂಡಿತು. ಆತನನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು ಮತ್ತು ಔಷಧಿಗಳನ್ನು ಕೊಡಿಸಲಾಯಿತು. ಆದರೆ, ಆತನ ಸ್ಥಿತಿ ಮಾತ್ರ ಹದಗೆಡುತ್ತಲೇ ಇತ್ತು. ಭಾನುವಾರ ರಾತ್ರಿ ತೀವ್ರ ಅಸ್ವಸ್ಥನಾಗಿದ್ದನು. ಹೀಗಾಗಿ, ಸೋಮವಾರ ಬೆಳಗ್ಗೆ ಅವ್ಯಾನ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಆತ ಕೊನೆಯುಸಿರೆಳೆದನು.
ಮಗುವಿನ ಅನಾರೋಗ್ಯಕ್ಕೆ ನೀರೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ನಾವು ಹಾಲಿಗೆ ಬೆರೆಸಿದ ನೀರು ಅವ್ಯಾನ್‌ಗೆ ಹಾನಿ ಮಾಡಿದೆ ಎಂದು ತಂದೆ ಸುನಿಲ್ ಹೇಳಿದ್ದಾರೆ. ನನ್ನ ಹೆಂಡತಿಗೆ ಎದೆಹಾಲು ಬರುವುದಿಲ್ಲ. ಆದ್ದರಿಂದ ವೈದ್ಯರು ಸಲಹೆ ನೀಡಿದಂತೆ ನಾವು ಪ್ಯಾಕೆಟ್ ಹಾಲಿಗೆ ನೀರನ್ನು ಮಿಕ್ಸ್ ಮಾಡಿ ಕುಡಿಸುತ್ತಿದ್ದೆವು. ನಾವು ನರ್ಮದಾ ಟ್ಯಾಪ್ ನೀರನ್ನು ಬಳಸಿದ್ದೇವೆ. ಅದು ಈ ಮಟ್ಟದಲ್ಲಿ ಕಲುಷಿತವಾಗಿದೆ ಎಂದು ನಾವೆಂದಿಗೂ ಊಹಿಸಿರಲಿಲ್ಲ. ಮಗುವಿಗೆ ಎರಡು ದಿನಗಳ ಕಾಲ ಅತಿಸಾರವಿತ್ತು. ನಾವು ಆತನಿಗೆ ಔಷಧಿ ಕೊಟ್ಟೆವು. ನಂತರ ಇದ್ದಕ್ಕಿದ್ದಂತೆ ಅವ್ಯಾನ್ ಕುಸಿದು ಬಿದ್ದನು. ಆನಂತರವೇ ಇಲ್ಲಿನ ಜನರು ನಮಗೆ ಸತ್ಯ ಹೇಳಿದರು ಎಂದು ಸುನೀಲ್ ಹೇಳಿದ್ದಾರೆ.
ನಾವು ಬಡವರು. ನಮ್ಮ ಮಗನಿಗೆ ಖಾಸಗಿ ಕೆಲಸವಿದೆ. ಆ ಕೆಲಸವೇ ನಮ್ಮ ಮನೆಯನ್ನು ನಡೆಸುತ್ತದೆ. ಇಲ್ಲಿ ನಾವು ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ದೇವರು ನಮಗೆ ಸಂತೋಷವನ್ನು ಕೊಟ್ಟು, ಅದನ್ನು ಕಸಿದುಕೊಂಡನು ಎಂದು ಸುನೀಲ್ ಅವರ ತಾಯಿ ಕಣ್ಣೀರಾಕುತ್ತಾ ನೋವಿನಿಂದ ಹೇಳಿದರು, (ಏಜೆನ್ಸೀಸ್).