ಪುಣೆ: ಜನವರಿ 28 ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ (Ajit Pawar Death) ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಈ ದುರಂತದ ಹಿಂದೆ ಸಂಚು ಇರಬಹುದು ಎಂದು ಅಜಿತ್ ದಾದಾ ಸಂಬಂಧಿ, ಶಾಸಕ ರೋಹಿತ್ ಪವಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ರೋಹಿತ್, ವಿಎಸ್ಆರ್ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರುತ್ತಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದ್ದು, ಈ ಸಂಸ್ಥೆಯ ವಿಮಾನಗಳಲ್ಲಿ ವಿವಿಐಪಿಗಳು ಪ್ರಯಾಣಿಸುತ್ತಾರೆ, ಹೀಗಿರುವಾಗ ಅವರ ಜೀವಕ್ಕೆ ಅಪಾಯವಿರುವುದು ಸ್ಪಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
ಜನವರಿ 28 ರಂದು ನಡೆದಿರುವ ಘಟನೆ ಅತ್ಯಂತ ದುರದೃಷ್ಟಕರ, ನಾವು ನಮ್ಮ ನಾಯಕನನ್ನು ಕಳೆದುಕೊಂಡಿದ್ದೇವೆ, ಕುಟುಂಬ ಮತ್ತು ಮಹಾರಾಷ್ಟ್ರದ ಜನರು ಸಂಪೂರ್ಣ ತನಿಖೆಗೆ ಒತ್ತಾಯಿಸುತ್ತಿದ್ದು, ವಿಎಸ್ಆರ್ ಪಾತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಜನವರಿ 27 ರಂದು ನಡೆದ ಘಟನೆಗಳು ಸೇರಿದಂತೆ ಅಪರಾಧದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ರೋಹಿತ್ ಪವಾರ್ರ ಹಿಂದಿನ ಆರೋಪಗಳೇನು..?
ಮುಂಬೈನಲ್ಲಿ ಮಾತನಾಡಿದ ಶಾಸಕ ಪವಾರ್, ವಿಮಾನದ ಇಂಧನ ಟ್ಯಾಂಕ್ ತುಂಬಿತ್ತು ಎಂದು ವರದಿಗಳು ಹೇಳಿವೆ. ಹೀಗಿದ್ದಾಗ ಇಂಧನವನ್ನು ಸಾಗಿಸುವ ಕಾರ್ಯಾಚರಣೆಯ ಅವಶ್ಯಕತೆ ಇರಲಿಲ್ಲ, ಅಗತ್ಯವಿದ್ದರೆ ಹೈದರಾಬಾದ್‌ನಲ್ಲಿ ಇಂಧನ ತುಂಬಿಸಬಹುದಿತ್ತು ಎಂದರು.
ಕಳಪೆ ಗೋಚರತೆಯ ಹೊರತಾಗಿಯೂ ವಿಮಾನ ಕಾರ್ಯನಿರ್ವಹಿಸಿದ್ದು ಏಕೆ ಎಂಬುದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿರುವ ರೋಹಿತ್, ಇಂತಹ ಪರಿಸ್ಥಿತಿಗಳಲ್ಲಿ ಹಾರಾಟ ನಡೆಸುವ ಅಗತ್ಯವಿರಲ್ಲ, ಪರ್ಯಾಯ ಲ್ಯಾಂಡಿಂಗ್ ಆಯ್ಕೆಗಳು ಸೀಮಿತವಾಗಿದ್ದು, ವಿಮಾನವು ಮುಂದುವರಿಯುವ ಬದಲು ಮುಂಬೈಗೆ ಹಿಂತಿರುಗಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಇಂಧನದೊಂದಿಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಉರುಳಿಸಲಾಗಿದೆ ಎಂದು ಆರೋಪಿಸಿರುವ ಎನ್‌ಸಿಪಿ ಶಾಸಕ, ಘಟನೆಯಲ್ಲಿ ಪೈಲಟ್ನ್ನು ಬಳಸಿಕೊಂಡಿರಬಹುದು ಎಂದು ಹೇಳಿದರು.
ರೋಹಿತ್ ಪವಾರ್ ಆರೋಪಗಳಿಗೆ ಸುಪ್ರಿಯಾ ಸುಳೆ ಬೆಂಬಲ
ಅಜಿತ್ ಪವಾರ್ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಮಾಡಿರುವ ಆರೋಪಗಳನ್ನು ಸಂಸದೆ ಸುಪ್ರಿಯಾ ಸುಳೆ ಬೆಂಬಲಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಘಟನೆಯಿಂದ ಇಡೀ ರಾಜ್ಯಕ್ಕೆ ಆಘಾತವಾಗಿದೆ, ರೋಹಿತ್ ಪವಾರ್ ಅನೇಕ ನಂಬಲಾರ್ಹ ಸಂಗತಿಗಳನ್ನು ಬಹಿರಂಗಪಡಿಸಿದ್ದು, ಅವುಗಳ ಕುರಿತಾಗಿ ತನಿಖೆ ಮಾಡಬೇಕಾಗಿದೆ ಎಂದು ಸುಳೆ ಒತ್ತಾಯಿಸಿದ್ದಾರೆ.
ಸಿಬಿಐ ತನಿಖೆಗೆ ಸುನೇತ್ರಾ ಪವಾರ್ ಆಗ್ರಹ
ಅಜಿತ್ ಪವಾರ್ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವಹಿಸಬೇಕೆಂದು ಡಿಸಿಎಂ ಸುನೇತ್ರಾ ಪವಾರ್ ನೇತೃತ್ವದ ಎನ್‌ಸಿಪಿ ನಿಯೋಗ ಒತ್ತಾಯಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರನ್ನು ಭೇಟಿ ಮಾಡಿದ್ದ ಈ ನಿಯೋಗ, ಘಟನೆಯ ಸಮಗ್ರ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.
ಸಿಎಂ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್‌ಸಿಪಿ (ಅಜಿತ್ ಪವಾರ್ ಬಣ) ಅಧ್ಯಕ್ಷ ಸುನಿಲ್ ತತ್ಕರೆ, ಘಟನೆಯ ಸಂಪೂರ್ಣ ತನಿಖೆಯನ್ನು ಸಿಬಿಐಗೆ ನೀಡುವಂತೆ ನಾವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಪತ್ರ ಬರೆದು, ಸಿಬಿಐ ತನಿಖೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು(ಏಜೆನ್ಸೀಸ್).