ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ಸಮರ್ಪಣೆ: ಈ ನಿರ್ದಿಷ್ಟ ತೂಕದ ಹಿಂದಿರುವ ರಹಸ್ಯ ಬಿಚ್ಚಿಟ್ಟ ವರ್ಧಮಾನ್ ಜೈನ್! Tirumala Temple

Vardhaman Jain family donates gold ornaments weighing 121 kg, valued at Rs 207.6 crore, to Lord Sri Venkateswara of Tirumala.
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 207.6 ಕೋಟಿ ರೂ. ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನುಕಾಣಿಕೆ ನೀಡಿದ ವರ್ಧಮಾನ್ ಜೈನ್ ಕುಟುಂಬ
Published on: 

ತಿರುಮಲ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಚೆನ್ನೈ ಮೂಲದ ಉದ್ಯಮಿ ದಂಪತಿಗಳಾದ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ಗುರುವಾರ (ನ.26) ಶ್ರೀ ವೆಂಕಟೇಶ್ವರ ಸ್ವಾಮಿಗೆ ಬರೋಬ್ಬರಿ 121 ಕೆಜಿ ತೂಕದ, 207.6 ಕೋಟಿ ರೂಪಾಯಿ ಮೌಲ್ಯದ ವಜ್ರ ಮತ್ತು ರತ್ನಖಚಿತ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಈ ಐತಿಹಾಸಿಕ ಹಸ್ತಾಂತರ ನಡೆದಿದೆ. ಟಿಟಿಡಿ ದಾಖಲೆಗಳ ಪ್ರಕಾರ, ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ ತಿಮ್ಮಪ್ಪನಿಗೆ ಸಲ್ಲಿಕೆಯಾದ ಅತಿ ದೊಡ್ಡ ಆಭರಣ ಕಾಣಿಕೆ ಇದಾಗಿದೆ ಎಂದು ತಿಳಿದುಬಂದಿದೆ.

ತಲೆಯ ಮೇಲೆ ಚಿನ್ನ ಹೊತ್ತ ಸಿಎಂ ಮತ್ತು ದಾನಿಗಳು

ಆಭರಣಗಳನ್ನು ಅರ್ಪಿಸುವ ಮುನ್ನ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪತ್ನಿ ನಾರಾ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಂಗನಾಯಕಲ ಮಂಟಪದಲ್ಲಿ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಯಿತು.

ಅಲ್ಲಿಂದ ದಾನಿಗಳಾದ ವರ್ಧಮಾನ್ ಜೈನ್ ಕುಟುಂಬ ಮತ್ತು ಸ್ವತಃ ಸಿಎಂ ನಾಯ್ಡು ಅವರು ಚಿನ್ನಾಭರಣಗಳ ತಟ್ಟೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಗರ್ಭಗುಡಿಯಾದ ಆನಂದ ನಿಲಯದವರೆಗೆ ಮೆರವಣಿಗೆಯಲ್ಲಿ ಸಾಗಿ ದೇವರಿಗೆ ಸಮರ್ಪಿಸಿದರು.

Also Read
ಮಕರಕ್ಕೆ ರಾಹು, ಕರ್ಕಾಟಕಕ್ಕೆ ಕೇತು ಪ್ರವೇಶ: ಕೆಲಸದಲ್ಲಿ ಯಶಸ್ಸು, ಆದ್ರೆ ಸಂಸಾರದಲ್ಲಿ ತಳಮಳ? ಈ 6 ವಿಷಯಗಳ ಬಗ್ಗೆ ಇರಲಿ ಎಚ್ಚರ! Rahu Ketu Transit
Vardhaman Jain family donates gold ornaments weighing 121 kg, valued at Rs 207.6 crore, to Lord Sri Venkateswara of Tirumala.

