ನಡುರಸ್ತೆಯಲ್ಲೇ ತನ್ನ ಬೈಕ್‌ಗೆ ಬೆಂಕಿ ಹಚ್ಚಿ ಮಲಗಿದ ಭೂಪ 
ದೇಶ

ನಡುರಸ್ತೆಯಲ್ಲೇ ತನ್ನ ಬೈಕ್‌ಗೆ ಬೆಂಕಿ ಹಚ್ಚಿ ಮಲಗಿದ ಭೂಪ: ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಕಂಗಾಲು..! Lies On Road

ಗುರುವಾರ ರಾತ್ರಿ ಸುಮಾರು 8.57ರ ವೇಳೆಗೆ ವ್ಯಕ್ತಿಯೊಬ್ಬ ವಿಪರೀತ ಮದ್ಯ ಸೇವಿಸಿ ದತ್ತನಗರ ಫಾಟಾ ಮುಖ್ಯ ರಸ್ತೆಯಲ್ಲಿ ತನ್ನ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿದ್ದಾನೆ. ನೋಡನೋಡುತ್ತಿದ್ದಂತೆಯೇ ಬೈಕ್ ಧಗಧಗನೆ ಹೊತ್ತಿ ಉರಿಯಲಾರಂಭಿಸಿದ್ದು, ಆತ ಸ್ವಲ್ಪವೂ ಭಯವಿಲ್ಲದೆ ನಡುರಸ್ತೆಯಲ್ಲೇ ಅಡ್ಡಲಾಗಿ ಮಲಗಿಕೊಂಡಿದ್ದಾನೆ.

ಮುಂಬೈ: ಮದ್ಯದ ಅಮಲು ನೆತ್ತಿಗೇರಿದಾಗ ಮನುಷ್ಯ ಏನು ಮಾಡುತ್ತಾನೆ ಎಂಬುದಕ್ಕೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ವಿಚಿತ್ರ ಘಟನೆಯೊಂದು ಸಾಕ್ಷಿಯಾಗಿದೆ. ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ತನ್ನದೇ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೆ, ಅದರ ಪಕ್ಕದಲ್ಲೇ ರಸ್ತೆಯಲ್ಲಿ ಮಲಗಿ ( Lies On Road ) ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಗುರುವಾರ ರಾತ್ರಿ ವಾಲುಜ್ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ಪ್ರದೇಶದ ರಂಜನ್‌ಗಾಂವ್ ಶೆಣಪುಂಜಿಯ ದತ್ತನಗರ ಫಾಟಾದಲ್ಲಿ ಈ ಘಟನೆ ನಡೆದಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ವಿವರಕ್ಕೆ ಬರುವುದಾದರೆ, ಗುರುವಾರ ರಾತ್ರಿ ಸುಮಾರು 8.57ರ ವೇಳೆಗೆ ವ್ಯಕ್ತಿಯೊಬ್ಬ ವಿಪರೀತ ಮದ್ಯ ಸೇವಿಸಿ ದತ್ತನಗರ ಫಾಟಾ ಮುಖ್ಯ ರಸ್ತೆಯಲ್ಲಿ ತನ್ನ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿದ್ದಾನೆ. ನೋಡನೋಡುತ್ತಿದ್ದಂತೆಯೇ ಬೈಕ್ ಧಗಧಗನೆ ಹೊತ್ತಿ ಉರಿಯಲಾರಂಭಿಸಿದ್ದು, ಆತ ಸ್ವಲ್ಪವೂ ಭಯವಿಲ್ಲದೆ ನಡುರಸ್ತೆಯಲ್ಲೇ ಅಡ್ಡಲಾಗಿ ಮಲಗಿಕೊಂಡಿದ್ದಾನೆ. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಈ ದೃಶ್ಯ ಕಂಡು ಬೆಚ್ಚಿಬಿದ್ದ ಸ್ಥಳೀಯರು ತಕ್ಷಣವೇ ತುರ್ತು ಸಹಾಯವಾಣಿ 'ಡಯಲ್ 112'ಗೆ (Dial 112) ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತುರ್ತು ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ವಾಲುಜ್ ಎಂಐಡಿಸಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ದೈನ್‌ಸಿಂಗ್ ಜೋನ್ವಾಲ್, ಕಸ್ಬೆವಾಡ್ ಮತ್ತು ಘುಗೆ ಅವರು ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕೆ ದೌಡಾಯಿಸಿದರು. ರಸ್ತೆಯಲ್ಲಿ ಉರಿಯುತ್ತಿದ್ದ ಬೈಕ್‌ನ ಪಕ್ಕದಲ್ಲೇ ಮಲಗಿದ್ದ ವ್ಯಕ್ತಿಗೆ ಯಾವುದೇ ಪ್ರಾಣಾಪಾಯವಾಗದಂತೆ ಪೊಲೀಸರು ಮೊದಲು ಆತನನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತಂದರು. ಬಳಿಕ ಸ್ಥಳೀಯರ ನೆರವಿನೊಂದಿಗೆ ಉರಿಯುತ್ತಿದ್ದ ದ್ವಿಚಕ್ರ ವಾಹನದ ಬೆಂಕಿಯನ್ನು ನಂದಿಸಿ, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.

ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸಿದರಾದರೂ, ಆತ ಎಷ್ಟರಮಟ್ಟಿಗೆ ಮದ್ಯ ಸೇವಿಸಿದ್ದನೆಂದರೆ ಸರಿಯಾಗಿ ಮಾತನಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದನು. ಹೀಗಾಗಿ, ಆತ ತನ್ನದೇ ಸ್ವಂತ ವಾಹನಕ್ಕೆ ಏಕೆ ಬೆಂಕಿ ಹಚ್ಚಿಕೊಂಡ ಎಂಬ ನಿಖರ ಕಾರಣವನ್ನು ತಕ್ಷಣಕ್ಕೆ ತಿಳಿದುಕೊಳ್ಳಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಈ ಕುಡುಕನ ಹುಚ್ಚಾಟದಿಂದಾಗಿ ದತ್ತನಗರ ಫಾಟಾ ಪ್ರದೇಶದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡುವಂತಾಯಿತು. ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿದ ವಾಲುಜ್ ಎಂಐಡಿಸಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು, ಸುಟ್ಟು ಕರಕಲಾದ ಬೈಕ್ ಅನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸದ್ಯ ಈ ವಿಚಿತ್ರ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, (ಏಜೆನ್ಸೀಸ್).