ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 2029ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ (KC Venugopal) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿಯಾಗುವುದು ಕೇವಲ ಅಣಕು ಸಂಸತ್ತಿನಲ್ಲಿ ಮಾತ್ರ ಸಾಧ್ಯ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ವೇಣುಗೋಪಾಲ್, ಈ ರಾಜಕೀಯ ಹೋರಾಟವು ಕೇವಲ ಅಧಿಕಾರ ಹಿಡಿಯುವುದಕ್ಕಾಗಿ ಅಲ್ಲ, ಬದಲಿಗೆ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದಕ್ಕಾಗಿ ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ವೇಣುಗೋಪಾಲ್, ಅಮಿತ್ ಶಾ ಅವರೇ, ಸ್ವಲ್ಪ ಸಮಯ ಕಾಯಿರಿ. ಬರೆದಿಟ್ಟುಕೊಳ್ಳಿ, ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲಿದ್ದಾರೆ. ಆಗ ಷಾ ಮತ್ತು ಮೋದಿ ಅವರ ಗತಿ ಏನಾಗಲಿದೆ ಎಂಬುದನ್ನು ಅವರು ಈಗಲೇ ಯೋಚಿಸುವುದು ಒಳಿತು. 2029ರವರೆಗೆ ಕಾಯಿರಿ. ದೇಶದ ಜನತೆಗೆ ರಾಹುಲ್ ಪ್ರಧಾನಿಯಾಗಬೇಕು ಎಂಬ ಆಸೆಯಿದೆ, ಆದರೆ ನಮ್ಮ ನಾಯಕರ ಹೋರಾಟ ಪ್ರಧಾನಿ ಹುದ್ದೆಗಾಗಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟವು ಕೇವಲ ಸರ್ಕಾರದ ಭಾಗವಾಗಲು ಬಯಸುತ್ತಿಲ್ಲ. ನಮ್ಮ ಮೂಲಭೂತ ಹೋರಾಟವೇ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು, ಸಾಮಾನ್ಯ ಜನರ ಮತದಾನದ ಹಕ್ಕುಗಳನ್ನು ಎತ್ತಿಹಿಡಿಯುವುದು ಮತ್ತು ಸಂವಿಧಾನವನ್ನು ರಕ್ಷಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಹಿಂಪಡೆಯಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟವು ಬೃಹತ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ವೇಣುಗೋಪಾಲ್ ಅವರ ಈ ಹೇಳಿಕೆ ಹೊರಬಿದ್ದಿದೆ. ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ಪಕ್ಷಗಳು ಭಾರತೀಯ ಬಿಜೆಪಿ ವಿರುದ್ಧ ಮತ ಕಳ್ಳತನ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿವೆ.
ಮುಂದಿನ ಕಾರ್ಯತಂತ್ರದ ಬಗ್ಗೆ ಮಾತನಾಡಿದ ವೇಣುಗೋಪಾಲ್, ಕಾಂಗ್ರೆಸ್ ಪಕ್ಷವು ತನ್ನ ಮೈತ್ರಿಕೂಟದ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ನಾವು ಅಧಿವೇಶನ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೆ, ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ಮುಂದುವರಿಸುವುದರ ಜೊತೆಗೆ, ರಾಜ್ಯಮಟ್ಟದಲ್ಲೂ ಈ ಅಭಿಯಾನವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಇಂಡಿಯಾ ಮೈತ್ರಿಕೂಟ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್).