ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಪೌರತ್ವ ಮತ್ತು ಮತದಾರರ ಪಟ್ಟಿಯ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. "ಸೋನಿಯಾ ಗಾಂಧಿ 1980ರಲ್ಲಿ ಭಾರತೀಯ ಪ್ರಜೆಯಾಗಿರಲಿಲ್ಲ, ಅವರು 1983ರಲ್ಲಿ ಭಾರತೀಯ ಪೌರತ್ವ ಪಡೆದರು" ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ.
ಪೌರತ್ವ ಸಿಗುವ ಮೊದಲೇ ಸೋನಿಯಾ ಗಾಂಧಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾದ ಪರಿಷ್ಕರಣಾ ಅರ್ಜಿಯ ವಿಚಾರಣೆಯ ವೇಳೆ, ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಪೊಲೀಸರು ಈ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕೇಂದ್ರ ಗೃಹ ಸಚಿವಾಲಯದ (MHA) ಮೂಲಕ ಈ ಎಲ್ಲಾ ವಿವರಗಳನ್ನು ಪರಿಶೀಲಿಸಲಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಚುನಾವಣಾ ಅಧಿಕಾರಿಯಿಂದ ಕೆಲವು ಪ್ರಮುಖ ದಾಖಲೆಗಳನ್ನು ಕೇಳಲಾಗಿದ್ದು, ಅವರ ಉತ್ತರಕ್ಕಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಪೂರ್ಣಗೊಳಿಸಲು ಪೊಲೀಸರಿಗೆ ನ್ಯಾಯಾಲಯ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.
ಸೋನಿಯಾ ಗಾಂಧಿ ಅವರ ವಿರುದ್ಧ ಸಲ್ಲಿಸಲಾಗಿರುವ ಈ ಅರ್ಜಿಯಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ.
3 ವರ್ಷ ಮೊದಲೇ ವೋಟರ್ ಲಿಸ್ಟ್ನಲ್ಲಿ ಹೆಸರು: ಸೋನಿಯಾ ಗಾಂಧಿ ಏಪ್ರಿಲ್ 30, 1983ರಂದು ಭಾರತೀಯ ಪೌರತ್ವ ಪಡೆದಿದ್ದಾರೆ. ಆದರೆ ಅದಕ್ಕೂ ಮೂರು ವರ್ಷ ಮೊದಲೇ, ಅಂದರೆ 1980ರ ನವದೆಹಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತು?
1982ರಲ್ಲಿ ಹೆಸರು ಡಿಲೀಟ್ ಆಗಿದ್ದೇಕೆ?: ಒಂದು ವೇಳೆ 1980ರಲ್ಲಿ ಸರಿಯಾಗಿಯೇ ಹೆಸರು ಸೇರಿಸಿದ್ದರೆ, 1982ರಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಏಕೆ ತೆಗೆದುಹಾಕಲಾಯಿತು?
ನಕಲಿ ದಾಖಲೆ ಬಳಕೆಯಾಗಿದೆಯೇ?: 1980ರ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಯಾವ ದಾಖಲೆಗಳನ್ನು ನೀಡಲಾಗಿತ್ತು? ಈ ಪ್ರಕ್ರಿಯೆಯಲ್ಲಿ ಏನಾದರೂ ನಕಲಿ ದಾಖಲೆಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಒಟ್ಟಿನಲ್ಲಿ, ದಶಕಗಳ ಹಳೆಯ ಈ ಮತದಾರರ ಪಟ್ಟಿ ವಿವಾದಕ್ಕೆ ದೆಹಲಿ ಪೊಲೀಸರ ವರದಿ ಹೊಸ ತಿರುವು ನೀಡಿದ್ದು, ಡಿಸೆಂಬರ್ 14ರ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ, (ಏಜೆನ್ಸೀಸ್).