ಲಖನೌ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಭಾರತ ರತ್ನ ಶೆಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರ ಮನೆಯ ಒಂದು ಭಾಗವನ್ನು ಧ್ವಂಸ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಆದರೆ ವಾರಾಣಸಿ ಮುನ್ಸಿಪಲ್ ಕಾರ್ಪೋರೇಷನ್ ಅವರ ಅರೋಪವನ್ನು ನಿರಾಕರಿಸಿದೆ.
ಧ್ವಂಸಗೊಂಡಿರುವ ಮನೆಯ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅಖಿಲೇಶ್ ಯಾದವ್, ಶೆಹನಾಯಿ ನುಡಿಸದವರಿಂದ ಇನ್ನೇನು ನಿರೀಕ್ಷಿಸಬಹುದು? ಬಿಜೆಪಿ ಮತ್ತು ಅವರ ಸಂಕುಚಿತ ಮನಸ್ಸಿನ ಮಿತ್ರರು ಯಾವಾಗಲೂ ಕಲೆ ಮತ್ತು ಕಲಾವಿದರ ವಿರುದ್ಧವಾಗಿರುತ್ತಾರೆ. ಯಾಕಂದರೆ ಈ ಸಂಪ್ರದಾಯವಾದಿಗಳು ಸಂಕುಚಿತ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಕಾರಾತ್ಮಕ ಕಲೆಯು ದಯೆ ಮತ್ತು ಸಹಿಷ್ಣುತೆಯನ್ನು ಬೆಳೆಸುತ್ತದೆ. ಬಿಜೆಪಿ ಪ್ರತಿ ಕಲಾ ಪ್ರಕಾರವನ್ನೂ ತಮ್ಮ ಕಾರ್ಯಸೂಚಿಗೆ ಅಡ್ಡಿಯೆಂದು ಪರಿಗಣಿಸುತ್ತದೆ. ಮತ್ತು ತಮ್ಮ ಸ್ವಾರ್ಥ ಕಾರ್ಯಸೂಚಿಯನ್ನು ಮುಂದುವರಿಸಲು ಅವುಗಳನ್ನು ಬಳಸಿಕೊಳ್ಳುತ್ತದೆ. ಭಾರತ ರತ್ನ ಪುರಸ್ಕೃತರೊಬ್ಬರ ಸಾಂಸ್ಕೃತಿಕ ಪರಂಪರೆಯನ್ನು ನಾಶಪಡಿಸುವುದು, ಅವರ ಘನತೆ ಮತ್ತು ಗೌರವವನ್ನು ಮಾತ್ರವಲ್ಲದೆ, ಸ್ವತಃ ಭಾರತದ ಗೌರವವನ್ನೇ ನಾಶಪಡಿಸಿದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದ್ವೇಷದ ಬೆಂಕಿಯಲ್ಲಿ ದೇಶವನ್ನು ಸುಡುವ ಮೂಲಕ ಬಿಜೆಪಿ ದೇಶಕ್ಕೆ ಹಾನಿ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ನಂತರ, ಭಾರತ ರತ್ನ ಬಿಸ್ಮಿಲ್ಲಾ ಖಾನ್ ಅವರ ಸಂಗೀತ ಪರಂಪರೆಯನ್ನು ಸಂರಕ್ಷಿಸಲು 'ಶ್ರವಣ ಸಂಗ್ರಹಾಲಯ'ವನ್ನು ನಿರ್ಮಿಸುತ್ತೇವೆ. ಇದು ಅತ್ಯಂತ ಖಂಡನೀಯ! ಎಂದು ಬರೆದುಕೊಂಡಿದ್ದಾರೆ.
ಬಿಸ್ಲಿಲ್ಲಾ ಖಾನ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಅರೋಪಕ್ಕೆ ಪ್ರತಿಕ್ರಿಯಿಸಿರುವ ವಿಎಂಸಿ ಅಧಿಕಾರಿಗಳು, ಕಟ್ಟಡದ ಶಿಥಿಲಾವಸ್ಥೆಯ ಬಗ್ಗೆ ಕುಟುಂಬಕ್ಕೆ ನೋಟಿಸ್ ನೀಡಲಾಗಿತ್ತು. ಮತ್ತು ನವೀಕರಣಕ್ಕಾಗಿ ಕಟ್ಟಡದ ಒಂದು ಭಾಗವನ್ನು ಕೆಡವಲು ಕುಟುಂಬವೇ ಸ್ವತಃ ನಿರ್ಧರಿಸಿತ್ತು ಎಂದು ತಿಳಿಸಿದ್ದಾರೆ.
ನಗರದ ಗಣ್ಯ ವ್ಯಕ್ತಿಗಳ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ, ಅವರ ನಿವಾಸಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅವರ ಮನೆಯಲ್ಲಿನ ಒಂದು ಕೋಣೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಮೂಲಕ ಅವರನ್ನು ಗೌರವಿಸುವ ಯೋಜನೆಯೊಂದನ್ನು ಕಾರ್ಪೊರೇಷನ್ ಆರಂಭಿಸಿದೆ. ತಮ್ಮ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಕುಟುಂಬವು ಒಪ್ಪಿಗೆ ನೀಡದ ಕಾರಣ, ಈ ಕಟ್ಟಡವನ್ನು ಕೆಡುವ ಪ್ರಕ್ರಿಯೆಯಲ್ಲಿ ಕಾರ್ಪೊರೇಷನ್ಗೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).