ಮುಂಬೈ: 'ವಿಮಲ್ ಇಲೈಚಿ' ಜಾಹೀರಾತುಗಳಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ ನೀಡಿದ ಶೋ-ಕಾಸ್ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟ ಅಜಯ್ ದೇವಗನ್ ಬಾಂಬೆ ಹೈಕೋರ್ಟ್ಗೆ ಮೆಟ್ಟಿಲೇರಿದ್ದಾರೆ. ಮತ್ತು ಸಂಸ್ಥೆಯ ಕ್ರಮವು ಏಕಪಕ್ಷೀಯ ಮತ್ತು ಅನಿಯಂತ್ರಿತವಾಗಿದೆ ಎಂದಿದ್ದಾರೆ.
ಮುಖ್ಯ ನ್ಯಾ. ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾ. ಅದ್ವೈತ್ ಸೇಠ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠವು ನವೆಂಬರ್ 4ರಂದು ದೇವಗನ್ ಅವರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ನಟ ಅಜಯ್ ದೇವಗನ್, ವಿಮಲ್ ಇಲೈಚಿ ತಯಾರಕ ಕಂಪನಿಗೆ ನೋಟಿಸ್ ನೀಡುವ ಬದಲು, ನಟನಾದ ತನಗೆ ಈ ನೋಟಿಸ್ ಅನ್ನು ಯಾವುದೇ ಆಧಾರವಿಲ್ಲದೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ದೇವಗನ್ ಅವರಿಗೆ ಎಫ್ಡಿಎ ನೀಡಿರುವ ನೋಟಿಸ್ ಪ್ರಕಾರ, 'ವಿಮಲ್ ಇಲೈಚಿ' ಜಾಹೀರಾತುಗಳು, ಮಹಾರಾಷ್ಟ್ರದಲ್ಲಿ ನಿಷೇಧಿಸಲ್ಪಟ್ಟಿರುವ 'ವಿಮಲ್ ಪಾನ್ ಮಸಾಲ' ಎಂಬ ಅಗಿಯುವ ಉತ್ಪನ್ನದ ಪರೋಕ್ಷ ಪ್ರಚಾರಕ್ಕೆ ಸಮನಾಗಿವೆ ಎಂದು ಹೇಳಿದೆ. ಮತ್ತು ಇದೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ನಟರಾದ ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೂ ಇದೇ ರೀತಿಯ ನೋಟಿಸ್ಗಳನ್ನು ನೀಡಿದೆ.
ಈ ಕುರಿತು ಶುಕ್ರವಾರ(ಅ. 30) ಮಾತನಾಡಿರುವ ಎಫ್ಡಿಎ ಆಯುಕ್ತ ತುಕಾರಾಂ ಮುಂಡೆ, ರಾಜ್ಯದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಖಾನ್, ದೇವಗನ್ ಮತ್ತು ಶ್ರಾಫ್ ವಿರುದ್ಧದ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಇಲಾಖೆಯು ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದು, ನಟರಿಂದ ಉಲ್ಲಂಘನೆಗಳು ಕಂಡುಬಂದಿವೆ. ಮುಂದಿನ ವಾರ ಈ ವಿಷಯ ವಿಚಾರಣೆಗೆ ಉಲ್ಲೇಖಿಸಲಾಗುವುದು. ದೇವಗನ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರೂ, ಇಲಾಖೆ ಜಂಟಿ ಆಯುಕ್ತರ ಮುಂದೆ ತನ್ನ ವಿಚಾರಣೆಯನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).