121 ಕೆಜಿ ಹಿಂದಿರುವ ದೈವಿಕ ರಹಸ್ಯ

ಮಾಧ್ಯಮಗಳೊಂದಿಗೆ ಮಾತನಾಡಿದ ವರ್ಧಮಾನ್ ಜೈನ್, "2025ರ ಜನವರಿಯಲ್ಲಿ ನಮ್ಮ ಕಂಪನಿಯ ಷೇರುಗಳನ್ನು 6,000 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದ ಬಳಿಕ, 121 ಕೆಜಿ ಶುದ್ಧ ಚಿನ್ನ ನೀಡಲು ಟಿಟಿಡಿಯನ್ನು ಸಂಪರ್ಕಿಸಿದ್ದೆ. ನನಗೆ ತಿಳಿಯದೆಯೇ ನಾನು 121 ಕೆಜಿ ಆಯ್ಕೆ ಮಾಡಿದ್ದೆ. ಆಮೇಲೆ ತಿಳಿಯಿತು, ತಿಮ್ಮಪ್ಪ ಪ್ರತಿದಿನ ಧರಿಸುವ ಚಿನ್ನದ ತೂಕವೂ ನಿಖರವಾಗಿ 121 ಕೆಜಿಯೇ ಆಗಿದೆ ಎಂದು! ಇದೊಂದು ದೈವಿಕ ಸಂಕೇತ" ಎಂದರು. ಸಿಎಂ ನಾಯ್ಡು ಅವರ ಸಲಹೆಯಂತೆ ಕಚ್ಚಾ ಚಿನ್ನದ ಬದಲು 15 ತಿಂಗಳ ಕಾಲ ಶ್ರಮವಹಿಸಿ ಈ ಸುಂದರ ಆಭರಣಗಳನ್ನು ತಯಾರಿಸಲಾಗಿದೆ ಎಂದರು.

ಆಭರಣಗಳಲ್ಲಿ ಏನೆಲ್ಲಾ ಇವೆ?

ಚೆನ್ನೈನ ಆಕ್ಸೆಸ್ ಹೆಲ್ತ್‌ಕೇರ್ ಕಂಪನಿಯ ಸಹ-ಸ್ಥಾಪಕರಾದ ವರ್ಧಮಾನ್ ಜೈನ್, ಪತ್ನಿ ರಾಧಿಕಾ ಮತ್ತು ಸಹೋದರ ಅನುರಾಗ್ ಜೈನ್ ಕುಟುಂಬ ಈ ದೇಣಿಗೆ ನೀಡಿದೆ. ಒಟ್ಟು 121 ಕೆಜಿ ಚಿನ್ನದಲ್ಲಿ 106 ಕೆಜಿಯನ್ನು ತಿಮ್ಮಪ್ಪನ ಆಭರಣಗಳಿಗೆ ಬಳಸಲಾಗಿದ್ದು, ಉಳಿದ 15 ಕೆಜಿ ಶುದ್ಧ ಚಿನ್ನವನ್ನು ತಿರುಚನೂರಿನ ಪದ್ಮಾವತಿ ಅಮ್ಮನವರಿಗೆ ಚಿನ್ನದ ಸೀರೆ ತಯಾರಿಸಲು ನೀಡಲಾಗಿದೆ.

ಈ ಆಭರಣಗಳಲ್ಲಿ ವಜ್ರದ ಕಿರೀಟ, ಹುಲಿ ಉಗುರಿನ ಪೆಂಡೆಂಟ್, ಹಾರಗಳು, ಒಡ್ಯಾಣ, ಪಾದ ಕವಚ ಮತ್ತು ಕಾಲು ಸರಪಳಿಗಳು ಸೇರಿವೆ. ಇವುಗಳಲ್ಲಿ ಬರೋಬ್ಬರಿ 2,916.5 ಕ್ಯಾರೆಟ್ ತೂಕದ ಅಮೂಲ್ಯ ಹರಳುಗಳಿದ್ದು, 2,247.7 ಕ್ಯಾರೆಟ್ ನೀಲಮಣಿ, 238.2 ಕ್ಯಾರೆಟ್ ವಜ್ರ, 91.6 ಕ್ಯಾರೆಟ್ ಪುಷ್ಯರಾಗ ಹಾಗೂ 84.2 ಕ್ಯಾರೆಟ್ ಮಾಣಿಕ್ಯ ಮತ್ತು ಪಚ್ಚೆಗಳನ್ನು ಅಳವಡಿಸಲಾಗಿದೆ, (ಏಜೆನ್ಸೀಸ್​).